ನಾನೂ ಮೂಲ ಕಾಂಗ್ರೆಸ್ಸಿಗ, ಮನೆತನವನ್ನೇ ತೆಗೆದುಬಿಟ್ಟರು; ಸೌದೆ ಒಲೆ ಟೀ ಕೊಟ್ಟ ಕೈ ಕಾರ್ಯಕರ್ತೆಗೆ ವ್ಯಾಪಾರಿ ತರಾಟೆ!

Published : Mar 11, 2026, 08:02 PM IST
Shivamogga Congress Protest Viral Video

ಸಾರಾಂಶ

ಶಿವಮೊಗ್ಗದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಹೂವಿನ ವ್ಯಾಪಾರಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಬೆಲೆ ಏರಿಕೆಗೆ ಕಾರಣ ಎಂದು ಆರೋಪಿಸಿ, ಕಾರ್ಯಕರ್ತೆಯರಿಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ (ಮಾ.11): ಕೇಂದ್ರ ಸರ್ಕಾರದ ವಿರುದ್ಧ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಗೆ ಶಿವಮೊಗ್ಗದ ಹೂವಿನ ವ್ಯಾಪಾರಿಯೊಬ್ಬರು ಅಕ್ಷರಶಃ ಬೆಂಡೆತ್ತಿದ್ದಾರೆ. 'ನಿಮ್ಮ ಕಾಂಗ್ರೆಸ್ ತೊಲಗುವವರೆಗೂ ಈ ದೇಶ ಉದ್ದಾರ ಆಗಲ್ಲ' ಎಂದು ಹೇಳುವ ಮೂಲಕ ಹೂವಿನ ವ್ಯಾಪಾರಿ ಕಾಂಗ್ರೆಸ್ಸಿಗರಿಗೆ ಮುಖಭಂಗ ಮಾಡಿದ ಘಟನೆ ನಗರದ ಶಿವಪ್ಪ ನಾಯಕ ಹೂವಿನ ಮಾರ್ಕೆಟ್ ಬಳಿ ನಡೆದಿದೆ.

ಏನಿದು ಘಟನೆ?

ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗದಲ್ಲಿ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರು. ಗ್ಯಾಸ್ ಸಿಲಿಂಡರ್‌ಗೆ ಹೂವಿನ ಹಾರ ಹಾಕಿ, ಪಕ್ಕದಲ್ಲೇ ಸೌದೆ ಒಲೆ ಹಚ್ಚಿ ಟೀ ಕುದಿಸಿ ಸಾರ್ವಜನಿಕರಿಗೆ ವಿತರಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಾರ್ವಜನಿಕರಿಗೆ ಟೀ ವಿತರಿಸುತ್ತಾ ಹೂವಿನ ಮಾರ್ಕೆಟ್‌ನ ವ್ಯಾಪಾರಿ ಸುನಿಲ್ ಎಂಬುವವರ ಬಳಿ ಹೋದಾಗ ಅಸಲಿ ಹೈಡ್ರಾಮಾ ಶುರುವಾಗಿದೆ.

2000 ರೂಪಾಯಿ ಕೊಟ್ಟು ಹಾಳು ಮಾಡಿದ್ದೀರಾ!

ಕಾರ್ಯಕರ್ತರು ಟೀ ಕುಡಿಯುವಂತೆ ಸುನಿಲ್ ಅವರಿಗೆ ಆಹ್ವಾನ ನೀಡಿದರು. ಆದರೆ ಈ ಆಹ್ವಾನವನ್ನು ತಿರಸ್ಕರಿಸಿದ ಸುನಿಲ್, 'ಗ್ಯಾಸ್ ಬೆಲೆ ಏರಿಕೆಗೆ ನಿಮ್ಮ ಕಾಂಗ್ರೆಸ್ ಸರ್ಕಾರವೇ 100% ಕಾರಣ' ಎಂದು ಗುಡುಗಿದರು. ಈ ವೇಳೆ ಕಾರ್ಯಕರ್ತೆಯರು 'ನಾವು ಹೆಣ್ಣು ಮಕ್ಕಳಿಗೆ 2000 ರೂಪಾಯಿ (ಗೃಹಲಕ್ಷ್ಮಿ) ನೀಡುತ್ತಿದ್ದೇವೆ, ಇದರಿಂದ ಅನುಕೂಲ ಆಗಿಲ್ಲವೇ?' ಎಂದು ಪ್ರಶ್ನಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುನಿಲ್, 'ನೀವು ಆ 2000 ರೂಪಾಯಿ ಕೊಟ್ಟು ಈಗಾಗಲೇ ಎಲ್ಲವನ್ನೂ ಹಾಳು ಮಾಡಿದ್ದೀರಾ' ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ತೊಲಗಬೇಕು ಎಂದು ಆಕ್ರೋಶ:

'ನಾನು ಮೂಲತಃ ಕಾಂಗ್ರೆಸ್ಸಿಗನೇ, ಆದರೆ ಈಗಿನ ಪರಿಸ್ಥಿತಿ ನೋಡಿದರೆ ಕಾಂಗ್ರೆಸ್‌ನಿಂದಲೇ ಬೆಲೆ ಏರಿಕೆಯಾಗುತ್ತಿದೆ ಎನಿಸುತ್ತಿದೆ. ಬಡವರಿಗೆ ಅಕ್ಕಿ ಕೊಡುತ್ತೇವೆ ಎಂದಿರಿ, ಇದ್ದ ಅಕ್ಕಿಯನ್ನೂ ಕಿತ್ತುಕೊಂಡಿರಿ. ಈಗಿನ ಪರಿಸ್ಥಿತಿಯಲ್ಲಿ ಬಡವರು ಎಲ್ಲಿದ್ದಾರೆ?' ಎಂದು ಸುನಿಲ್ ಪ್ರಶ್ನಿಸಿದರು. ಕಾರ್ಯಕರ್ತೆಯರು "ಈ 2000 ರೂಪಾಯಿಯಿಂದ ಶಾಲೆ ಫೀಸ್ ಕಟ್ಟಲು, ಆಟೋ ಬಾಡಿಗೆಗೆ ಅನುಕೂಲ ಆಗುತ್ತಿದೆಯಲ್ಲವೇ?" ಎಂದು ಸಮರ್ಥಿಸಿಕೊಳ್ಳಲು ಮುಂದಾದಾಗ ಸುನಿಲ್ ಮತ್ತಷ್ಟು ಕೆಂಡಾಮಂಡಲವಾದರು.

 

 

'ಕಾಂಗ್ರೆಸ್ಸಿಗರು ಮನೆತನವನ್ನೇ ತೆಗೆದುಹಾಕಿದರು, ಜನರ ಜೀವನವನ್ನೇ ಹಾಳು ಮಾಡಿದರು. ಈ ಕಾಂಗ್ರೆಸ್ ಪಕ್ಷ ದೇಶದಿಂದ ತೊಲಗುವವರೆಗೂ ಭಾರತ ಉದ್ದಾರ ಆಗಲು ಸಾಧ್ಯವೇ ಇಲ್ಲ. ಇದು ಶತಸಿದ್ಧ, 100% ಸತ್ಯ' ಎಂದು ಸುನಿಲ್ ಸಾರ್ವಜನಿಕವಾಗಿ ಜೋರು ಧ್ವನಿಯಲ್ಲಿ ಮಾತನಾಡಿದರು.

ನಿಬ್ಬೆರಗಾದ ಕಾರ್ಯಕರ್ತರು:

ಪ್ರತಿಭಟನೆ ನಡೆಸಿ ಪಬ್ಲಿಸಿಟಿ ಪಡೆಯಲು ಮುಂದಾಗಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಹೂವಿನ ವ್ಯಾಪಾರಿಯ ಈ ಆಕ್ರೋಶದ ನುಡಿಗಳನ್ನು ಕೇಳಿ ಒಂದು ಕ್ಷಣ ಅವಕ್ಕಾದರು. ಸಾರ್ವಜನಿಕರ ಬೆಂಬಲ ಸಿಗಬಹುದು ಎಂದು ನಿರೀಕ್ಷಿಸಿದ್ದ ಅವರಿಗೆ, ಒಬ್ಬ ಸಾಮಾನ್ಯ ವ್ಯಾಪಾರಿಯಿಂದಲೇ ಈ ಮಟ್ಟದ ವಿರೋಧ ವ್ಯಕ್ತವಾಗಿದ್ದು ಈಗ ಶಿವಮೊಗ್ಗದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

PREV
Read more Articles on
click me!

Recommended Stories

ವಿದೇಶದಲ್ಲಿ ನೆಲೆಸಿರುವವರ ಬೆಂಗಳೂರು ಮನೆಯಿಂದ 3 ಕೋಟಿ ಮೌಲ್ಯದ ವಜ್ರಾಭರಣ ಕದ್ದ 19ರ ಯುವಕ, ಅಮೆರಿಕದಿಂದಲೇ ಕಳ್ಳತನ ನೋಡಿದ ಮಾಲೀಕ!
ಮಿತ್ತಲ್ ಕೈಗಾರಿಕೆಗೆ ಕೊಟ್ಟ ಭೂಮಿಯನ್ನ ಜಿಂದಾಲ್‌ ಕಂಪನಿಗೆ ಪರಭಾರೆ ಮಾಡಿದ ಸರ್ಕಾರ; ಬಳ್ಳಾರಿ ರೈತರಿಂದ ಹೋರಾಟ!