
(ಮೋಹನ್ ಹಂಡ್ರಂಗಿ)
ಬೆಂಗಳೂರು (ಮೇ 1, 2023): ಇವರು ಅಮೆರಿಕದಲ್ಲಿ ಕೈತುಂಬಾ ಸಂಪಾದನೆ, ಐಷಾರಾಮಿ ಜೀವನ ತೊರೆದು ದೇಶದ ಬಡತನ ನಿವಾರಣೆಗಾಗಿ ಕೆಲಸ ಮಾಡಲು ಸ್ವದೇಶಕ್ಕೆ ಮರಳಿದವರು. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿವಾರಣೆಯಾಗದೇ ಜನಸಾಮಾನ್ಯರ ಬದುಕು ಹಸನು ಅಸಾಧ್ಯ ಎಂಬುದನ್ನು ಅರಿತು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉತ್ಕಟ ಬಯಕೆಯಿಂದ ತಮ್ಮ 70ನೇ ವಯಸ್ಸಿನಲ್ಲಿ ಆಮ್ ಆದ್ಮಿ ಪಕ್ಷದ ಮುಖಾಂತರ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ರಮೇಶ್ ಬೆಲ್ಲಂಕೊಂಡ ರಾಜಕೀಯದ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕನಸು ಕಂಡವರು. ಬೆಂಗಳೂರು ಮೂಲದ ಡಾ.ರಮೇಶ್ ದೆಹಲಿಯ ಏಮ್ಸ್ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದು 1975ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಎಂಡಿ ಮೆಡಿಸಿನ್ ಮತ್ತು ಡಿಎಂ ಗ್ಯಾಸ್ಟ್ರೋಎಂಟ್ರಾಲಾಜಿ ಸ್ನಾತಕೋತ್ತರ ಪದವಿ ಪಡೆದು ಬರೋಬ್ಬರಿ 21 ವರ್ಷಗಳ ಕಾಲ ವೈದ್ಯ ವೃತ್ತಿ ನಿರ್ವಹಿಸಿದ್ದಾರೆ.
ಇದನ್ನು ಓದಿ: ಪುತ್ತೂರು: ಬಿಜೆಪಿಗೆ ಹಿಂದುತ್ವ ಅಭ್ಯರ್ಥಿಯೇ ಟಕ್ಕರ್: ಕ್ಷೇತ್ರದಲ್ಲಿ ಹಿಂದೂ ಸಂಘಟಕ ಅರುಣ್‌ಕುಮಾರ್ ಪುತ್ತಿಲರದ್ದೇ ಸದ್ದು
‘ನಾನು ವೈದ್ಯ ವೃತ್ತಿಯಲ್ಲಿ ಇರುವಾಗಲೇ ಬಾಂಗ್ಲಾದೇಶದ ಅರ್ಥಶಾಸ್ತ್ರ ಪ್ರಾಧ್ಯಾಪಕ ಮೊಹಮ್ಮದ್ ಯೂನಸ್ (ನೋಬೆಲ್ ಪುರಸ್ಕೃತ) ಅವರ ಬಡತನ ನಿವಾರಣೆಗಾಗಿ ಕಿರುಸಾಲ ವ್ಯವಸ್ಥೆ ಹಾಗೂ ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ ಕೆಲಸಗಳಿಂದ ಪ್ರೇರಣೆ ಪಡೆದು ಭಾರತದಲ್ಲಿ ಈ ಪ್ರಯೋಗ ಮಾಡಲು ನಿರ್ಧರಿಸಿದೆ. ಅದರಂತೆ ಕೈ ತುಂಬಾ ಸಂಪಾದನೆ ಇದ್ದ ವೈದ್ಯ ವೃತ್ತಿ ತೊರೆದು 1997ರಲ್ಲಿ ಭಾರತಕ್ಕೆ ಮರಳಿದೆ’ ಎನ್ನುತ್ತಾರೆ.
ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ:
‘ತವರು ರಾಜ್ಯ ಕರ್ನಾಟಕದಲ್ಲಿ ಗ್ರಾಮೀಣ ಭಾಗದ ಬಡಜನರ ಜೀವನಮಟ್ಟಸುಧಾರಿಸಲು ಸುಮಾರು 20 ವರ್ಷಗಳ ಕಾಲ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ರಾಜ್ಯದ 5 ಸಾವಿರ ಹಳ್ಳಿಗಳಲ್ಲಿ 2.50 ಲಕ್ಷ ಕುಟುಂಬಗಳು ಈ ಮೈಕ್ರೋ ಫೈನಾನ್ಸ್ ಸೇವೆ ಪಡೆದುಕೊಂಡಿದ್ದಾರೆ. ಈ ನಡುವೆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿವಾರಣೆಯಾಗದೇ ಜನಸಾಮಾನ್ಯರ ಬದುಕಿನಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿತು. ಹೀಗಾಗಿ ಮೊದಲು ವ್ಯವಸ್ಥೆ ಸರಿಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯದಿಂದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ತಿಳಿದುಕೊಂಡೆ. ಹೀಗಾಗಿ ಮೈಕ್ರೋ ಫೈನಾನ್ಸ್ ಕ್ಷೇತ್ರ ತೊರೆದು 2017ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾದೆ’ ಎಂದು ಡಾ. ರಮೇಶ್ ಬೆಲ್ಲಂಕೊಂಡ ತಿಳಿಸಿದರು.
ಇದನ್ನೂ ಓದಿ: ಇದೇ ಮೊದಲ ಬಾರಿ ಬಿಜೆಪಿ ವರ್ಸಸ್ ಶೆಟ್ಟರ್ ಫೈಟ್: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್‌ನಲ್ಲಿ ತುರುಸಿನ ಚುನಾವಣೆ
‘ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ನಮ್ಮ ಕುಟುಂಬದಲ್ಲಿ ಯಾರು ರಾಜಕೀಯದಲ್ಲಿ ಇರಲಿಲ್ಲ. ಕ್ಷೇತ್ರ ಯಾವುದೇ ಇದ್ದರೂ ಸಮಸ್ಯೆಗಳು ಸಾಮಾನ್ಯವಾಗಿ ಒಂದೇ ತೆರೆನಾಗಿರುತ್ತವೆ. ಸ್ವರೂಪ ವಿಭಿನ್ನವಾಗಿರುತ್ತದೆ. ಜನರ ಸಮಸ್ಯೆಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ದೆಹಲಿಯಲ್ಲಿ ನಮ್ಮ ಪಕ್ಷವು ಅದ್ಭುತ ಕೆಲಸಗಳನ್ನು ಮಾಡಿದೆ. ಜನ ಇದನ್ನು ಅರ್ಥ ಮಾಡಿಕೊಂಡರೆ, ಕರ್ನಾಟಕದಲ್ಲಿಯೂ ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ. ಈ ನಿಟ್ಟಿನಲ್ಲಿ ಮತಪ್ರಚಾರದ ವೇಳೆ ದೆಹಲಿ ಮಾದರಿಯ ಬಗ್ಗೆ ಹೇಳುತ್ತಿದ್ದೇವೆ. ಈ ಬಗ್ಗೆ ಅರಿವು ಇದ್ದವರು ನಮ್ಮನ್ನು ಬೆಂಬಲಿಸುತ್ತಿದ್ದಾರೆ’ ಎಂದು ರಮೇಶ್ ಹೇಳಿದರು.
ಭ್ರಷ್ಟಾಚಾರ ತೊಲಗದೆ ಬಡತನ ನಿವಾರಣೆ ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಬದಲಾವಣೆಯಾದಾಗ ಭ್ರಷ್ಟಾಚಾರ ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಆಮ್ ಆದಿ ಪಾರ್ಟಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಿದೆ. ಈ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಾಗುತ್ತಿದೆ. ಈ ಚುನಾವಣೆಯಲ್ಲಿ ನಾನು ಗೆಲುವ ಸಾಧಿಸುವ ವಿಶ್ವಾಸವಿದೆ.
- ಡಾ.ರಮೇಶ್ ಬೆಲ್ಲಂಕೊಂಡ, ವಿಜಯನಗರ ಕ್ಷೇತ್ರದ ಎಎಪಿ ಅಭ್ಯರ್ಥಿ
ಇದನ್ನೂ ಓದಿ: ಕ್ಷೇತ್ರ ಸಮೀಕ್ಷೆ ಬಳ್ಳಾರಿ: ಗಣಿನಾಡಲ್ಲಿ ರೆಡ್ಡಿ ಪ್ರವೇಶದಿಂದ ಚತುಷ್ಕೋನ ಸಮರ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಕ್ಷೇತ್ರ ಸಮೀಕ್ಷೆ ವಿಜಯಪುರ: ಕಮಲ ಬಿಗಿ ಹಿಡಿತದಿಂದ ಪಾರಾಗಲು ‘ಕೈ’ ಕಸರತ್ತು