ತಿಪಟೂರು ವಿಧಾನಸಭಾ ಚುನಾವಣಾ ಕುರುಕ್ಷೇತ್ರ ದಿನದಿಂದ ದಿನಕ್ಕೆ ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮತದಾನಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು ಅಖಾಡದಲ್ಲಿರುವ ಘಟಾನುಘಟಿ ಅಭ್ಯರ್ಥಿಗಳು ಈ ಬಾರಿ ನಾನೇ ಗೆಲ್ಲಬೇಕೆಂಬ ಛಲತೊಟ್ಟು ಮನದಾರರ ಮುಂದೆ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ತಿಪಟೂರು : ತಿಪಟೂರು ವಿಧಾನಸಭಾ ಚುನಾವಣಾ ಕುರುಕ್ಷೇತ್ರ ದಿನದಿಂದ ದಿನಕ್ಕೆ ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮತದಾನಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು ಅಖಾಡದಲ್ಲಿರುವ ಘಟಾನುಘಟಿ ಅಭ್ಯರ್ಥಿಗಳು ಈ ಬಾರಿ ನಾನೇ ಗೆಲ್ಲಬೇಕೆಂಬ ಛಲತೊಟ್ಟು ಮನದಾರರ ಮುಂದೆ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ವಿಧಾನಸಭಾ ಚುನಾವಣೆ ಮೇ. 10ರಂದು ನಡೆಯಲಿದ್ದು ಅಷ್ಟರೊಳಗೆ ತಾಲೂಕಿನ ಎಲ್ಲಾ ಹಳ್ಳಿ, ಮನೆಗಳನ್ನು ತಲುಪಿ ಮತದಾರರ ಮನಸ್ಸನ್ನು ಓಲೈಕೆ ಮಾಡಿ ನಮಗೇ ಮತಹಾಕಬೇಕೆಂದು ನಾನಾ ರೀತಿಯಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ಪೈಪೋಟಿ ಇದ್ದು ಎಲ್ಲಾ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಅಬ್ಬರ ಮತಯಾಚನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್ ಬಗ್ಗೆ, ಜೆಡಿಎಸ್‌ನವರು ಪಂಚರತ್ನ ಯೋಜನೆಗಳ ಬಗ್ಗೆ ಇನ್ನೂ ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಮಾಡಿದ್ದೇವೆನ್ನಲಾದ ಕಾರ್ಯಯೋಜನೆಗಳನ್ನೇ ಅಸ್ತ್ರವನ್ನಾಗಿಸಿಕೊಂಡು ಜನರ ಮನಸ್ಸನ್ನು ಸೆಳೆಯುತ್ತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಎಲ್ಲಾ ಅಭ್ಯರ್ಥಿಗಳು ಮತಯಾಚನೆಯ ಕಾರ್ಯದಲ್ಲಿ ಮಗ್ನರಾಗಿದ್ದು ರಣ ಬಿಸಿಲಿನಲ್ಲಿಯೂ ಅಕ್ಕ, ಅಣ್ಣ, ತಮ್ಮ, ಅಯ್ಯಾ ಎಂದು ಮಾತನಾಡಿಸುತ್ತಾ ತಮಗೇ ಓಟು ಕೊಡಿ ಎಂದು ವಿಭಿನ್ನವಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳ ಪರ ಹೆಂಡತಿ, ಮಕ್ಕಳು, ಅಣ್ಣ ತಮ್ಮಂದಿರುಗಳು, ಸಂಬಂಧಿಕರು ಹಾಗೂ ಆಯಾ ಪಕ್ಷಗಳ ಮುಖಂಡರು ಮತ ಯಾಚನೆಗೆ ಇಳಿದು ಹೇಗಾದರೂ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕೆಂದು ಛಲ ತೊಟ್ಟು ಅಖಾಡಕ್ಕಿಳಿದಿದ್ದಾರೆ. ಗ್ರಾಮಗಳ ದೇವಸ್ಥಾನ, ಅರಳಿಕಟ್ಟೆ, ಡೈರಿ, ಪೆಟ್ಟಿಗೆ ಅಂಗಡಿಗಳ ಬಳಿ ಹಾಗೂ ನಗರದ ಹೋಟೆಲ್, ಪಾರ್ಕ್, ವಾಕಿಂಗ್ ಮತ್ತಿತರೆ ಸ್ಥಳಗಳಲ್ಲಿ ಚುನಾವಣೆಯದ್ದೇ ಮಾತು ಮಾತು. ಈ ಬಾರಿ ಯಾವ ಪಕ್ಷ ಅಥವಾ ಅಭ್ಯರ್ಥಿ ಗೆಲ್ಲಬಹುದು, ಸೋಲಬಹುದು, ಎಷ್ಟುಅಂತರದಲ್ಲಿ ಸೋಲು-ಗೆಲುವು ಜೊತೆಗೆ ಯಾವ ಜನಾಂಗದ ಹೆಚ್ಚು ಓಟು ಯಾರು ಪಡೆಯುತ್ತಾರೆಂಬಿತ್ಯಾದಿ ಚರ್ಚೆಗಳ ಜೊತೆ ಹೆಚ್ಚು ರಾಜಕೀಯ ಚರ್ಚೆಗಳಲ್ಲಿ ಜನರು ಮುಳುಗಿದ್ದಾರೆ.
ಒಟ್ಟಾರೆ ಅಭ್ಯರ್ಥಿಗಳು ಏನೇ ಕಸರತ್ತು ಮಾಡಲಿ, ಯಾರೇ ಸ್ಟಾರ್ ಪ್ರಚಾರಕರೂ ಬಂದು ಎಷ್ಟೇ ಪ್ರಚಾರ ಮಾಡಿದರೂ ಯಾರನ್ನು ಆಯ್ಕೆ ಮಾಡಬೇಕೆಂಬುದು ಮಾತ್ರ ಮತದಾರ ಪ್ರಭುವಿನ ಕೈಯಲ್ಲಿದ್ದು ಇವರ ಹಣೆಬರಹ ಬಹಿರಂಗವಾಗಬೇಕಾದರೆ ಚುನಾವಣಾ ಫಲಿತಾಂಶದವರೆಗೂ ಕಾಯಬೇಕಿದೆ.
ಅಭ್ಯರ್ಥಿಗಳ ಪರ ಪಕ್ಷದ ವರಿಷ್ಠರು ಬ್ಯಾಟಿಂಗ್: ಜನರೊಂದಿಗೆ ಸಂಪರ್ಕವಿಟ್ಟುಕೊಂಡು ಹಗಲು ರಾತ್ರಿ ಎನ್ನದೆ ಮತಪ್ರಚಾರದಲ್ಲಿ ತೊಡಗಿರುವ ಪಕ್ಷಗಳ ಅಭ್ಯರ್ಥಿಗಳಿಗೆ ಆಯಾ ಪಕ್ಷದ ವರಿಷ್ಠರು, ಸ್ಟಾರ್ ಪ್ರಚಾರಕರು ಆಗಮಿಸಿ ಅವರವರ ಪಕ್ಷಗಳ ಸಾಧನೆ, ಭರವಸೆ, ಅಭಿವೃದ್ಧಿ ಜೊತೆಗೆ ತಮ್ಮ ಪ್ರಣಾಳಿಕೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸೇರಿದಂತೆ ಕೆಲ ವರಿಷ್ಠರು ಆಗಮಿಸಿದ್ದರು. ಇನ್ನೂ ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಂದು ಬಿಜೆಪಿ ಪಕ್ಷದ ವಿರುದ್ದ ವಾಗ್ದಾಳಿ ಮಾಡಿ ಜನರ ಮನಸ್ಸನ್ನು ಬದಲಿಸಲು ಪ್ರಯತ್ನಿಸಿದರು. ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೀಗೆ ಪಕ್ಷದ ವರಿಷ್ಠರು, ಸ್ಟಾರ್ ಪ್ರಚಾರಕರು ಆಗಮಿಸುತ್ತಿರುವುದು ತಡವಾಗಿಯಾದರೂ ಚುನಾವನಾ ಕಣ ರಂಗೇರಲು ಕಾರಣವಾಗುತ್ತಿದೆ.