ಸರ್ಕಾರಿ ಶಾಲೆಯ ದುಸ್ಥಿತಿ: 114 ಮಕ್ಕಳಿಗೆ ಒಬ್ಬರೇ ಶಿಕ್ಷಕ

By Kannadaprabha NewsFirst Published Jan 12, 2020, 11:07 AM IST
Highlights

ಉದಗಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ | ಮೂವರು ನಿಯೋಜನೆ ಮೇಲೆ ಬೋಧನೆ 114 ಮಕ್ಕ ಳಿಗೆ ಒಬ್ಬರೇ ಕಾಯಂ ಶಿಕ್ಷಕ| ಈ ಶಾಲೆಗೆ ಸರಿಯಾಗಿ ಶಿಕ್ಷಕರು ಇಲ್ಲದಿರುವುದೇ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಂಠಿತ|

ಚಂದ್ರಶೇಖರ ಶಾರದಾಳ 

ಕಲಾದಗಿ(ಜ.12): ಖಾಸಗಿ ಶಾಲೆಗಳ ಹೆಚ್ಚಳದಿಂದಾಗಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಕ್ಷೀಣಗೊಂ ಡಿದೆ. ಇದರ ನಡುವೆಯ 10 ಕ್ಕಿಂತಲೂ ಕಡಿಮೆ ಮಕ್ಕಳಿರುವ ಶಾಲೆಯನ್ನು ಪಬ್ಲಿಕ್ ಶಾಲೆಗೆ ವಿಲೀನ ಗೊಳಿಸುವ ಕಾರ್ಯ ನಡೆಯುತ್ತಿರುವುದು ಒಂದೆಡೆಯಾದರೆ, ಮಕ್ಕಳ ಸಂಖ್ಯೆ ಜಾಸ್ತಿಯಿದ್ದರೂ ಬೋಧಕರ ಸಂಖ್ಯೆ ಇಲ್ಲದಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದುವ ಕಾಣಿಸುತ್ತಿಲ್ಲವೆ ಎಂದು ಅಲ್ಲಿನ ಪಾಲಕರು ಪ್ರಶ್ನಿಸುವಂತಾಗಿದೆ. 

ಬಾಗಲಕೋಟೆ ಜಿಲ್ಲೆಯ ಉದಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಎಂಟನೇ ತರಗತಿಯವರೆಗೆ ಒಟ್ಟು 114 ಜನ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಇರುವುದು ಮಾತ್ರ ಒಬ್ಬರು ಮಾತ್ರ ಕಾಯಂ ಶಿಕ್ಷಕರಿದ್ದಾರೆ! 
ಈ ಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಶಾಲೆಗೆ ಮುಖ್ಯೋಪಾಧ್ಯಾಯರೂ ಇಲ್ಲ. ಇದ್ದ ಒಬ್ಬ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಮೇಲುಸ್ತುವಾರಿ ಕೊಡಲಾಗಿದೆ. ಹೀಗಾಗಿ ಮಕ್ಕಳಿಗೆ ಪಠ್ಯ ಪುಸ್ತಕದ ಅಧ್ಯಯನ ಹಿಂದುಳಿಯುತ್ತಿವೆ. ವಿಷಯವಾರು ಸರಿಯಾದ ಬೋಧನೆಯೂ ಇವರಿಗೆ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ತಮ್ಮ ಮಕ್ಕಳ ಶಿಕ್ಷಣಾಭ್ಯಾಸ ಹೇಗೆ ನಡೆಯುತ್ತದೆ ಎಂದು ಅಲ್ಲಿನ ಕಲಿಯುತ್ತಿರುವ ಮಕ್ಕಳ ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉದಗಟ್ಟಿ ಸರ್ಕಾರಿ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ ಒಟ್ಟು 114 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಶಾಲೆಗೆ ಮೊದಲಿನಿಂದಲೂ ಅಗತ್ಯ ಶಿಕ್ಷಕರ ನೇಮಕ ಮಾಡುವಲ್ಲಿ ಶಿಕ್ಷಣ ಇಲಾಖೆ ನಿರಾಸಕ್ತಿ ತಳೆಯುತ್ತಿದೆ. ಹಿರಿಯ ಪ್ರಾಥಮಿಕ ಈ ಶಾಲೆಗೆ ಒಬ್ಬರೇ ಒಬ್ಬರು ಕಾಯಂ ಶಿಕ್ಷಕರು, ಇನ್ನು ಮೂವರು ಶಿಕ್ಷಕರು ನಿಯೋಜನೆ ಮೇಲೆ ಬರುತ್ತಿದ್ದು, ಇಬ್ಬರು ಅತಿಥಿ ಶಿಕ್ಷಕರ ಮೇಲೆ ದಿನ ನಿತ್ಯ ತರಗತಿ, ಆಟ ಪಾಠಗಳು ನಡೆಯುತ್ತಿವೆ. ಉದಗಟ್ಟಿ ಶಾಲೆಗೆ ಏಕಿಷ್ಟು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಕಳೆದ ಶೈಕ್ಷಣಿಕ ವರ್ಷ ಶಾಲೆಗೆ ಒಂದನೇ ತರಗತಿ ಗೆ 11 ಮಕ್ಕಳು ದಾಖಲಾಗಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷ 1ನೇ ತರಗತಿಗೆ 8 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಈ ಶಾಲೆಗೆ ಸರಿಯಾಗಿ ಶಿಕ್ಷಕರು ಇಲ್ಲದಿರುವುದೇ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ. 

ಅಕ್ಟೋಬರ್ ತಿಂಗಳಲ್ಲಿ ಈ ಶಾಲೆಯ ಮುಖ್ಯೋಪಾಧ್ಯಾಯರು, ಮೂವರು ಕಾಯಂ ಶಿಕ್ಷಕರು ಬೇರೆ ಶಾಲೆಗೆ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಗ್ರಾಮಸ್ಥರು ಹಲವು ಬಾರಿ ಶಿಕ್ಷಣ ಇಲಾಕೆ ಅಧಿಕಾರಿಗಳಿಗೆ ಮನವಿ ಮಾಡಿ, ತಮ್ಮೂರ ಶಾಲೆಗೆ ಕಾಯಂ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಅದು ಇನ್ನೂ ಕಾರ್ಯಗತವಾಗಿಲ್ಲ. ಆದರೆ, ಈಗ ಮೂವರು ನಿಯೋಜಿತ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ಹಾಕಿಸಿಕೊಂಡು ಶಾಲಾ ತರಗತಿ ನಡೆಸುತ್ತಿದ್ದಾರೆ. ಇನ್ನಾದರೂ ಶಿಕ್ಷಣ ಇಲಾಖೆ ಕನಿಷ್ಠ ಮೂವರು ಜನ ಶಿಕ್ಷಕರನ್ನು ಕಾಯಂ ಮಾಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯ.

ಈ ಬಗ್ಗೆ ಮಾತನಾಡಿದ ಬಾಗಲಕೋಟೆ ಬಿಇಒ ಪಿ.ಬಿ.ಹಿರೇಮಠ ಅವರು, ಈ ಶಾಲೆಗೆ ಕೌನ್ಸೆಲಿಂಗ್‌ನಲ್ಲಿ ಹಾವೇರಿ ಜಿಲ್ಲೆಯಿಂದ ಮುಖ್ಯೋಪಾಧ್ಯಾಯರ ನಿಯುಕ್ತಿ ಆಗಿದೆ. ಅವರು ಯಾವ ಕಾರಣಕ್ಕಾಗಿ ಇಲ್ಲಿಗೆ ಬರುತ್ತಿಲ್ಲ ಎನ್ನುವುದು ಗೊತ್ತಾಗಿಲ್ಲ. ಅಲ್ಲಿನ ಡಿಡಿಪಿಐ ಅವರ ಜೊತೆ ಮಾತನಾಡಿ ಮಾಹಿತಿ ಪಡೆದುಕೊಳ್ಳಲಾಗುವುದು. ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳ ಸಲಹೆ ಸೂಚನೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಕಳೆದ ಹಲವು ವರ್ಷಗಳಿಂದಲೂ ನಮ್ಮ ಶಾಲೆಗೆ ಸರಿಯಾಗಿ ಶಿಕ್ಷಕರನ್ನು ನಿಯುಕ್ತಿಗೊಳಿಸುತ್ತಿಲ್ಲ. ಅದು ಎಷ್ಟೋ ಬಾರಿ ಮನವಿ ಮಾಡಿದ ಮೇಲೆ ಒಬ್ಬರು ಅಥವಾ ಇಬ್ಬರು ಶಿಕ್ಷಕರನ್ನು ನಿಯೋಜನೆ ಮೇಲೆ ಶಿಕ್ಷಣ ಇಲಾಖೆ ಕೊಟ್ಟು, ಕೈತೊಳೆದುಕೊಳ್ಳುತ್ತಿದೆ ಎಂದು ಉದಗಟ್ಟಿ ಗ್ರಾಮಸ್ಥ ರಾಜು ಪೂಜಾರಿ ತಿಳಿಸಿದ್ದಾರೆ. 

ಶಾಲೆಯಲ್ಲಿ ನಿಯೋಜನೆಗೊಂಡ ಶಿಕ್ಷಕರೇ ಹೆಚ್ಚು. ಮತ್ತೆ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾದಾಗ ಮತ್ತೆ ಇದೇ ಸಮಸ್ಯೆ. ಪ್ರತಿ ವರ್ಷವೂ ಗ್ರಾಮಸ್ಥರಿಗೆ ಶಾಲಾ ಶಿಕ್ಷಕರನ್ನು ಶಾಲೆಗೆ ಹಾಕಿಸಿಕೊಳ್ಳುವುದೇ ಒಂದು ಕೆಲಸವಾಗಿಬಿಟ್ಟಿದೆ. ಈ ಶಾಲೆಯ ಬಗ್ಗೆ ಶಿಕ್ಷಣ ಇಲಾಖಾ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಖಜ್ಜಿಡೋಣಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಪುಂಡಿಕಟಗಿ ಹೇಳಿದ್ದಾರೆ. 

click me!