
ಚಾಮರಾಜನಗರ (ಡಿ.28): ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಅರಣ್ಯ ವೀಕ್ಷಕರೊಬ್ಬರು ಹುಲಿ ದಾಳಿಗೆ ಬಲಿಯಾಗಿರುವ ಮನಕಲಕುವ ಘಟನೆ ಜರುಗಿದೆ. ಬಂಡೀಪುರದ ಮರಳಳ್ಳ ಗಸ್ತಿನ ಸಮೀಪ ಎಂದಿನಂತೆ ಅರಣ್ಯ ರಕ್ಷಣೆಯ ಗಸ್ತು ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಇದರ ಬೆನ್ನಲ್ಲಿಯೇ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಒಬ್ಬ ಸದಸ್ಯರಿಗೆ ನೌಕರಿ ಕೊಡುವ ಭರವಸೆಯನ್ನು ನೀಡಿದೆ.
ಅರಣ್ಯ ವೀಕ್ಷಕ ಸಣ್ಣಹೈದ (55) ಸೇರಿದಂತೆ ಒಟ್ಟು ಮೂವರು ಸಿಬ್ಬಂದಿಗಳು ನಿನ್ನೆ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಇಬ್ಬರು ಸಿಬ್ಬಂದಿ ಮುಂದೆ ನಡೆದು ಹೋಗಿದ್ದರೆ, ಸಣ್ಣಹೈದ ಅವರು ಸ್ವಲ್ಪ ಹಿಂದೆ ನಿಧಾನವಾಗಿ ಬರುತ್ತಿದ್ದರು. ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಹುಲಿ ಏಕಾಏಕಿ ಸಣ್ಣಹೈದ ಅವರ ಮೇಲೆ ದಾಳಿ ಮಾಡಿದೆ. ಹುಲಿಯನ್ನು ಕಂಡು ಸಣ್ಣಹೈದ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಸಹ ಸಿಬ್ಬಂದಿಗಳು ಬಂದೂಕು ಹಿಡಿದು ಅವರ ನೆರವಿಗೆ ಧಾವಿಸುವಷ್ಟರಲ್ಲೇ, ಹುಲಿ ತನ್ನ ಬಲವಾದ ಪಂಜದಿಂದ ಒಂದೇ ಒಂದು ಹೊಡೆತವನ್ನು ಜೋರಾಗಿ ಹೊಡೆದು ಘರ್ಜಿಸುತ್ತಾ ಕಾಡಿನೊಳಗೆ ಮರೆಯಾಗಿದೆ.
ಹುಲಿಯ ಪಂಜದ ಒಂದು ಏಟಿನಿಂದ ಸಣ್ಣಹೈದ ಅವರು ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದರು. ಕೂಡಲೇ ಅವರನ್ನು ರಕ್ಷಿಸಿ ಕಾಡಿನಿಂದ ಹೊರತರಲು ಪ್ರಯತ್ನಿಸಲಾಯಿತಾದರೂ, ಚಿಕಿತ್ಸೆ ಸಿಗುವ ಮೊದಲೇ ಅವರು ಪ್ರಾಣ ಬಿಟ್ಟಿದ್ದಾರೆ. ಬಂಡೀಪುರ ಅರಣ್ಯದಲ್ಲಿ ಗಸ್ತು ಕಾರ್ಯದಲ್ಲಿದ್ದ ಸಿಬ್ಬಂದಿ ಮೇಲೆ ಹುಲಿ ದಾಳಿ ನಡೆಸಿರುವುದು ಇದೇ ಮೊದಲ ಪ್ರಕರಣ ಎನ್ನಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಎಫ್ ನವೀನ್ ಕುಮಾರ್ ಅವರು, 'ಗಸ್ತಿಗೆ ಹೋದಾಗ ಸಿಬ್ಬಂದಿಗಳು ತಂಡವಾಗಿ ಒಟ್ಟಿಗೆ ಹೋಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಸಣ್ಣಹೈದ ಅವರು ಸ್ವಲ್ಪ ಹಿಂದುಳಿದಿದ್ದರಿಂದ ಹುಲಿ ದಾಳಿ ಮಾಡಲು ಅವಕಾಶ ಸಿಕ್ಕಂತಾಗಿದೆ. ಇನ್ನು ಮುಂದೆ ಗಸ್ತು ಕಾರ್ಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗುವುದು,' ಎಂದಿದ್ದಾರೆ. ಅರಣ್ಯ ಇಲಾಖೆಯು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡಲು ಒಪ್ಪಿಗೆ ಸೂಚಿಸಿದೆ.
ಸುದೀರ್ಘ ಕಾಲ ಬಂಡೀಪುರದಲ್ಲಿ ಸೇವೆ ಸಲ್ಲಿಸಿದ್ದ ಸಣ್ಣಹೈದ ಅವರು ಅರಣ್ಯ ಜ್ಞಾನಕ್ಕೆ ಹೆಸರಾಗಿದ್ದರು. ಹಿರಿಯ ಅರಣ್ಯ ವೀಕ್ಷಕರಾಗಿದ್ದ ಸಣ್ಣಹೈದ ಅವರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಸ್ತು ಕಾರ್ಯದ ಕರ್ತವ್ಯದ ಸಮಯದಲ್ಲಿ ಹುಲಿ ದಾಳಿಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅರಣ್ಯ ದೇವತೆ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಹಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.