ಕಾವೇರಿ ಜಲಾನಯನ ರೈತರ ಹಿತ ರಕ್ಷಣೆಗಾಗಿ ಬಿಜೆಪಿ ಕಾವೇರಿ ಹೆಸರಿನಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಲು ನಿರ್ಧರಿಸಿದೆ. ಸೆ.12ರ ಬಳಿಕ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪ್ರಮುಖರ ಸಭೆ ನಡೆಸಲು ಉದ್ದೇಶಿಸಿದ್ದು, ‘ಕಾವೇರಿ ಯಾತ್ರೆ’ ಮೂಲಕ ಜನ ಜಾಗೃತಿ ಮೂಡಿಸಲು ಮುಂದಾಗಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಸೆ.09): ಕಾವೇರಿ ಜಲಾನಯನ ರೈತರ ಹಿತ ರಕ್ಷಣೆಗಾಗಿ ಬಿಜೆಪಿ ಕಾವೇರಿ ಹೆಸರಿನಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಲು ನಿರ್ಧರಿಸಿದೆ. ಸೆ.12ರ ಬಳಿಕ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪ್ರಮುಖರ ಸಭೆ ನಡೆಸಲು ಉದ್ದೇಶಿಸಿದ್ದು, ‘ಕಾವೇರಿ ಯಾತ್ರೆ’ ಮೂಲಕ ಜನ ಜಾಗೃತಿ ಮೂಡಿಸಲು ಮುಂದಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಬಾರದು. ರೈತರ ಹಿತ ಕಾಪಾಡುವುದು ಸರ್ಕಾರದ ಮುಖ್ಯ ಗುರಿಯಾಗಬೇಕು. ಸ್ವಾರ್ಥ ರಾಜಕಾರಣಕ್ಕೆ ರೈತರು ಮತ್ತು ಜನ ಸಾಮಾನ್ಯರ ಹಿತ ಬಲಿಕೊಡಬಾರದು ಎಂಬ ಎಚ್ಚರಿಕೆ ಸಂದೇಶ ನೀಡಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೆಆರ್‌ಎಸ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಳೇ ಮೈಸೂರು ಭಾಗದವರೇ ಮುಖ್ಯಮಂತ್ರಿಯಾಗಿದ್ದರೂ ಈ ಭಾಗದ ರೈತರು, ಜನರ ಹಿತ ಕಾಪಾಡಲು ಸಾಧ್ಯವಾಗಿಲ್ಲ. ಅವರ ವೈಫಲ್ಯವನ್ನು ಈ ಭಾಗದ ಜನರಿಗೆ ತಿಳಿಸುವ ಉದ್ದೇಶದಿಂದಲೇ ‘ಕಾವೇರಿ ಯಾತ್ರೆ’ ನಡೆಸಲಾಗುವುದು ಎಂದು ನುಡಿದರು. ‘ಕಾವೇರಿ ಯಾತ್ರೆ’ ಕುರಿತು ಪಕ್ಷದ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿ ನಂತರ ರೂಪು-ರೇಷೆಗಳನ್ನು ತಯಾರಿಸಲಾಗುವುದು. ಜನರನ್ನು ಸಂಘಟಿಸುವ ಮೂಲಕ ದಿನಾಂಕ ನಿಗದಿಪಡಿಸಿ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದರು.
ಸ್ಟಾಲಿನ್ ಮೇಲಿನ ಮೋಹಕ್ಕೆ ತಮಿಳುನಾಡಿಗೆ ನೀರು: ಕಾಂಗ್ರೆಸ್ ವಿರುದ್ಧ ಅಶೋಕ್ ಆಕ್ರೋಶ
ಡ್ಯಾಂ ಒಳ ಪ್ರವೇಶಿಸಲು ಪೊಲೀಸರ ನಕಾರ: ಕೃಷ್ಣರಾಜಸಾಗರ ಜಲಾಶಯ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್ ನೇತೃತ್ವದ ನಿಯೋಗಕ್ಕೆ ಪೊಲೀಸರು ಅಣೆಕಟ್ಟೆ ಒಳಗೆ ಪ್ರವೇಶಿಸದಂತೆ ಮುಖ್ಯದ್ವಾರದಲ್ಲೇ ಬ್ಯಾರಿಕೇಡ್ ಹಾಕಿ ತಡೆಹಿಡಿದರು. ಸುಮಾರು 15 ರಿಂದ 20 ನಿಮಿಷಗಳ ಕಾಲ ಮುಖ್ಯದ್ವಾರದ ಬಳಿಯೇ ನಿಂತಿದ್ದ ಬಿಜೆಪಿ ನಾಯಕರು ಪೊಲೀಸರ ಜೊತೆ ಮಾತುಕತೆ ನಡೆಸಿದರು. ಆ ನಂತರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಕೆ.ಗೋಪಾಲಯ್ಯ, ಸಂಸದರಾದ ಸುಮಲತಾ, ಪ್ರತಾಪ್ ಸಿಂಹಗೆ ಮಾತ್ರ ಅಣೆಕಟ್ಟೆ ಒಳಗೆ ಹೋಗಲು ಪೊಲೀಸರು ಅವಕಾಶ ಕಲ್ಪಿಸಿಕೊಟ್ಟರು.
ಅಣೆಕಟ್ಟೆ ಒಳಗೆ ಪ್ರವೇಶಿಸಲು ಬಿಜೆಪಿ ನಿಯೋಗಕ್ಕೆ ಅವಕಾಶ ಕಲ್ಪಿಸಿದ ಪೊಲೀಸರು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದರು. ಮುಖ್ಯ ದ್ವಾರದ ಹೊರಗೆ ಮಾಧ್ಯಮದವರನ್ನು ತಡೆದು ನಿಲ್ಲಿಸಿದರು. ನಂತರ ಅಣೆಕಟ್ಟೆಯ ಮೇಲ್ಭಾಗಕ್ಕೆ ತೆರಳುವುದಕ್ಕೆ ಬಿಜೆಪಿ ನಾಯಕರು ಅವಕಾಶ ನೀಡಲಿಲ್ಲ. ಇದರಿಂದ ಅಣೆಕಟ್ಟೆಯ ಮುಖ್ಯದ್ವಾರದ ಎಡ ಭಾಗದಲ್ಲೇ ನಿಂತು ವೀಕ್ಷಿಸಿದರು. ಬಿಜೆಪಿ ನಾಯಕರಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಡ್ಯಾಂನ ಹೊರಾವರಣದ ಉದ್ಯಾನದಲ್ಲೇ ನಿಂತು ಬಿಜೆಪಿ ನಾಯಕರು ನೀರಿನ ಪರಿಸ್ಥಿತಿಯ ಅವಲೋಕನ ನಡೆಸಿದರು.
ಕೆಆರ್‌ಎಸ್ ಅಣೆಕಟ್ಟು ನೋಡಿದ್ರೆ ಹೊಟ್ಟೆ ಉರಿಯುತ್ತೆ: ಮಾಜಿ ಸಿಎಂ ಬೊಮ್ಮಾಯಿ
ಪೊಲೀಸರ ಜೊತೆ ವಾಗ್ವಾದ: ಕೆಆರ್‌ಎಸ್‌ನ ಹೊರಾವರಣದಲ್ಲಿ ನಿಂತಿದ್ದ ಬಿಜೆಪಿ ನಾಯಕರನ್ನು ಅಣೆಕಟ್ಟೆ ಒಳಗೆ ಬಿಡದ ಪೊಲೀಸರ ಜೊತೆ ಪಕ್ಷದ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡರು. ಇದರಿಂದ ಪೊಲೀಸರು ಡ್ಯಾಂ ಮೇಲೆ ಹೋಗದಂತೆ ಗೇಟ್ ಗೆ ಬೀಗ ಜಡಿದರು. ಅಂತಿಮವಾಗಿ ಬಿಜೆಪಿ ನಾಯಕರಿಗೆ ಸ್ವಲ್ಪ ದೂರ ತೆರಳಲು ಅನುಮತಿ ನೀಡಿದ್ದರಿಂದ ಎಲ್ಲರೂ ನಡೆದು ಹೋಗಿ ಅಣೆಕಟ್ಟೆ ಪರಿಸ್ಥಿತಿ ಅವಲೋಕನ ಮಾಡಿದರು. ಮೊದಲ ಕ್ರಸ್ಟ್ ಗೇಟ್ ವರೆಗೆ ತೆರಳುವುದಕ್ಕೂ ಬಿಡದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅರ್ಧಕ್ಕೆ ವಾಪಸಾದರು.