ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ ಚುನಾವಣಾಧಿಕಾರಿ, ಶವಾಗಾರದಲ್ಲಿ ಎದ್ದುಕೂತ!

By Sathish Kumar KH  |  First Published Apr 18, 2023, 5:39 PM IST

ಚುನಾವಣಾ ತರಬೇತಿ ವೇಳೆ ಹೃದಯಾಘಾತ ಸಂಭವಿಸಿ ಕುಸಿಬಿದ್ದ ನೌಕರ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ನಂತರ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ವೇಳೆ ನೌಕರ ಎದ್ದು ಕೂತಿದ್ದಾರೆ.


ಚಾಮರಾಜನಗರ (ಏ.18): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ತರಬೇತಿ ಪಡೆಯುತ್ತಿದ್ದ ಸರ್ಕಾರಿ ನೌಕರ ಸಾವನ್ನಪ್ಪಿದ್ದಾರೆಂದು ವೈದ್ಯರು ಘೋಷಣೆ ಮಾಡಿದ್ದರು. ಆದರೆ, ಆ ನೌಕರನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯವಾಗ ದೇಹದ ಕೈ-ಕಾಲುಗಳನ್ನು ಅಲುಗಾಡಿಸಿದ್ದು, ಕೂಡಲೇ ಆಸ್ಪತ್ರೆ ಸಿಬ್ಬಂದಿ ಅವರನ್ನು ಎದ್ದು ಕೂರಿಸಿ ಜೀವಂತವಾಗಿರುವುದನ್ನು ಕಂಡು ಮರಳಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ.

ಸರ್ಕಾರಿ ಖಜಾನೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಜಗದೀಶ್ (40) ಅವರು ಇಂದು ಬೆಳಗ್ಗೆ ಚಾಮರಾಜನಗರ ಜಿಲ್ಲೆ ಹನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಹಾಜರಾಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ಇವರನ್ನು ಪಟ್ಟಣದ ಕಾಮಗೆರೆ ಆಸ್ಪತ್ರೆಗೆ ಕೊಂಡೋಯ್ದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ಆಸ್ಪತ್ರೆ ವೈದ್ಯರು ಘೋಷಣೆ ಮಾಡಿದ್ದಾರೆ. ನಂತರ ಜಗದೀಶ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೋಯ್ದಾಗ ಅಚ್ಚರಿ ಎಂಬಂತೆ ಅವರು ಬದುಕಿರುವುದು ತಿಳಿದುಬಂದಿದೆ.

Tap to resize

Latest Videos

undefined

ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸೊಲ್ಲ: ಸವಾಲಿಗೆ ಮುನ್ನವೇ ಹೆದರಿದರೇ ಕುಮಾರಣ್ಣ!

ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರಿಗೆ ರವಾನೆ: ಇನ್ನು ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದ ನೌಕರ ಜೀವಂತ ಜಗದೀಶ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೋಯ್ದಾಗ ಶವಾಗಾರದಲ್ಲಿ ಕೈಕಾಲು ಆಡಿಸುತ್ತಿದ್ದನ್ನು ಆಸ್ಪತ್ರೆ ಸಿಬ್ಬಂದಿ ಗಮನಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಮತ್ತು ನೌಕರನ ಕುಟುಂಬಸ್ಥರು ಜಗದೀಶ್‌ ಬದುಕಿದ್ದಾರೆ ಎಂಬುದನ್ನು ಗಮನಿಸಿ ಶವಾಗಾರದಿಂದ ಪುನಃ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ತಕ್ಷಣ ಸರ್ಕಾರಿ ಆಸ್ಪತ್ರೆ ವೈದ್ಯರು ನೌಕರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. 

ದಾವಣಗೆರೆಯಲ್ಲಿಯೂ ಚುನಾವಣಾ ತರಬೇತಿ ವೇಳೆ ಶಿಕ್ಷಕ ಸಾವು: ಕಳೆದ ವಾರ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಚುನಾವಣಾ ತರಬೇತಿಯಲ್ಲಿದ್ದಾಗ ಹೃದಯಾಘಾತದಿಂದ ಶಿಕ್ಷಕ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಶ್ರೀನಿವಾಸ್ (41) ಸಾವನ್ನಪ್ಪಿದ ಇಂಗ್ಲಿಷ್ ಶಿಕ್ಷಕ. ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ವಿಜಯ್ ಪ್ರೌಡಶಾಲೆ ಯಲ್ಲಿ 2009 ರಿಂದ ಸೇವೆ ಸಲ್ಲಿಸುತ್ತಿದ್ದರು. ಆದರೆ, ಚನ್ನಗಿರಿಯಲ್ಲಿ ಚುನಾವಣಾ ತರಬೇತಿ ಪಡೆಯುತ್ತಿರುವಾಗ ಹೃದಯಾಘಾತ ಸಂಭವಿಸಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದರು.

ಚಾಮರಾಜನಗರ ಜಿಲ್ಲೆಯಲ್ಲಿ 32 ನಾಮಪತ್ರ ಸಲ್ಲಿಕೆ:ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೂರನೇ  ದಿನವಾದ ಸೋಮವಾರ ಜಿಲ್ಲೆಯಲ್ಲಿ 24 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆಯಾಗಿವೆ. ಹನೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ. ಪ್ರೀತನ್. ಕೆ.ಎನ್, ಜಾತ್ಯಾತೀತ ಜನತಾ ದಳ ಅಭ್ಯರ್ಥಿಯಾಗಿ ಎಂ.ಆರ್. ಮಂಜುನಾಥ್, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿಯಾಗಿ ಎನ್. ಪ್ರದೀಪ್ ಕುಮಾರ್, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಸುರೇಶ. ಎಂ., ಪಕ್ಷೇತರ ಅಭ್ಯರ್ಥಿಗಳಾಗಿ ರಾಜಶೇಖರ್, ನವನೀತ್ ಗೌಡ. ಎನ್, ಮುಜಮಿಲ್ ಪಾಷ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. 

ಚಾಮರಾಜನಗರ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಶಮನ: ಸಚಿವ ಸೋಮಣ್ಣ ಹಾದಿ ಸುಗಮ

ಕೊಳ್ಳೇಗಾಲದಲ್ಲಿ ಭರ್ಜರಿ ಪೈಪೋಟಿ:  ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಎ.ಆರ್. ಕೃಷ್ಣಮೂರ್ತಿ ಅವರು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಕೆಂಪರಾಜು. ವಿ ಅವರು ಎರಡು ನಾಮಪತ್ರ ಸಲ್ಲಿಸಿದ್ದಾರೆ. ಜನತಾದಳ (ಜಾತ್ಯತೀತ) ಪಕ್ಷದಿಂದ ಬಿ. ಪುಟ್ಟಸ್ವಾಮಿ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಎನ್. ರವಿಕುಮಾರ್, ಉತ್ತಮ ಪ್ರಜಾಕೀಯ ಪಕ್ಷದಿಂದ ವಿ. ವಿನಯ್ ಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಬಿ. ರಾಚಯ್ಯ, ಕೆ. ರಾಜು, ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. 

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!