ಗದಗ ಜಿಲ್ಲೆಯಲ್ಲಿ ಹೊರಗುತ್ತಿಗೆ ನರ್ಸ್‌ಗಳಿಗಿಲ್ಲ ವೇತನ| 6 ತಿಂಗಳಿಂದ ಕೊರೋನಾ ಯೋಧರು ಸಂಬಳವಿಲ್ಲದೇ ಕಾರ್ಯ ನಿರ್ವಹಣೆ| ಮಾಧ್ಯಮಗಳ ಮುಂದೆ ಹೇಳಿದರೆ ಅಥವಾ ಹಿರಿಯ ಅಧಿಕಾರಿಗಳಿಗೆ ತಿಳಿಸಿದಲ್ಲಿ ಗುತ್ತಿಗೆ ಪಡೆದ ಕಂಪನಿ ಕೆಲಸದಿಂದ ತೆಗೆಯುವ ಭಯ| ತುಂಬಾ ಕಷ್ಟದಲ್ಲಿದ್ದರೂ ವೇತನ ವಿಳಂಬದ ಬಗ್ಗೆ ಬಾಯಿ ಬಿಡಲು ಹೆದರುತ್ತಿರುವ ನರ್ಸಗಳು|
ಶಿವಕುಮಾರ ಕುಷ್ಟಗಿ
ಗದಗ(ಮೇ.18): ದೇಶವೇ ಕೊರೋನಾ ವಿರುದ್ಧ ಹೋರಾಟದಲ್ಲಿ ನರ್ಸ್‌ಗಳ ಪಾತ್ರದ ಬಗ್ಗೆ ಕೊಂಡಾಡುತ್ತಿದೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯ ಮೇಲೆ ಕೆಲಸ ಮಾಡುತ್ತಿರುವ ನರ್ಸಗಳಿಗೆ ಮಾತ್ರ ಕಳೆದ 6 ತಿಂಗಳಿಂದ ವೇತನವಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗದಗ ಜಿಮ್ಸ್ ಆಸ್ಪತ್ರೆ ಪ್ರಾರಂಭವಾದ ನಂತರ 2ನೇ ಬಾರಿಗೆ 30ಕ್ಕೂ ಹೆಚ್ಚು ನರ್ಸಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ಖಾಸಗಿ ಕಂಪನಿಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗಿದೆ. ನೇಮಕಾತಿ ಪೂರ್ಣಗೊಂಡು 6 ತಿಂಗಳು ಗತಿಸಿದರೂ ಇದುವರೆಗೂ 5 ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಆದೇಶ ಪ್ರತಿಯೇ ಸಿಕ್ಕಿಲ್ಲ, ಆದರೂ ಅವರೆಲ್ಲಾ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹ ವಿಷಯವಾಗಿದೆ.
'ಕೊರೋನಾದಿಂದ ತತ್ತರಿಸಿದ ರೈತನಿಗೆ ಸರ್ಕಾರ ಆಸರೆಯಾಗಬೇಕಿದೆ'
ಬೆಂಗಳೂರು ಮೂಲದ ಕಂಪನಿಗೆ ಗುತ್ತಿಗೆ:
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನರ್ಸ್‌ಗಳನ್ನು ಪೂರೈಸುವ ನಿಟ್ಟಿನಲ್ಲಿ ಸಸ್ಟನೆಬಲ್ ಸ್ಕಿಲ… ಕ್ಯಾಪಿಟಲ… ಪ್ರೈವೇಟ್ ಲಿಮಿಟೆಡ್ ಹಾಗೂ ಮೆಗಾ ಕಂಪನಿಗಳಿಗೆ ಸರ್ಕಾರದಿಂದ ವೇತನ ಪಾವತಿಸುವಲ್ಲಿ ವಿಳಂಬವಾದಲ್ಲಿ ಕಂಪನಿ ಸತತ 6 ತಿಂಗಳುಗಳ ಕಾಲ ತಪ್ಪದೇ ಪ್ರತಿ ತಿಂಗಳು ನೌಕರರಿಗೆ ವೇತನ ನೀಡಬೇಕು ಎನ್ನುವ ಕಡ್ಡಾಯ ನಿಯಮದ ಮೇಲೆ ಗುತ್ತಿಗೆ ನೀಡಲಾಗಿದೆ. ಆ ಕಂಪನಿಯ ಮೂಲಕ ನೇಮಕವಾಗಿ 30 ಜನ ಎಬಿಸಿ ಮತ್ತು ಡಿ ಶ್ರೇಣಿಗಳಲ್ಲಿ ಕಾರ್ಯರ್ವಹಿಸುತ್ತಿದ್ದು, ಇದುವರೆಗೂ ಈ ಸಿಬ್ಬಂದಿಗೆ ವೇತನವಾಗದೇ ಅವರೆಲ್ಲಾ ಪರದಾಡುತ್ತಿದ್ದಾರೆ.
ಭಯದ ವಾತಾವರಣ:
ಕಳೆದ 6 ತಿಂಗಳಿಂದಲೂ ವೇತನವಿಲ್ಲದೇ ಪರದಾಡುತ್ತಿರುವ ಸಿಬ್ಬಂದಿ ಕಳೆದ 2 ತಿಂಗಳಿಂದ ಕೊರೋನಾ ವಾರಿಯರ್ಸ್ ರೂಪದಲ್ಲಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ವೇತನ ಸಿಕ್ಕಿಲ್ಲ, ಈ ಬಗ್ಗೆ ಕೆಲವಾರು ನರ್ಸ್‌ಗಳನ್ನು ಪ್ರಶ್ನಿಸಿದರೆ, ಮಾಧ್ಯಮಗಳ ಮುಂದೆ ಹೇಳಿದರೆ ಅಥವಾ ಹಿರಿಯ ಅಧಿಕಾರಿಗಳಿಗೆ ತಿಳಿಸಿದಲ್ಲಿ ಗುತ್ತಿಗೆ ಪಡೆದ ಕಂಪನಿ ಕೆಲಸದಿಂದ ತೆಗೆಯುವ ಭಯದ ಹಿನ್ನೆಲೆಯಲ್ಲಿ ತುಂಬಾ ಕಷ್ಟದಲ್ಲಿದ್ದರೂ ನರ್ಸಗಳು ಮಾತ್ರ ವೇತನ ವಿಳಂಬದ ಬಗ್ಗೆ ಬಾಯಿ ಬಿಡಲು ಹೆದರುತ್ತಿದ್ದಾರೆ.
ಏನು ಮಾಡುತ್ತಿದೆ ಜಿಮ್ಸ್?:
ಗದಗ ಜಿಮ್ಸ್ ನಿರ್ದೇಶಕರು ಸೇರಿದಂತೆ ಅಲ್ಲಿನ ಆಡಳಿತ ಮಂಡಳಿ ಏನು ಕೆಲಸ ಮಾಡುತ್ತಿದೆ? ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವೇತನ ಸಿಕ್ಕಿಲ್ಲ ಎನ್ನುವ ಕನಿಷ್ಠ ಮಾಹಿತಿ ಅಲ್ಲಿನ ಅಧಿಕಾರಿಗಳಿಗೆ ತಿಳಿಯದೇ ಹೋಗಿರುವುದು ತೀರಾ ಆಶ್ಚರ್ಯದ ಸಂಗತಿಯಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ 4-4-2020 ರಂದು ನರ್ಸ್ ಸೇರಿದಂತೆ ಯಾರ ವೇತನವನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಗದಗ ಜಿಲ್ಲೆಯಲ್ಲಿ ಪಾಲನೆಯಾಗದೇ ಆಗಿಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ತಕ್ಷಣವೇ ಜಿಮ್ಸ್‌ನ ಹಿರಿಯ ಅಧಿಕಾರಿಗಳು ಹಾಗೂ ನಿರ್ದೇಶಕರು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ವೇತನ ನೀಡದೇ ಇರುವ ಕುರಿತು ಕಂಪನಿಗೆ ನೋಟಿಸ್ ಜಾರಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.