
ಬೆಂಗಳೂರು: ದೀಪಾವಳಿ ಹಬ್ಬದ ಸಡಗರದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಭಾನುವಾರ ರಾತ್ರಿ ಸಾರ್ವಜನಿಕರು ಸಿಡಿಸಿದ ಪಟಾಕಿಗಳ ಹೊಗೆಯಿಂದಾಗಿ ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) ಶನಿವಾರ ದಾಖಲಾಗಿದ್ದ 53 ರಿಂದ ಸೋಮವಾರದ ವೇಳೆಗೆ 129 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನ ವಾಯು ಸ್ಥಿತಿಗತಿ ತೀವ್ರ ಕುಸಿದಂತಾಗಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟವು 370 ರ ಗಡಿ ದಾಟಿ ಅಪಾಯಕಾರಿ ಸ್ಥಿತಿಯಲ್ಲಿದ್ದರೆ, ಅದಕ್ಕೆ ಹೋಲಿಸಿದರೆ ಬೆಂಗಳೂರಿನ ಸ್ಥಿತಿ ಕೊಂಚ ಸಮಾಧಾನಕರವಾಗಿದೆ. ಆದರೆ, 2025 ರ ದೀಪಾವಳಿ ಆಚರಣೆಯ ಸಮಯಕ್ಕೆ ಹೋಲಿಸಿದರೆ ಈ ಬಾರಿ ಮಾಲಿನ್ಯ ಪ್ರಮಾಣ ಶೇ 25 ರಷ್ಟು ಅಧಿಕವಾಗಿದೆ. ಕಳೆದ ವರ್ಷ ಹಬ್ಬದ ಮೊದಲ ದಿನದಂದು ನಗರದ AQI 82 (ತೃಪ್ತಿದಾಯಕ) ಇತ್ತು. ಈ ವರ್ಷ ಭಾನುವಾರ ಮಧ್ಯರಾತ್ರಿಯ ವೇಳೆಗೆ ಅದು 102 ಕ್ಕೆ ಏರಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶಗಳ ಪ್ರಕಾರ, ನವೆಂಬರ್ ಮೊದಲ ವಾರದಲ್ಲಿ ನಗರದ ವಾಯು ಗುಣಮಟ್ಟ 53 ರಿಂದ 74 ರ ಆಸುಪಾಸಿನಲ್ಲಿದ್ದು ಸ್ಥಿರವಾಗಿತ್ತು. ಆದರೆ ಭಾನುವಾರ ರಾತ್ರಿ ಪಟಾಕಿ ಸಿಡಿಸಲು ನೀಡಲಾಗಿದ್ದ ನಿಗದಿತ ಸಮಯ ಪ್ರಾರಂಭವಾದಾಗ 74 ರಷ್ಟಿದ್ದ AQI, ರಾತ್ರಿ 10 ಗಂಟೆಗೆ 85 ಕ್ಕೆ ಮತ್ತು ಮಧ್ಯರಾತ್ರಿ 12 ಗಂಟೆಗೆ 102 ರ ಗಡಿ ದಾಟಿತು. ಸೋಮವಾರ ಮಧ್ಯಾಹ್ನದ ವೇಳೆಗೆ ಇದು 133 ರವರೆಗೆ ತಲುಪಿತು.
ಸೋಮವಾರ ಬೆಳಿಗ್ಗೆ ಸಿಪಿಸಿಬಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ನಗರದ ಕೆಲ ಪ್ರಮುಖ ಪ್ರದೇಶಗಳಲ್ಲಿ ಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿತ್ತು. ಮೆಜೆಸ್ಟಿಕ್ ನಲ್ಲಿ ನಗರದಲ್ಲೇ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಇಲ್ಲಿದ್ದು, AQI 228 ದಾಖಲಾಗಿದೆ. PM10 ಕಣಗಳ ಪ್ರಮಾಣ ಹೆಚ್ಚಾಗಿದ್ದರಿಂದ ಈ ಪ್ರದೇಶವನ್ನು ಕಳಪೆ ವರ್ಗಕ್ಕೆ ಸೇರಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ PM2.5 ಪ್ರಮಾಣದ ಆಧಾರದ ಮೇಲೆ AQI 152 ರಷ್ಟಿತ್ತು. ಹೊಂಬೇಗೌಡನಗರದಲ್ಲಿ AQI 139 ದಾಖಲಾಗಿದೆ. ಜಯನಗರ 5 ನೇ ಬ್ಲಾಕ್ ನಲ್ಲಿ AQI 135 ನಷ್ಟಿತ್ತು. ಹೆಬ್ಬಾಳ ಸಂಚಾರ ಕಾರಿಡಾರ್ ನಲ್ಲಿ AQI 121 ವರದಿಯಾಗಿದೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಹಾಗೂ ವಾಯು ಮಾಲಿನ್ಯ ತಜ್ಞೆ ಡಾ. ಮನೀಷಾ ಮಿಶ್ರಾ ಮಾತನಾಡಿ, "ಪಟಾಕಿ ಮತ್ತು ದಹನಕಾರಿ ವಸ್ತುಗಳಿಂದ ಬಿಡುಗಡೆಯಾಗುವ ಸೂಕ್ಷ್ಮ ಧೂಳಿನ ಕಣಗಳು ಮಾನವನ ಶ್ವಾಸಕೋಶಕ್ಕೆ ನೇರ ಹಾನಿ ಉಂಟುಮಾಡುತ್ತವೆ. ವಿಶೇಶವಾಗಿ ಜನನಿಬಿಡ ಸಂಚಾರ ಮಾರ್ಗಗಳಲ್ಲಿ ಓಡಾಡುವವರಿಗೆ ಹಾಗೂ ವಾಸಿಸುವವರಿಗೆ ಇದರಿಂದ ಹೆಚ್ಚಿನ ಆರೋಗ್ಯ ತೊಂದರೆಗಳು ಎದುರಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿ, "2025 ರಲ್ಲಿ ಹಬ್ಬದ ಸಮಯದಲ್ಲಿ ಮಳೆಯಾಗಿದ್ದರಿಂದ ಮತ್ತು ಸಾರ್ವಜನಿಕರು ಕಡಿಮೆ ಪಟಾಕಿ ಬಳಸಿದ್ದರಿಂದ ಮಾಲಿನ್ಯ ಕಡಿಮೆಯಿತ್ತು. ನಿಯಮ ಮೀರಿದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು" ಎಂದಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷ ಬಿ. ಶಿವಣ್ಣ ಅವರು ಮಾತನಾಡಿ, "ಪಟಾಕಿಗಳ ಮೇಲೆ ತೀವ್ರ ನಿರ್ಬಂಧ ಹೇರಿದರೆ ಸಾರ್ವಜನಿಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ವಾದಿಸುತ್ತಾರೆ. ಜಲ ಮಾಲಿನ್ಯದಂತೆ ನಿರ್ದಿಷ್ಟ ಮಾಲಿನ್ಯಕಾರಕಗಳನ್ನು ಪತ್ತೆಹಚ್ಚಲು ಇಲ್ಲಿ ಸಾಧ್ಯವಿಲ್ಲ; ಏಕೆಂದರೆ ಇಡೀ ನಗರವೇ ಪಟಾಕಿ ಸಿಡಿಸುವುದರಿಂದ ಯಾವುದೇ ಒಬ್ಬ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.