ಲಾರಿಗೆ ಡಿಕ್ಕಿ ಹೊಡೆದ ಕಾರು, ಮೂವರ ಸಾವು| ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಫ್ಲೈಓವರ್ ಮೇಲೆ ಅವಘಡ| ಬೆಂಗಳೂರಿನಿಂದ ಕಾರಿನಲ್ಲಿ ತಮ್ಮ ಸ್ವಗ್ರಾಕ್ಕೆ ತೆರಳುತ್ತಿದ್ದಾಗ ತಡರಾತ್ರಿ ಕಾರಿನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ|
ಕೂಡ್ಲಿಗಿ(ಮೇ.18): ತಾಲೂಕಿನ ಹೊಸಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿ 50ರಲ್ಲಿ ಪ್ಲೈ ಓವರ್ ಮೇಲೆ ಕಾರು ಹಾಗೂ ಲಾರಿ ಡಿಕ್ಕಿಯಿಂದ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ.
ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ವಿಜಯಪುರ ಜಿಲ್ಲೆ ಮುದ್ದೇಬಿಹಾಳ್ ತಾಲೂಕಿನ ಮಿನಜಗಿ ಗ್ರಾಮದ ದೇವರಾಜ (21), ಭೀಮರಾಯ (38), ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚಪ್ಪರಗಿ ಗ್ರಾಮದ ಅಂಜಿನದೇವಿ (14) ಎನ್ನುವ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕರ್ನಾಟಕಕ್ಕೆ ಡಬಲ್ ಶಾಕ್: 2 ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು..!
ಇವರು ಬೆಂಗಳೂರಿನಿಂದ ಕಾರಿನಲ್ಲಿ ತಮ್ಮ ಸ್ವಗ್ರಾಕ್ಕೆ ತೆರಳುತ್ತಿದ್ದಾಗ ಭಾನುವಾರ ತಡರಾತ್ರಿ 1 ಗಂಟೆಗೆ ತಾಲೂಕಿನ ಹೊಸಹಳ್ಳಿ ಸಮೀಪ ಬರುತ್ತಿದ್ದಾಗ ಕಾರಿನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದಾಗಿ ರಸ್ತೆಯ ಪಕ್ಕದ ಬಲಭಾಗದ ಡಿವೈಡರ್‌ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಯಲ್ಲಿ ಕೂಡ್ಲಿಗಿ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ. ಲಾರಿಯಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ವಾರದೊಳಗೆ ಓಮ್ನಿವ್ಯಾನ್ ಇದೇ ಸ್ಥಳದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಅಸುನೀಗಿದ್ದ ಘಟನೆಯ ಬೆನ್ನಲ್ಲೇ ಈಗ ಈ ಸ್ಥಳದಲ್ಲಿಯೇ ಭಾನುವಾರ 3 ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದ್ದು, ಸ್ಥಳೀಯರಿಂದ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಂಜೆ ಮಳೆಯಾಗಿದ್ದರಿಂದ ಫ್ಲೈಓವರ್ ಮೇಲೆ ನೀರು ಕೆರೆಯಂತೆ ನಿಂತಿದ್ದು ಅತಿವೇಗವಾಗಿ ಬಂದ ಕಾರುಗಳು, ಇತರೆ ವಾಹನಗಳಿಗೆ ನೀರು ದಾಟುವಾಗ ಮುಂದೆ ಏನಿದೆ ಎಂಬುದು ಕಾಣಿಸುವುದಿಲ್ಲ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಆಗುತ್ತವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಬಗ್ಗೆ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಫ್ಲೈಓವರ್ ಮೇಲೆ ನೀರು ನಿಂತಿದ್ದರಿಂದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚರಿಸುವ ವಾಹನಗಳು ನೀರಿನಲ್ಲಿ ಸಂಚರಿಸುವ ಅಪಾಯಕಾರಿ ದೃಶ್ಯದ ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಈ ಬಗ್ಗೆ ‘ಕನ್ನಡಪ್ರಭ’ ಸಹ ಅಪಘಾತದ ಮುನ್ಸೂಚನೆ ಕುರಿತು ವರದಿಯಲ್ಲಿ ಎಚ್ಚರಿಸಿತ್ತು.
ಶನಿವಾರ ಕೂಡ್ಲಿಗಿ ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಆಡಳಿತ ಹೆದ್ದಾರಿ ಅಧಿಕಾರಿಗಳಿಗೆ ಫ್ಲೈಓವರ್ ಮೇಲೆ ಮತ್ತು ಕೆಳಗೆ ನೀರು ನಿಲ್ಲುತ್ತಿದ್ದು ಕಾಮಗಾರಿ ಸರಿಪಡಿಸಿ ಎಂದು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಈಗಾಲಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.