ಗಂಗಾವತಿ: ಮಹಾಮಾರಿ ಕೊರೋನಾ ಸೋಂಕಿಗೆ ಬಲಿಯಾದವರಿ​ಗೆ ಸ್ಮಶಾನ ಹುಡುಕಾಟ

By Kannadaprabha News  |  First Published Jul 12, 2020, 7:44 AM IST

6 ಗಂಟೆಗಳ ಕಾಲ ಶ್ರದ್ಧಾಂಜಲಿ ವಾಹನದಲ್ಲಿ ಶವ|ಪೇಚಿಗೆ ಬಿದ್ದ ಅಧಿಕಾರಿಗಳು|ಬೆಟ್ಟದ ಅಂಚಿನಲ್ಲಿ ಮಧ್ಯರಾತ್ರಿ ಶವ ಸಂಸ್ಕಾರ| ಕೊರೋನಾ ರೋಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಚ್ಚಿಬಿದ್ದ ಜನತೆ|


ರಾಮಮೂರ್ತಿ ನವಲಿ

ಗಂಗಾವತಿ(ಜು.12): ಕೋವಿಡ್‌ ಸೋಂಕಿಗೆ ಬಲಿಯಾದ ವ್ಯಕ್ತಿಯ ಶವ ಸಂಸ್ಕಾರಕ್ಕೆ ಅಧಿಕಾರಿಗಳು ಸ್ಮಶಾನ ಹುಡುಕಾಟಕ್ಕೆ ಪರದಾಡಿದ ಪ್ರಸಂಗ ಜರುಗಿತು. ನಗರದ ಹಿರೇಜಂತಗಲ್‌ನಲ್ಲಿ ಕೋವಿಡ್‌ ಸೋಂಕಿಗೆ 52 ವರ್ಷದ ವ್ಯಕ್ತಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ನಗರವೇ ಬೆಚ್ಚಿಬಿತ್ತು. ಈಗಾಗಲೇ ಗಂಗಾವತಿ ನಗರ, ಮರಳಿ ಮತ್ತು ರಂಗಾಪುರ ಜಂಗ್ಲಿ ಗ್ರಾಮದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದರು.

Tap to resize

Latest Videos

15 ದಿನಗಳ ಹಿಂದೆ ಮರಳಿ ಗ್ರಾಮದಲ್ಲಿ ಮಹಿಳೆ ಮೃತಪಟ್ಟ ಸಂದರ್ಭದಲ್ಲಿ ಜನರು ಗ್ರಾಮದ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಬಾರದೆಂದು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಆದರೂ ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳ ಸಲಹೆ ಮೇರೆಗೆ ಅಂತ್ಯಸಂಸ್ಕಾರ ನಡೆಯಿತು. ರಂಗಾಪುರ ಜಂಗ್ಲಿ ಗ್ರಾಮದಲ್ಲಿ ವ್ಯಕ್ತಿ ಮೃತಪಟ್ಟಿದ್ದರೂ ಬಳ್ಳಾರಿಯಲ್ಲಿಯೇ ಶವಸಂಸ್ಕಾರ ನಡೆಯಿತು.

ಏಯ್.....ಡೆಡ್ಲಿ ಕೊರೋನಾ ನಿನೆಂಥಾ ಕ್ರೂರಿ....ಹುಟ್ಟಿದ ಮಗುನ ಮುಖ ನೋಡ್ಲಿಕ್ಕೆ ಬಿಡ್ಲಿಲ್ಲ

ಸ್ಮಶಾನ ಹುಡುಕಾಟ

ಅಧಿಕಾರಿಗಳು ಮತ್ತು ಪೊಲೀಸರ ತಂಡ ಹಿರೇಜಂತಂಗಲ್‌ನ ಸ್ಮಶಾನದತ್ತ ಬರುತ್ತಿದ್ದಂತೆಯೇ ವ್ಯಾಪಕ ವಿರೋಧವಾಯಿತು. ಅಲ್ಲದೇ ನಮ್ಮ ಗ್ರಾಮದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯ ಬಾರದೆಂದು ತಾಕೀತು ಮಾಡಿದರು. ಪ್ರತಿಭಟನಕಾರರಿಗೆ ಎಷ್ಟೇ ತಿಳಿವಳಿಕೆ ಹೇಳಿದರೂ ಒಪ್ಪದ ಕಾರಣ ಪರ್ಯಾಯವಾಗಿ ಸ್ಮಶಾನ ಹುಡುಕಾಟಕ್ಕೆ ಮುನ್ನಡೆದರು.

ಕೊಪ್ಪಳದಿಂದ ಗಂಗಾವತಿ ನಗರಕ್ಕೆ ಶ್ರದ್ಧಾಂಜಲಿ ವಾಹನದಲ್ಲಿ ಶವವನ್ನು ತರಲಾಯಿತು. ಬಳಿಕ ಹಿರೇಜಂತಗಲ್‌ ಗ್ರಾಮಕ್ಕೆ ತೆಗೆದುಕೊಂಡು ಹೋಗದೆ ನೇರವಾಗಿ ಸಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಬೇಕೆಂದು ತಾಲೂಕು ಆಡಳಿತ ನಿರ್ಧರಿಸಿತು. ಆದರೆ ಶವ ತಮ್ಮ ಗ್ರಾಮಕ್ಕೆ ತರುತ್ತಿದ್ದಾರೆಂಬ ಸುದ್ದಿ ತಿಳಿಯುತ್ತಲೆ ಸಂಗಾಪುರ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಗೆ ತರದಂತೆ ತಾಕೀತು ಮಾಡಿದರು.
ಕೊನೆಗೂ ಲಕ್ಷ್ಮೀ ನಾರಾಯಣ ಕೆರೆಯ ಅಂಚಿನಲ್ಲಿ ಶವ ಸಂಸ್ಕಾರ ಮಾಡಬೇಕೆಂದು ನಿರ್ಧರಿಸಲಾಯಿತು. ಅದಕ್ಕೂ ವಿರೋಧ ವ್ಯಕ್ತವಾಗಿದ್ದರಿಂದ ಮ​ಧ್ಯರಾತ್ರಿ ಬೆಟ್ಟದ ಅಂಚಿನಲ್ಲಿರುವ ಸರ್ಕಾರಿ ಭೂಮಿಯಲ್ಲಿ ಶವಸಂಸ್ಕಾರ ನಡೆಸಲಾಯಿತು.

6 ಗಂಟೆಗಳ ಕಾಲ ಶ್ರದ್ಧಾಂಜಲಿ ವಾಹನದಲ್ಲಿ ಶವ

ಕೊಪ್ಪಳದಿಂದ ಸಂಗಾಪುರ ಗ್ರಾಮಕ್ಕೆ ತಂದಿರುವ ಶವವನ್ನು 6 ಗಂಟೆಗಳ ಕಾಲ ಶ್ರದ್ಧಾಂಜಲಿ ವಾಹನದಲ್ಲಿ ಇಡಲಾಗಿತ್ತು. ಶವ ಸಂಸ್ಕಾರಕ್ಕೆ ರಚಿಸಲಾಗಿದ್ದ ತಂಡ ನೀರು ಕುಡಿಯಲಿಕ್ಕೂ ಪೇಚಾಡಿತು. ಸಂಜೆ 5 ಗಂಟೆಯಿಂದ ರಾತ್ರಿ 12ರ ವರೆಗೆ ಶವ ಸಂಸ್ಕಾರಕ್ಕಾಗಿ ಸ್ಮಶಾನ ಹುಡುಕಾಟ, ನಾಗರಿಕರ ಪ್ರತಿಭಟನೆಯಿಂದ ಅಧಿಕಾರಿಗಳು ಬೇಸತ್ತಿದ್ದರು.

ಬೆಟ್ಟದ ಅಂಚಿನಲ್ಲಿ ಮಧ್ಯರಾತ್ರಿ ಶವಸಂಸ್ಕಾರ

ಶವ ಸಂಸ್ಕಾರಕ್ಕೆ ಸರಿಯಾದ ಸ್ಥಳ ಸಿಗದೆ ಇರುವುದರಿಂದ ಕೊನೆಗೂ ಸಂಗಾಪುರ ಸೀಮೆಯ ಸರ್ಕಾರಿ ಭೂಮಿ ಇರುವ ಬೆಟ್ಟದ ಅಂಚಿನಲ್ಲಿ ಶವ ಸಂಸ್ಕಾರ ನಡೆಸಿದರು. ತಾಲೂಕು ಆಡಳಿತ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಶವ ಸಂಸ್ಕಾರಕ್ಕೆ ಸಹಕಾರ ನೀಡಿದರು.

ಗಂಗಾವತಿ ನಗರದಲ್ಲಿ ಕೋವಿಡ್‌ ಸೋಂಕಿತರ ಶವ ಸಂಸ್ಕಾರಕ್ಕೆ ಹಲವಾರು ಸಮಸ್ಯೆಗಳಿದ್ದು, ನಾಗರಿಕರ ವಿರೋಧ ವ್ಯಕ್ತವಾಗುತ್ತದೆ. ಈಗ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು, 5 ಎಕರೆ ಸರ್ಕಾರಿ ಜಾಗ ಪರಿಶೀಲಿಸಲು ಸೂಚನೆ ನೀಡಿದ್ದಾರೆ. ಶವ ಸಂಸ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಆರೋಗ್ಯ ಇಲಾಖೆ ಮತ್ತು ಸರ್ಕಾರಿ ನಿಯಮ ಪಾಲಿಸಿ ಸಂಸ್ಕಾರ ಮಾಡಲಾಗುತ್ತದೆ. ಸೋಂಕು ಯಾರಿ​ಗೂ ಹಬ್ಬುವುದಿಲ್ಲ. ನಾಗರಿಕರು ಸಹಕಾರ ನೀಡಬೇಕಾಗಿತ್ತು ಎಂದು ಗಂಗಾವತಿ ತಹಸೀಲ್ದಾರ್‌ ಎಲ್‌.ಡಿ. ಚಂದ್ರಕಾಂತ ಅವರು ತಿಳಿಸಿದ್ದಾರೆ. 
 

click me!