ಮೂರು ಜಿಲ್ಲೆಗಳಲ್ಲಿ ಕಾವೇರಿ ಪ್ರವಾಹ, ಕೆಆರ್‌ಎಸ್‌ನಿಂದ ಭಾರೀ ನೀರು ಬಿಡುಗಡೆ, ಹಲವು ಗ್ರಾಮಗಳಿಗೆ ಎಚ್ಚರಿಕೆ

Published : Aug 19, 2025, 12:15 PM IST
Cauvery River

ಸಾರಾಂಶ

ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

ಮಂಡ್ಯ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿಪರೀತ ಮಳೆ ಹಿನ್ನೆಲೆಯಲ್ಲಿ ಜೀವ ನದಿ ಕಾವೇರಿ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸ್ಥಳೀಯರಿಗೆ ಎಚ್ಚರಿಕೆ  ನೀಡಲಾಗಿದೆ.  ಕೆ.ಆರ್.ಎಸ್ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಪ್ರವಾಹಭೀತಿಯಿಂದಾಗಿ ಅನೇಕ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  ನಿವಾಸಿಗಳು ಎಚ್ಚರದಿಂದ ಇರುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಕೆಆರ್‌ಎಸ್‌ ನ  ಐತಿಹಾಸಿಕ ವೆಲ್ಲೆಸ್ಲಿ ಸೇತುವೆ (221 ವರ್ಷ ಹಳೆಯದು) ಸದ್ಯ ಮುಳುಗಡೆ ಅಂಚಿಗೆ ತಲುಪಿದ್ದು, ಸೇತುವೆಯ ಮೇಲೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಸೇತುವೆ ಒಮ್ಮೆ ಮೈಸೂರು-ಬೆಂಗಳೂರು ರಸ್ತೆಯ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಇಂದಿಗೂ ಸ್ಥಳೀಯರು ಬಳಸುತ್ತಿರುವುದು ಗಮನಾರ್ಹ. ಪ್ರಸ್ತುತ, ಜಲಾಶಯದಿಂದ 91 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನಿನ್ನೆ ಒಂದೂವರೆ ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ನದಿಯ ಹರಿವು ಇನ್ನಷ್ಟು ಹೆಚ್ಚಳವಾಗಿದೆ.

ಶ್ರೀರಂಗಪಟ್ಟಣ ಪಶ್ಚಿಮವಾಹಿನಿ ಸಂಪೂರ್ಣ ಮುಳುಗಡೆಯಾಗಿದ್ದು, ಅರಳಿಕಟ್ಟೆ, ನಾಗರಕಲ್ಲು, ಮಂಟಪಗಳು, ದೇವಾಲಯಗಳು ನೀರಿನ ಅಡಿಯಲ್ಲಿ ಮುಳುಗಿವೆ. ಈ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ನಡೆಯುವ ಅಸ್ತಿ ವಿಸರ್ಜನೆ, ಪಿಂಡಪ್ರದಾನ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧ ವಿಧಿಸಲಾಗಿದೆ. ಆದರೂ ಕೆಲವು ವೈದಿಕರು ನಿರ್ಬಂಧಗಳನ್ನು ಲೆಕ್ಕಿಸದೆ ನದಿಗೆ ಇಳಿದು ಧಾರ್ಮಿಕ ಕಾರ್ಯಗಳನ್ನು ಮುಂದುವರಿಸುತ್ತಿರುವುದು ಜನರ ಜೀವಕ್ಕೆ ಅಪಾಯಕಾರಿಯಾಗಿದೆ. ಕಾವೇರಿ ನದಿಯ ಭೋರ್ಗರೆತದ ನಡುವೆಯೂ ನದಿಗೆ ಇಳಿಯುವುದು ಜೀವದೊಂದಿಗೆ ಆಟವಾಡಿದಂತಾಗಿದೆ.

ಚಾಮರಾಜನಗರದ 10 ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹಭೀತಿ

ಕೆ.ಆರ್.ಎಸ್ ಜಲಾಶಯದಿಂದ ನೀರಿನ ಹೊರಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ 10 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಭೀತಿಗೆ ಒಳಗಾಗಿವೆ. ಜಮೀನುಗಳು ಈಗಾಗಲೇ ಜಲಾವೃತಗೊಂಡಿದ್ದು, ನೀರಿನ ಮಟ್ಟ ಮತ್ತಷ್ಟು ಏರಿದರೆ ಮನೆಗಳಿಗೂ ಅಪಾಯ ಎದುರಾಗಲಿದೆ. ಗ್ರಾಮಸ್ಥರಿಗೆ ಈಗಾಗಲೇ ನದಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪ್ರಸ್ತುತ ಕಾವೇರಿ ಮತ್ತು ಕಬಿನಿ ಜಲಾಶಯಗಳಿಂದ ಒಟ್ಟಾರೆ ಒಂದು ಲಕ್ಷ ಕ್ಯೂಸೆಕ್ಸ್ ಗಿಂತ ಹೆಚ್ಚು ನೀರು ಬಿಡುಗಡೆ ಆಗುತ್ತಿದೆ. ಹೊರಹರಿವು ಹೆಚ್ಚಾದರೆ ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ, ಹರಳೆ, ಹೊಸ ಹಂಪಾಪುರ, ದಾಸನಪುರ ಸೇರಿದಂತೆ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುವ ಭೀತಿ ವ್ಯಕ್ತವಾಗಿದೆ.

ಕೊಡಗಿನಲ್ಲಿ ಕಾವೇರಿ ನದಿ ತುಂಬಿ ಹರಿವು:

ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯ ಪರಿಣಾಮ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಪ್ರವಾಸೋದ್ಯಮಕ್ಕೂ ತಾತ್ಕಾಲಿಕ ತಡೆ ಬಿದ್ದಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧ ಮಾಡುವಂತೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ ಜಾರಿಯಲ್ಲಿರಲಿದೆ. ಸತತ ಮಳೆಯ ಕಾರಣ ನದಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವುದು ಕಾರಣವಾಗಿದೆ. ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆ.ಆರ್.ಎಸ್ ಜಲಾಶಯದಿಂದ ಹೆಚ್ಚುವರಿ ನೀರು ಬಿಡುತ್ತಿರುವ ಪರಿಣಾಮ ಕಾವೇರಿ ನದಿ ಪ್ರವಾಹಭೀತಿಯನ್ನುಂಟುಮಾಡಿದೆ. ಸೇತುವೆಗಳು, ಗ್ರಾಮಗಳು, ಧಾರ್ಮಿಕ ಮಂಟಪಗಳು ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜನರು ಅನಗತ್ಯವಾಗಿ ನದಿಯತ್ತ ಹೋಗದೇ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ತಿಳಿಸಿರುತ್ತಾರೆ.

 

PREV
Read more Articles on
click me!

Recommended Stories

ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!