
ರಾಮನಗರ: ಬೆಂಗಳೂರು ಹೊರತುಪಡಿಸಿದರೆ ಶರವೇಗದಲ್ಲಿ ಬೆಳೆಯುತ್ತಿರುವ ತುಮಕೂರು ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳಲ್ಲಿ ರೈಲ್ವೆ ಇಲಾಖಾ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಭಾರತ ಸರ್ಕಾರ ಬದ್ದವಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಆಧುನೀಕರಣ ಮತ್ತು ಅಂಡರ್ ಪಾಸ್ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ರೈಲು ನಿಲ್ದಾಣ ಎಂದರೆ ಈ ಹಿಂದೆ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಮೂಗು ಮುರಿಯುತ್ತಿದ್ದರು. ಆ ಅಪವಾದವನ್ನು ತಪ್ಪಿಸಿ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. 21 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಾಮನಗರ ರೈಲು ನಿಲ್ದಾಣ ಆಧುನೀಕರಣ ಅಭಿವೃದ್ಧಿ ಸೇರಿದಂತೆ ಎಕ್ಸಿಲೇಟರ್, ವೈಯಿಟಿಂಗ್ ಹಾಲ್, ಪಾರ್ಕಿಂಗ್ ಕೆಲಸಗಳು ಸುಮಾರು ಶೇ.90ರಷ್ಟು ಮುಗಿದಿದ್ದು, ಒಂದು ತಿಂಗಳೊಳಗೆ ಲೋಕಾರ್ಪಣೆ ಮಾಡಲಾಗುವುದು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮೈಸೂರಿಗೆ ಮೂರು ಮೆಮೋ ರೈಲುಗಳನ್ನು ಬಿಡಲಾಗಿದ್ದು ಕಡಿಮೆ ದರದಲ್ಲಿ ಜನರು ಪ್ರಯಾಣಿಸಬಹುದು ಎಂದರು.
ರೈಲ್ವೆ ಇಲಾಖೆ ಅಭಿವೃದ್ದಿಯ ಸಂಖೇತವಾಗಿದ್ದು, ಅಭಿವೃದ್ಧಿ ಎಂಬುದು ಮರಿಚಿಕೆಯಾಗ ಬಾರದು. ಕಳೆದ ಎರಡು ವರ್ಷಗಳಲ್ಲಿ 101 ಮೇಲ್ಸೆತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣ ಸ್ಥಳಗಳನ್ನು ಗುರ್ತಿಸಲಾಗಿದ್ದು, ಸುಮಾರು 650 ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಅನುದಾನ ನಿರೀಕ್ಷೆ ಮಾಡದೆ ರೈಲ್ವೆ ಸೇತುವೆಗಳ ನಿರ್ಮಾಣವನ್ನು ಕೇಂದ್ರ ಸರ್ಕಾರವೇ ಮಾಡಲಿದೆ ಎಂದು ಹೇಳಿದರು.
11 ವರ್ಷದ ಹಿಂದೆ ಶೇ.27ರಷ್ಟಿದ್ದ ರೈಲ್ವೆ ಎಲೆಕ್ಟ್ರಿಯೇಷನ್ ಪ್ರಸ್ತುತ ಶೇ.98ರಷ್ಟಾಗಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು. 45 ಸಾವಿರ ಕೋಟಿ ರೈಲ್ವೆ ಯೋಜನೆಗಳ ಅಭಿವೃದ್ದಿ ಕೆಲಸಗಳ ಪೈಕಿ, ಕರ್ನಾಟಕದಲ್ಲಿ 11.800 ಕೋಟಿ ರು.ಗಳ ಪ್ರಮುಖ ಯೋಜನೆಗಳಾದ ರಾಯದುರ್ಗ-ತುಮಕೂರು, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳು ಶೀಘ್ರವಾಗಿ ಮುಗಿಯಲಿವೆ ಎಂದರು.
ಬಿಡದಿ ರೈಲು ನಿಲ್ದಾಣ ಮೇಲ್ದರ್ಜೆ ಮತ್ತು ಚನ್ನಪಟ್ಟಣ ರೈಲು ನಿಲ್ದಾಣ ಆಧುನೀಕರಣ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ. ರಾಮನಗರ ಪಟ್ಟಣದಲ್ಲಿನ ಅಂಡರ್‌ಪಾಸ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕೇಂದ್ರ ಸರ್ಕಾರದ ವತಿಯಿಂದ 825 ಕೋಟಿ ರೂ ವೆಚ್ಚದಲ್ಲಿ ರಾಮನಗರ-ಮೈಸೂರು ಡಬ್ಲಿಂಗ್‌ಲೈನ್ ಕಾಮಗಾರಿ ಪೂರ್ಣ ಮಾಡಲಾಗುವುದು. ಎಲೆಕೇರಿ ಎಲ್‌ಸಿ 47 ಬದಲಿಗೆ 19 ಕೋಟಿ ರು. ವೆಚ್ಚದಲ್ಲಿ ರಾಜ್ಯ ಸರ್ಕಾರದ ಪಾಲುದಾರಿಕೆ ಯೊಂದಿಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಹೆಜ್ಜಾಲದಿಂದ ಕಗ್ಗಲಿಪುರ, ಹಾರೋಹಳ್ಳಿ, ಕನಕಪುರ, ಸಾತನೂರು, ಹಲಗೂರು, ಮಳವಳ್ಳಿ, ಕೊಳ್ಳೆಗಾಲ, ಯಳಂದೂರು, ಸಂತೆಮರಳ್ಳಿ, ಚಾಮರಾಜನಗರ 142 ಕಿ.ಮೀ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಜೊತೆ ಚರ್ಚೆ ನಡೆಸಿದ್ದೇವೆ. ಹೆಜ್ಜಾಲ - ಚಾಮರಾಜನಗರ ರೈಲು ಯೋಜನೆ ಅನುಷ್ಠಾನಕ್ಕೆ ಲೋಕಸಭಾ ಸದಸ್ಯರಾಗಿದ್ದ ಧ್ರುವನಾರಾಯಣ್ ಸಹ ಒತ್ತಾಯ ಮಾಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ಜಾಗವನ್ನು ಜಿಲ್ಲಾಧಿಕಾರಿಗಳು ಸರ್ವೆ ನಡೆಸಿ, ಜಾಗ ನೀಡಿದರೆ ಶೀಘ್ರವಾಗಿ ಯೋಜನೆಯನ್ನು ಸಾಕಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಟೊಯೋಟಾ ಕಿಲೋಸ್ಕರ್ ಕಂಪನಿಯಲ್ಲಿ ತಯಾರಾಗುವ ಕಾರುಗಳ ಟ್ರಾನ್ಸ್‌ಪೋರ್ಟ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಈ ಭಾಗದ ಜನರ ಹಲವು ದಿನಗಳ ಬೇಡಿಕೆ ಜಿಲ್ಲಾ ಕೇಂದ್ರದಲ್ಲಿ ಒಡೆಯರ್ ಎಕ್ಸ್ ಪ್ರೆಸ್ ಮತ್ತು ಮೈಲಾರ ತುಡೈ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ಸೋಮಣ್ಣ ಹೇಳಿದರು.ಸಂಸದ ಡಾ.ಸಿ.ಎನ್.ಮಂಜುನಾಥ್ , ಶಾಸಕರಾದ ಎಚ್.ಸಿ.ಬಾಲಕೃಷ್ಣ ಹಾಗೂ ಇಕ್ಬಾಲ್ ಹುಸೇನ್ ರವರು ಜಿಲ್ಲೆಯಲ್ಲಿ ಆಗಬೇಕಾಗಿರುವ ರೈಲ್ವೆ ನಿಲ್ದಾಣಗಳಲ್ಲಿ ಆಗಬೇಕಾಗಿರುವ ಕಾಮಗಾರಿಗಳು, ಪ್ರಯಾಣಿಕರಿಗೆ ಮೂಲ ಸೌಕರ್ಯಗಳು, ನಿಲ್ದಾಣದ ಅಭಿವೃದ್ಧಿ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಸುಧಾರಣೆ ಗಳ ಕುರಿತು ಸಚಿವ ಸೋಮಣ್ಣ ಅವರೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದರು.
ಈ ವೇಳೆ ಶಾಸಕ ಇಕ್ಬಾಲ್‌ಹುಸೇನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ನಗರಸಭೆ ಅಧ್ಯಕ್ಷ ಶೇಷಾದ್ರಿ, ಸದಸ್ಯೆ ಆಯಿಷಾಬಾನು, ಜಿಲ್ಲಾಧಿಕಾರಿ ಯಶ್ವಂತ್, ರೈಲ್ವೆ ಇಲಾಖಾ ಅಧಿಕಾರಿಗಳು ಹಾಜರಿದ್ದರು.