ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಗುಂಡ್ಲುಪೇಟೆ ಕಾಡಿನಲ್ಲಿ ಭೀಕರ ಹತ್ಯೆ

Published : Mar 11, 2026, 10:28 PM IST
Chamarajanagar Crime News

ಸಾರಾಂಶ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೂಕಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬ ಯುವಕನನ್ನು ಕುತ್ತಿಗೆ ಕುಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ. ದೊಡ್ಡಕೆರೆ ಏರಿ ಬಳಿ ಶವ ಪತ್ತೆಯಾಗಿದೆ.

ಚಾಮರಾಜನಗರ (ಮಾ.11): ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಹತ್ಯೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕುತ್ತಿಗೆ ಕುಯ್ದು ಭೀಕರವಾಗಿ ಹತ್ಯೆ ಮಾಡಿದ್ದು, ಈ ಘಟನೆ ಇಡೀ ಪಟ್ಟಣವನ್ನು ಬೆಚ್ಚಿಬೀಳಿಸಿದೆ.

ಏನಿದು ಘಟನೆ?

ಗುಂಡ್ಲುಪೇಟೆ ಪಟ್ಟಣದ ಅಮಾನಿಕೆರೆ (ದೊಡ್ಡಕೆರೆ) ಏರಿ ಮಾರ್ಗದಲ್ಲಿ ಇಂದು ಯುವಕನ ಶವವೊಂದು ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಹಂತಕರು ಯುವಕನ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕುಯ್ದು ಪರಾರಿಯಾಗಿದ್ದಾರೆ. ಮೃತ ಯುವಕನನ್ನು ತಾಲೂಕಿನ ಮೂಕಹಳ್ಳಿ ಗ್ರಾಮದ ನಂಜುಂಡಸ್ವಾಮಿ (24) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ:

ಹತ್ಯೆಯಾದ ನಂಜುಂಡಸ್ವಾಮಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಊರಿಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುತ್ತಗಟ್ಟಿವೆ. ಶವ ಬಿದ್ದಿದ್ದ ಸ್ಥಳದ ಸಮೀಪದಲ್ಲೇ ನಂಜುಂಡಸ್ವಾಮಿ ಅವರ ಬೈಕ್ ಕೂಡ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ನಂಜುಂಡಸ್ವಾಮಿ ಅವರ ಶವ ಬಿದ್ದಿದ್ದ ರೀತಿ ಮತ್ತು ಕುತ್ತಿಗೆಗೆ ಬಿದ್ದಿರುವ ಗಾಯಗಳನ್ನು ನೋಡಿದರೆ, ಇದು ಪೂರ್ವನಿಯೋಜಿತ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ. ಯಾರೋ ಆತ್ಮೀಯರೇ ಕರೆದೊಯ್ದು ಈ ಕೃತ್ಯ ಎಸಗಿದ್ದಾರೆಯೇ ಅಥವಾ ಬೇರೆನಾದರೂ ದ್ವೇಷವಿತ್ತೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ. ಜನನಿಬಿಡ ಪ್ರದೇಶವಾದ ಕೆರೆಯ ಏರಿ ಮಾರ್ಗದಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪೊಲೀಸರ ಭೇಟಿ ಮತ್ತು ತನಿಖೆ:

ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿದ್ದ ಕುರುಹುಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಯುವಕನ ಅಕಾಲಿಕ ಮರಣದಿಂದ ಮೂಕಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಹಂತಕರನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಈದ್ಗಾ ಜಮೀನಲ್ಲಿ ಕಲ್ಲು ಬ್ಲಾಸ್ಟ್; ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಬಿತ್ತೆಂದು ಮನೆಯಿಂದ ಓಡಿಬಂದ ಮಹಿಳೆಯರು!
ಸಿಕ್ಕಿದ್ದೇ ಚಾನ್ಸ್‌, ಗ್ಯಾಸ್‌ ವಿಚಾರ ಇಟ್ಕೊಂಡು ಹಗಲು ದರೋಡೆಗೆ ಇಳಿದ ಬೆಂಗಳೂರು ಹೋಟೆಲ್‌ಗಳು!