ಶಿವಮೊಗ್ಗ: ರೈಲ್ವೆ ನಿಲ್ದಾಣಕ್ಕೆ ಸಿಸಿಟಿವಿ ಕಣ್ಗಾವಲು

By Kannadaprabha NewsFirst Published Jan 12, 2020, 11:19 AM IST
Highlights

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯನ್ನು ಕೈಗೆತ್ತಿಕೊಂಡಿದ್ದು, ರೈಲ್ವೆ ನಿಲ್ದಾಣದ ಇಡೀ ಪ್ರದೇಶದಲ್ಲಿ 38 ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಪ್ರಸ್ತಾವ ಜಾರಿಗೆ ತರಲು ಮುಂದಾಗಿದೆ.

ಶಿವಮೊಗ್ಗ [ಜ.12]:  ಜಿಲ್ಲಾ ಕೇಂದ್ರದಿಂದ ಹೊಸ ರೈಲುಗಳ ಪಟ್ಟಿಹೆಚ್ಚಾಗುತ್ತಿದ್ದಂತೆ ಜನಸಂದಣಿಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಇನ್ನಷ್ಟುಕ್ರಮಗಳಿಗೆ ಮುಂದಾಗಿದೆ. ಇದರಲ್ಲಿ ಮೊದಲ ಹಂತವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯನ್ನು ಕೈಗೆತ್ತಿಕೊಂಡಿದ್ದು, ರೈಲ್ವೆ ನಿಲ್ದಾಣದ ಇಡೀ ಪ್ರದೇಶದಲ್ಲಿ 38 ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಪ್ರಸ್ತಾವ ಜಾರಿಗೆ ತರಲು ಮುಂದಾಗಿದೆ.

ನೈಋುತ್ಯ ರೈಲ್ವೆ ವಿಭಾಗದ 31 ರೈಲ್ವೆ ನಿಲ್ದಾಣ ಸೇರಿ ದೇಶಾದ್ಯಂತ 983 ರೈಲ್ವೆ ನಿಲ್ದಾಣಗಳಲ್ಲಿ ನಿರ್ಭಯ ನಿಧಿಯಡಿ ಸಿಸಿ ಟಿವಿ ಅನುಷ್ಠಾನಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಪ್ರಸಕ್ತ ವರ್ಷ 250 ಕೋಟಿ ರು. ಮಂಜೂರಾಗಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣ ಇಡೀ ಪ್ರದೇಶದ ಮೇಲೆ ಸಿಸಿ ಟಿವಿ ಕ್ಯಾಮೆರಾ ಮೂಲಕ ಕಣ್ಗಾವಲಿಡಲಾಗುತ್ತಿದೆ. ಪ್ರಯಾಣಿಕರ ಆಗಮನ-ನಿರ್ಗಮನದ ಮುಖ್ಯದ್ವಾರ, ಟಿಕೆಟ್‌ ಕಾಯ್ದಿರಿಸುವಿಕೆ ಸ್ಥಳ, ವಿಶ್ರಾಂತಿ ಕೊಠಡಿ, ವಾಹನ ನಿಲುಗಡೆ ಪ್ರದೇಶ, ಫುಟ್‌ ಓವರ್‌ ಬ್ರಿಡ್ಜ್‌ ಹಾಗೂ ಬುಕ್ಕಿಂಗ್‌ ಕಚೇರಿಯನ್ನು ಸಿಸಿ ಟಿಸಿ ನಿಗಾವಣೆ ವ್ಯಾಪ್ತಿಗೊಳಪಡಿಸಲಾಗುತ್ತಿದೆ.

ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..!.

ಈ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ರೈಲ್ವೆ ವಿಭಾಗದ ಕಚೇರಿಯಲ್ಲಿ ಅಳವಡಿಸಿದ ವಿಭಾಗೀಯ ಕೇಂದ್ರ ಸುರಕ್ಷತಾ ಅಥವಾ ನಿಯಂತ್ರಣ ಕೊಠಡಿಯಿಂದಲೂ ಗಮನಿಸಬಹುದಾಗಿದೆ ಎಂಬುದು ವಿಶೇಷ. ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟನಿಲ್ದಾಣದ ಅಧಿಕಾರಿಗಳಿಗೆ ಸೂಕ್ತ ಸೂಚನೆಯನ್ನು ನೀಡಬಹುದಾಗಿದೆ.

ಹಲವು ವಿಶೇಷ: ಈ ಸಿಸಿ ಕ್ಯಾಮೆರಾ ವೀಡಿಯೋ ಸರ್ವಲೆನ್ಸ್‌, ಮುಖ ಗುರುತಿಸುವಿಕೆ, ವಾರಸುದಾರರಿಲ್ಲದ ವಸ್ತುಗಳ ವೀಡಿಯೊ ಮತ್ತು ಪತ್ತೆ ಹಚ್ಚುವಿಕೆ ಸೇರಿ ಹಲವು ವಿಶೇಷತೆಯನ್ನೊಳಗೊಂಡಿದೆ. ಸಿಸಿ ಕ್ಯಾಮೆರಾ ವಿಡಿಯೋವನ್ನು 30 ದಿನ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

click me!