ಬೆಂಗಳೂರು ಗಲಭೆ: ಸಂಪತ್‌ ರಾಜ್‌ 2 ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಿದ ಸಿಸಿಬಿ

By Kannadaprabha NewsFirst Published Nov 2, 2020, 8:09 AM IST
Highlights

ಮಾಜಿ ಮೇಯರ್‌ ಸಂಪತ್‌ ರಾಜ್‌ ಅಕ್ಕನ ಮನೆಗೂ ನೋಟಿಸ್‌| ವಿಚಾರಣೆಗೆ ಹಾಜರಾಗುವಂತೆ ಸೂಚನೆ|ಬೆಂಗಳೂರು ನಗರ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಕೂಡಾ ಸಿಸಿಬಿ ವಿಶೇಷ ತಂಡಗಳು ಹುಡುಕಾಟ|  

ಬೆಂಗಳೂರು(ನ.02): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಬಿಬಿಎಂಪಿ ಮಾಜಿ ಮೇಯರ್‌ ಹಾಗೂ ಕಾಂಗ್ರೆಸ್‌ ಮುಖಂಡ ಸಂಪತ್‌ ರಾಜ್‌ಗೆ ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವರ ಮನೆಗಳಿಗೆ ಭಾನುವಾರ ಸಿಸಿಬಿ ನೋಟಿಸ್‌ ಅಂಟಿಸಿದೆ.

ಪುಲಿಕೇಶಿ ನಗರದಲ್ಲಿರುವ ಮಾಜಿ ಮೇಯರ್‌ಗೆ ಸೇರಿದ ಎರಡು ಮನೆಗಳು ಹಾಗೂ ಅವರ ಅಕ್ಕನ ಮನೆಗೂ ಸಿಸಿಬಿ ನೋಟಿಸ್‌ ಅಂಟಿಸಿದೆ. ಕೊರೋನಾ ಸೋಂಕು ನೆಪದಲ್ಲಿ ಕನ್ನಿಂಗ್‌ಹ್ಯಾಮ್‌ ರಸ್ತೆಯ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಂಪತ್‌ ರಾಜ್‌ ದಿಢೀರ್‌ ನಾಪತ್ತೆಯಾಗಿದ್ದಾರೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡಿರುವ ಮಾಜಿ ಮೇಯರ್‌ಗೆ ಬೆಂಗಳೂರು ನಗರ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಕೂಡಾ ಸಿಸಿಬಿ ವಿಶೇಷ ತಂಡಗಳು ಹುಡುಕಾಟ ನಡೆಸಿವೆ.

ಬೆಂಗಳೂರು ಗಲಭೆ ಪ್ರಕರಣ: ಸಂಪತ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ

ಈ ನೋಟಿಸ್‌ ನೋಡಿದ ಕೂಡಲೇ ಚಾಮರಾಜ ಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕು. ತಪ್ಪಿದ್ದಲ್ಲಿ ನೀವು ಉದ್ದೇಶ ಪೂರ್ವಕವಾಗಿ ತನಿಖೆಗೆ ಹಾಜರಾಗದೆ ವಿಚಾರಣೆಗೆ ಸಹಕರಿಸುವುದಿಲ್ಲ ಎಂದು ಪರಿಗಣಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳದ ಎಸಿಪಿ ಬಿ.ಆರ್‌.ವೇಣುಗೋಪಾಲ್‌ ಸೂಚಿಸಿದ್ದಾರೆ.

ಡಿ.ಜೆ.ಹಳ್ಳಿ-ಕೆ.ಜಿ ಹಳ್ಳಿ ಗಲಭೆ ವೇಳೆ ಪುಲಿಕೇಶಿ ನಗರ ಕ್ಷೇತ್ರದ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಮಾಜಿ ಮೇಯರ್‌ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ಸಂಪತ್‌ ರಾಜ್‌ ಆರೋಪಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಒಂದು ಬಾರಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಅವರು, ಎರಡನೇ ಬಾರಿ ನೋಟಿಸ್‌ ನೀಡಿದ್ದರು. ಆದರೆ ಕೊರೋನಾ ಸೋಂಕು ನೆಪ ಹೇಳಿ ವಿಚಾರಣೆಗೆ ಗೈರಾಗಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈಗ ಏಕಾಏಕಿ ಪೊಲೀಸರ ಗಮನಕ್ಕೆ ತರದೆ ಆಸ್ಪತ್ರೆಯಿಂದ ಮಾಜಿ ಮೇಯರ್‌ ಡಿಸ್ಚಾರ್ಜ್‌ ಆಗಿ ನಾಪತ್ತೆಯಾಗಿದ್ದಾರೆ.
 

click me!