ಉರಿಯುವ ಬೆಂಕಿಗೆ ತುಪ್ಪ ಸುರಿದ ಸಿದ್ದು- ಡಿಕೆಶಿ: ಉಸಿರುಗಟ್ಟುವ ಸ್ಥಿತಿಯಲ್ಲಿ ಮೆಡಿಕಲ್ ಕಾಲೇಜು!

By Kannadaprabha News  |  First Published Sep 9, 2023, 12:37 PM IST

ಜಿಲ್ಲಾ ಕೇಂದ್ರ ರೇಷ್ಮೆನಗರಿ ರಾಮನಗರದಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಮೆಡಿಕಲ್ ಕಾಲೇಜು ಇದೀಗ ರೇಷ್ಮೆ ಗೂಡಿನೊಳಗಿನ ಹುಳದಂತೆ ಉಸಿರುಗಟ್ಟುವ ಸ್ಥಿತಿಯಲ್ಲಿದೆ. 


ಎಂ.ಅಫ್ರೋಜ್‌ ಖಾನ್

ರಾಮನಗರ (ಸೆ.09): ಜಿಲ್ಲಾ ಕೇಂದ್ರ ರೇಷ್ಮೆನಗರಿ ರಾಮನಗರದಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಮೆಡಿಕಲ್ ಕಾಲೇಜು ಇದೀಗ ರೇಷ್ಮೆ ಗೂಡಿನೊಳಗಿನ ಹುಳದಂತೆ ಉಸಿರುಗಟ್ಟುವ ಸ್ಥಿತಿಯಲ್ಲಿದೆ. ನಗರದ ಹೊರ ವಲಯದ ಅರ್ಚಕರಹಳ್ಳಿ ಬಳಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಆವರಣದಲ್ಲಿ ನಿರ್ಮಾಣವಾಗಬೇಕಿರುವ ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ವಿಚಾರದಲ್ಲಿ ನಾಯಕರು ನೀಡುತ್ತಿರುವ ದ್ವಂದ್ವ ಹೇಳಿಕೆಗಳು ಜನರಲ್ಲೂ ಗೊಂದಲ ಸೃಷ್ಟಿಸುತ್ತಿದೆ.

Tap to resize

Latest Videos

ಭಾರತ್ ಜೋಡೋ ಯಾತ್ರೆ ನೆನಪಿನಾರ್ಥ ರಾಮನಗರದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಡಿಕಲ್ ಕಾಲೇಜಿನ ವಿಚಾರವಾಗಿ ನೀಡಿರುವ ಭಿನ್ನ ಹೇಳಿಕೆಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತೇವೆ. ರಾಮನಗರದಲ್ಲಿ ಅಗತ್ಯವಿದ್ದರೆ ಇಲ್ಲೂ ನಿರ್ಮಾಣ ಮಾಡುತ್ತೇವೆ. ಎರಡೂ ಕಡೆ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುತ್ತೇವೆಂದು ಹೇಳಿದ್ದಾರೆ.

ಮೆಡಿಕಲ್ ಕಾಲೇಜು ಸ್ಥಳಾಂತರ ಹಿಂದೆ ಡಿಕೆ ಬ್ರದರ್ಸ್‌ಗೆ ಲಾಭದ ಉದ್ದೇಶ: ಸಿ.ಪಿ.ಯೋಗೇಶ್ವರ್

ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆಗುವುದು ಬೇಡ ಅಂತ ನಾನೇನು ಹೇಳಿಲ್ಲ. ಹಾರೋಹಳ್ಳಿ - ಮರಳವಾಡಿ ಹೋಬಳಿಗು ತುಂಗಣಿಗು ಕೇವಲ 3 ಕಿ.ಮೀ ದೂರವಿದೆ. ಕನಕಪುರದಲ್ಲು ಮೆಡಿಕಲ್ ಕಾಲೇಜು ಇರುತ್ತದೆ. ರಾಮನಗರದಲ್ಲಿಯೂ ಮೆಡಿಕಲ್ ಕಾಲೇಜು ಇರಲಿದೆ. ಇದು ಕಾಂಗ್ರೆಸ್ ಸರ್ಕಾರದ ಸಂಕಲ್ಪ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನೀಡಲು ಅವಕಾಶ ಇದೆ. ಆರೋಗ್ಯ ವಿವಿಯೇ ಬೇರೆ, ಮೆಡಿಕಲ್ ಕಾಲೇಜೆ ಬೇರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಅಲ್ಲೂ ಉಂಟು ಇಲ್ಲೂ ಉಂಟು: ಹೋರಾಟದ ಹಿಂದೆ ರಾಜಕೀಯ ಉದ್ದೇಶವಿದೆ. ಯಾರೋ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕನಕಪುರದ ಮೆಡಿಕಲ್ ಕಾಲೇಜು ಕನಕನಪುರದಲ್ಲೇ, ರಾಮನಗರ ಮೆಡಿಕಲ್ ಕಾಲೇಜು ರಾಮನಗರದಲ್ಲಿಯೇ ನಿರ್ಮಾಣವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಈ ನಾಯಕರ ಭಿನ್ನ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದ್ದು, ಮೆಡಿಕಲ್ ಕಾಲೇಜಿನ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಚಳವಳಿಗಾರರನ್ನು ರೊಚ್ಚಿಗೇಳಿಸಿದೆ. ಕನಕಪುರ ಮತ್ತು ಹಾರೋಹಳ್ಳಿ ತಾಲೂಕು ಹೊರತು ಪಡಿಸಿ ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳಿಂದಲೂ ವಿರೋಧ ವ್ಯಕ್ತವಾವಾಗುತ್ತಿದೆ.

ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು: ರಾಮನಗರ ಟೌನ್ ಬಂದ್ ಅನ್ನು ಯಶಸ್ವಿಗೊಳಿಸಿರುವ ಕೆಂಗಲ್ ಹನುಮಂತಯ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯು ಮೆಡಿಕಲ್ ಕಾಲೇಜು ಸ್ಥಾಳಾಂತರವನ್ನು ಕೈ ಬಿಡಲು ರಾಜ್ಯ ಸರ್ಕಾರಕ್ಕೆ15 ದಿನ ಗಡುವು ನೀಡಿದೆ. ಇದಕ್ಕೂ ಸರ್ಕಾರ ಮಣಿಯದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ. ಇಡೀ ಜಿಲ್ಲೆಯನ್ನು ಬಂದ್ ಮಾಡಿ, ವಿಧಾನಸೌಧದವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಡಿಕೆಶಿ ಒತ್ತಡದಿಂದಲೇ ರಾಮನಗರ ಮೆಡಿಕಲ್ ಕಾಲೇಜು ಸ್ಥಳಾಂತರ: ನಿಖಿಲ್‌ ಕುಮಾರಸ್ವಾಮಿ

ಕೈ ಮುಖಂಡರು ವೌನ: ರಾಮನಗರದ ಕಾಂಗ್ರೆಸ್ ಮುಖಂಡರು ಮೆಡಿಕಲ್ ಕಾಲೇಜು ವಿಚಾರದಲ್ಲಿ ಮೌನ ವಹಿಸಿದ್ದು, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ರಾಮನಗರದ ಬದಲು ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಆಗುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿ ರಾಮನಗರ ಬಂದ್ ನಡೆಸಿದ್ದರು. ಆದರೀಗ ಅವರೆಲ್ಲರು ಮೆಡಿಕಲ್ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ. ಕೈ ಮುಖಂಡರ ಮನಸ್ಸು ಮೆಡಿಕಲ್ ಕಾಲೇಜು ಪರವಾಗಿ ಇದ್ದರೂ, ಬಹಿರಂಗವಾಗಿ ತೋರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೋರಾಟದಿಂದಲೂ ದೂರ ಉಳಿದಿದ್ದಾರೆ. ತಮ್ಮ ನಾಯಕರು ನೀಡುವ ಹೇಳಿಕೆಗಳನ್ನು ಸಮರ್ಥಿಸಿಕೊಂಡು ಕಾಲ ತಳ್ಳುತ್ತಿದ್ದಾರೆ.

click me!