ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಕಾರಣಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕೆಪಿಸಿಸಿ ವಕ್ತಾರ ಮೈಸೂರಿನ ಲಕ್ಷ್ಮಣ್ ಅವರ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.12): ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕೆಪಿಸಿಸಿ ವಕ್ತಾರ ಮೈಸೂರಿನ ಲಕ್ಷ್ಮಣ್ ಅವರ ವಿರುದ್ಧ ಇಂದು ಚಿಕ್ಕಮಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಲಕ್ಷ್ಮಣ್ ಸಿ.ಟಿ.ರವಿ ಅವರ ವೈಯುಕ್ತಿಕ ವಿಚಾರ ಹಾಗೂ ಆದಾಯ, ಅಸ್ತಿಯ ವಿಚಾರವಾಗಿ ಹೇಳಿಕೆ ನೀಡಿದ್ದರು. ಈ ವೇಳೆ ತಮ್ಮ ವಿರುದ್ಧ ಇಡೀ ರಾಜ್ಯದಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಚಾರಿತ್ರ್ಯವಧೆ ಮಾಡುವ ಕೆಲಸವನ್ನು ಲಕ್ಷ್ಮಣ್ ಮಾಡಿದ್ದಾರೆ ಎಂದು ಆರೋಪಿಸಿರುವ ರವಿ, ಹೈಕೋರ್ಟ್ ವಕೀಲ ಮಹೇಶ್ ಅವರೊಂದಿಗೆ ಖುದ್ದು ನಗರದ 2 ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗಿ ಮೊಕದ್ದಮೆ ದಾಖಲು ಮಾಡಿದರು.
21ಕ್ಕೆ ಪ್ರಮಾಣೀಕೃತ ಹೇಳಿಕೆ ಸಲ್ಲಿಸಲು ಅವಕಾಶ:
ಈ ವೇಳೆ ವಕೀಲ ಮಹೇಶ್ ಮಾತನಾಡಿ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು ಸಿಟಿ ರವಿ ಅವರ ಅವರ ಮೇಲೆ 20-4-2022ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹಲವಾರು ಆರೋಪಗಳನ್ನು ಮಾಡಿದ್ದರು. ಆ ಬಗ್ಗೆ ಕಾನೂನು ಸಮರ ಆರಂಭಿಸಿದ್ದೇವೆ. ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಲ್ಲಿಸಲಾಗಿದೆ ಎಂದರು. ಈ ಬಗ್ಗೆ ಪ್ರಮಾಣೀಕೃತ ಹೇಳಿಕೆ ಸಲ್ಲಿಸಲು ನ್ಯಾಯಾಲಯ ದಿನಾಂಕ 21.2.2023ರವರೆಗೆ ಅವಕಾಶ ನೀಡಿ ಮುಂದೂಡಿದೆ.
ಸಿ.ಟಿ.ರವಿ ಮತ್ತು ಅವರ ಭಾವಮೈದುನ ಸೇರಿಕೊಂಡು ಕೆಲವು ಆಸ್ತಿ ಪಾಸ್ತಿ ಮಾಡಿಕೊಂಡಿದ್ದಾರೆ ಹಾಗೂ ಗುತ್ತಿಗೆಗಳೆಲ್ಲವೂ ಅವರಿಗೆ ಹೋಗುವಂತೆ ಮಾಡಿಕೊಂಡಿದ್ದಾರೆ ಎನ್ನುವುದು ಸೇರಿದಂತೆ ಹಲವಾರು ಆರೋಪಗಳನ್ನು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಮಾಡಿದ್ದಾರೆ ಅದರಲ್ಲಿ ಯಾವುದೇ ಹುರುಳಿಲ್ಲ ಎಂದರು. ನಾವು ಎಲ್ಲಾ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಿದ್ದೇವೆ. ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸುವಾಗಲೂ ಸಿ.ಟಿ.ರವಿ ಅವರು ಚುನಾವಣಾಧಿಕಾರಿ ಮುಂದೆ ಹಾಗೂ ಲೋಕಾಯುಕ್ತ ಮುಂದೆ ಆಸ್ತಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹಾಗೂ ತೆರಿಗೆ ಪಾವತಿ ಕುರಿತಂತೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದರು.
ರಾಜ್ಯದಲ್ಲಿ 'ಸ್ಯಾಂಟ್ರೋ ರವಿ' ರಾಜಕೀಯ ಫೈಟ್: ಇದು ಡಿವೈಎಸ್‌ಪಿ ಪುತ್ರ ಪಿಂಪ್ ಆದ ಕತೆ
ಹಿಟ್ ಅಂಡ್ ರನ್ ಪ್ರವೃತ್ತಿ:
ಶಾಸಕ ಸಿ.ಟಿ.ರವಿ ಮಾತನಾಡಿ, ಕೆಲವರಲ್ಲಿ ಹಿಟ್ ಅಂಡ್ ರನ್ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಯಾರ ಮೇಲೆ ಏನು ಬೇಕಾದರೂ ಹೇಳಬಹುದು ಎನ್ನುವ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಸುಳ್ಳು ಆರೋಪ ಮಾಡಿದ ಮೇಲೂ ಭಂಡತನದಿಂದ ಸಮರ್ಥಿಸಿಕೊಳ್ಳುವ ಕೆಟ್ಟ ಮನಸ್ಥಿತಿ ಇದೆ. ಹೀಗಾಗಿ ನಾವು ಕಾನೂನು ಮೂಲಕ ನ್ಯಾಯ ಪಡೆಯುವುದು ಮತ್ತು ಯಾರ ಮೇಲೆ ಬೇಕಾದರೂ ಆರೋಪ ಮಾಡುವುದು ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ ಎಂದು ನಿರೂಪಿಸಬೇಕಿರುವ ಆಧ್ಯತೆ ನನ್ನ ಮೇಲಿದೆ ಎಂದರು.
ಚಿಕ್ಕಮಗಳೂರು ಹಬ್ಬಕ್ಕೆ ಭರದ ಸಿದ್ದತೆ: ಪ್ರಧಾನಿ ಮೋದಿ ಆಗಮನದ ನಿರೀಕ್ಷೆ
ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸಲ್ಲದ ಆರೋಪ ಮಾಡಿದ್ದಾರೆ. ಹಿಂದೆ ಲಾಯರ್ ನೋಟೀಸು ನೀಡಿದ್ದರೂ ಸಹ ಅದಕ್ಕೆ ಅವರು ಸಮರ್ಪಕವಾಗಿ ಉತ್ತರವನ್ನು ಕೊಟ್ಟಿಲ್ಲ. ಇದನ್ನೆಲ್ಲಾ ಆಧರಿಸಿ ನಮ್ಮ ವಕೀಲರ ಮೂಲಕ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸಲ್ಲಿಸಿದ್ದೇವೆ. ಯಾರೇ ಸುಳ್ಳು ಆರೋಪ ಮಾಡಿದರೂ ಅವರನ್ನು ಕಾನೂನಿನ ಮೂಲಕ ನಾವು ಎದುರಿಸುತ್ತೇವೆ ಎಂದರು.ಜನರ ವಿಶ್ವಾಸ ನಮಗೆ ಇದೆ. ಜನ ಇವರ ಮಾತನ್ನು ನಂಬುವುದಿಲ್ಲ. ಇವರ ಹಣೆಬರಹ ಏನು ಎನ್ನುವುದು ಜನರಿಗೆ ಗೊತ್ತಿದೆ. ಆದರೆ ಬಾಯಿಗೆ ಬಂದಂತೆ ಮಾತನಾಡಬಹುದು ಎನ್ನುವ ಮನಸ್ಥಿತಿಗೆ ಬ್ರೇಕ್ ಹಾಕುವ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸುವ ಕೆಲಸ ಮಾಡಿದ್ದೇವೆ ಎಂದರು.