ಕಾವ್ಯ ಸಮಾಜದ ಕನ್ನಡಿಯಾಗಬೇಕೆ ಹೊರತು ವೈಯಕ್ತಿಕ ಬರವಣಿಗೆಯ ಗೀಳಾಗಬಾರದು, ಕಾವ್ಯದ ಜವಾಬ್ದಾರಿಯನ್ನು ಹೊಸ ತಲೆಮಾರು ಎತ್ತಿ ಹಿಡಿಯಬೇಕು ಎಂದು ಕವಯಿತ್ರಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ.ಷರೀಫಾ ತಿಳಿಸಿದರು.
ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಸೆ.21): ತನ್ನ ಆತ್ಮಕ್ಕೆ ಹತ್ತಿದ ಬೆಂಕಿಯನ್ನು ಕಾವ್ಯದ ಮೂಲಕ ಪಸರಿಸಿ ಓದುಗರ ಆತ್ಮದೊಳಗೂ ಬೆಂಕಿ ಹತ್ತಿಸುವುದೇ ಕಾವ್ಯದ ಕೆಲಸ. ಕಾವ್ಯ ಸಮಾಜದ ಕನ್ನಡಿಯಾಗಬೇಕೆ ಹೊರತು ವೈಯಕ್ತಿಕ ಬರವಣಿಗೆಯ ಗೀಳಾಗಬಾರದು, ಕಾವ್ಯದ ಜವಾಬ್ದಾರಿಯನ್ನು ಹೊಸ ತಲೆಮಾರು ಎತ್ತಿ ಹಿಡಿಯಬೇಕು ಎಂದು ಕವಯಿತ್ರಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ.ಷರೀಫಾ ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕ್ಯಾಂಪಸ್ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
"ಕಾವ್ಯ,ಕವಿತೆಗಳು ವ್ಯವಸ್ಥೆಯ ಪ್ರತಿಬಿಂಬವಾಗಿದೆ.ಜನರ ಕಷ್ಟಗಳು,ಆಯಾ ಕಾಲಘಟ್ಟದ ಸಮಸ್ಯೆಗಳನ್ನು ಕುರಿತು ಸಂದರ್ಭಾನುಸಾರವಾಗಿ ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯವಾಗಿದೆ. ಆದರೆ ಪ್ರಸ್ತುತ ದಿನಮಾನದಲ್ಲಿ ಕವಿತೆ ವೈಯಕ್ತಿಕ ವಿಚಾರಗಳನ್ನು ವಿಜೃಂಭಿಸುವ ರೂಪ ತಾಳಿದೆ, ಕಾವ್ಯಕ್ಕೆ ತನ್ನದೇ ಆದ ಜವಾಬ್ದಾರಿಗಳಿದೆ,ಕಾವ್ಯ ಎಂದಿಗೂ ವೈಯಕ್ತಿಕ ತೆವಲಿಗೆ ಬಲಿಯಾಗಬಾರದು,ಸಮಾಜದ ಗಟ್ಟಿ ದನಿಯಾಗಿರಬೇಕು. ಕಾವ್ಯ ಕೇವಲ ಶಬ್ದಗಳ ಜೋಡಣೆಯಲ್ಲ,ಮನದೊಳಗಿನ ತುಡಿತ, ಒಡಲಿನ ಸಂಕಷ್ಟ,ಆಂತರ್ಯದ ಅಳಲಿನ ಭಾಷೆಯಾಗಿರಬೇಕು.ಕಾವ್ಯ ಕೇವಲ ಕವಿತೆಯಲ್ಲ ಅದೊಂದು ಚರಿತ್ರೆ ಎಂದು ಮನದಟ್ಟು ಮಾಡಿದರು.
ಕರ್ನಾಟಕ ರಾಜ್ಯ ಸೈದ್ದಾಂತಿಕ, ತಾತ್ವಿಕ ಚಳುವಳಿಗಳನ್ನು ಕಂಡ ನೆಲ.70 ಮತ್ತು 80 ರ ದಶಕದಲ್ಲಿ ದಲಿತ,ಬಂಡಾಯ,ರೈತ,ಮಹಿಳಾ,ಕಾರ್ಮಿಕ,ಸಾಹಿತ್ಯ ಚಳುವಳಿಗಳು ತನ್ನದೇ ಹಿರಿಮೆ ಸಾಧಿಸಿತ್ತು ಆದರೆ ಈಗ ಚಳುವಳಿಗಳು ಹೊಡೆದು ಚೂರಾಗಿದೆ. ಭಾರತಕ್ಕೆ ಬಂಡವಾಳ ಹರಿದು ಬಂದ ನಂತರ ಚಳುವಳಿಗಳ ರೂಪ ಬದಲಾಗಿದೆ.1990 ರ ದಶಕದಲ್ಲಿ ಕಂಡ ಆರ್ಥಿಕ ಬದಲಾವಣೆ ನಂತರ ಚಳುವಳಿಗಳು ಬಂಡವಾಳಗಳಾಗಿದೆ. ಕಾರ್ಪೋರೆಟ್ ಸಂಸ್ಥೆಗಳು ಸಾಹಿತ್ಯ ಕ್ಷೇತ್ರವನ್ನೂ ಪ್ರವೇಶಿಸಿ ಪ್ರಾಯೋಜಕತ್ವ, ಸರ್ಕಾರಿ ಅನುದಾನ ಎಂಬ ಹೊಸ ಪ್ರಯೋಗ ಶುರು ಮಾಡಿ ಸಾಹಿತ್ಯ ಸಿರಿಯನ್ನು ಬಂಡವಾಳ ವಲಯವನ್ನಾಗಿ ಮಾಡಿದೆ. ತಾಯಿಯ ಗರ್ಭದಿಂದ ಸಾಹಿತ್ಯ ಕ್ಷೇತ್ರದವರೆಗೂ ಎಲ್ಲವೂ ಖಾಸಗಿ ಕ್ಷೇತ್ರಗಳ ಪಾರುಪತ್ಯದಲ್ಲಿದೆ. ಹಾಗಾಗಿ ವೈಚಾರಿಕ, ಪ್ರಜ್ಞಾಪೂರ್ವಕ ಸಾಹಿತ್ಯದ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
'ಐಶೂ..' ಅಲ್ಲ ವೈಶೂ.. ಚೆಲುವಿನ ಚಿತ್ತಾರ-2 ಸಿನಿಮಾ ಮಾಡಿದ್ರೆ ವೈಷ್ಣವಿ ಗೌಡನೇ ಹೀರೋಯಿನ್!
ದೇಶದಲ್ಲಿ ನಿರುದ್ಯೋಗ, ಬಡತನ,ಆತ್ಮಹತ್ಯೆ,ರೈತರ ಗೋಳು,ಆರ್ಥಿಕ ಸಂಕಷ್ಟಗಳು ತಲೆದೋರಿದೆ.ಅಧಿಕಾರ,ಸಂಪತ್ತು,ಜ್ಞಾನ ಇಲ್ಲದವರಿಗೆ ಅವುಗಳನ್ನು ಕೊಡಿಸುವ ರೂಪದಲ್ಲಿ ಕಾವ್ಯ ಕೆಲಸ ಮಾಡಬೇಕು. ಕಾವ್ಯದ ಶಕ್ತಿ ಕತ್ತಿಯಷ್ಟಿದೆ ಹೊಸ ತಲೆಮಾರಿನ ಬರಹಗಾರರು ಸಮಾಜದ ಕಷ್ಟಗಳ ಅರಿತು ಕಾವ್ಯ ರಚಿಸಬೇಕು ಆಗ ಮಾತ್ರ ಸ್ವಸ್ಥಸಮಾಜ ನಿರ್ಮಾಣ ಸಾಧ್ಯ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿ ಸ್ವರಚಿತ ಕವನ ವಾಚನ ಮಾಡಿದರು. ಕೆ.ಷರೀಫಾರನ್ನು ಕನ್ನಡ ಅಧ್ಯಯನ ಕೇಂದ್ರದಿಂದ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ರೂಮಿ ಹರೀಶ್,ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಡಿ.ಡೊಮಿನಿಕ್,ಡಾ.ಬಿ.ಗಂಗಾಧರ ಸೇರಿದಂತೆ ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.