
ಮೈಸೂರು(ಏ.12): ಕನ್ನಡ ಪುಸ್ತಕ ಪ್ರೇಮಿ, ಕನ್ನಡಪ್ರಭ-ಸುವರ್ಣ ನ್ಯೂಸ್‌ನ 2019ರ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ವಿಜೇತ ಸೈಯದ್ ಇಸಾಕ್ ಬೆನ್ನಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ನಿಂತಿದ್ದಾರೆ.
ಫೋನ್ ಮಾಡಿ ಇಸಾಕ್‌ಗೆ ಧೈರ್ಯ ತುಂಬಿದ ವಿಜಯೇಂದ್ರ, ನೂತನ ಗ್ರಂಥಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಜಯೇಂದ್ರ ಸೂಚನೆ ಮೇರೆಗೆ ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವಿಜಯೇಂದ್ರ ಜೊತೆ ಸೈಯದ್ ಇಸಾಕ್ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿಸಿದರು. ಬಿ.ವೈ. ವಿಜಯೇಂದ್ರ ಅವರ ಆದೇಶದಂತೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ಸಂಪೂರ್ಣ ವಿಚಾರದ ವರದಿ ನೀಡುತ್ತೇನೆ. ಇದೇ ಸ್ಥಳವನ್ನೇ ಗ್ರಂಥಾಲಯಕ್ಕೆ ಮಂಜೂರು ಮಾಡಿಸುತ್ತೇನೆ. ಇಸಾಕ್‌ಗೆ ಶಾಶ್ವತ ಪರಿಹಾರ ಕೊಡಿಸುತ್ತೇವೆ ಎಂದು ರಾಜೇಂದ್ರ ತಿಳಿಸಿದರು.
ಮೈಸೂರು ಪುಸ್ತಕ ಪ್ರೇಮಿ ಸೈಯದ್ ಇಸಾಕ್‌ಗೆ ಹರಿದು ಬಂತು ನೆರವಿನ ಮಹಾಪೂರ
ಉಪ ಮೇಯರ್ ಭೇಟಿ:
ಇಸಾಕ್‌ರ ಕನ್ನಡ ಪ್ರೀತಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಉಪ ಮೇಯರ್ ಅನ್ವರ್ ಬೇಗ್ ಅದೇ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇಸಾಕ್ ಅವರು ತಮ್ಮ ನಿವಾಸದ ಬಳಿ ನಿರ್ಮಿಸಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಶುಕ್ರವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ವೇಳೆ 11,000ಕ್ಕೂ ಹೆಚ್ಚು ಪುಸ್ತಕಗಳು ಸುಟ್ಟು ಭಸ್ಮವಾಗಿದ್ದವು. ಇದನ್ನು ತಿಳಿದು ರಾಜ್ಯದ ಮೂಲೆಮೂಲೆಗಳಿಂದ ದಾನಿಗಳು ಉದಾರ ನೆರವು ನೀಡುತ್ತಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ನಜೀರ್ ಅವರು ಇಸಾಕ್ ಅವರನ್ನು ಖುದ್ದು ಭೇಟಿಯಾಗಿ 2 ಲಕ್ಷ ನೆರವು ನೀಡಿದ್ದಾರೆ. ಇದಲ್ಲದೇ ಕೆಲವು ಸಾಮಾಜಿಕ ಕಾರ್ಯಕರ್ತರು ಆನ್‌ಲೈನ್ ಮೂಲಕ ಅಭಿಯಾನ ನಡೆಸಿ, ಹಣ ಸಂಗ್ರಹಿಸುತ್ತಿದ್ದಾರೆ. ಹಲವು ಪ್ರಕಾಶಕರು ನೆರವಿನ ಹಸ್ತ ಚಾಚಿದ್ದಾರೆ.
ಪ್ರಸ್ತುತ ಈ ಸ್ಥಳವು ಸಿಐಟಿಬಿಗೆ (ಇಂದಿನ ಎಂಡಿಎ) ಸೇರಿದ್ದು, ಗ್ರಂಥಾಲಯ ನಿರ್ಮಿಸುವಷ್ಟು ಸ್ಥಳವನ್ನು ಮಂಜೂರು ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯುವುದಿಲ್ಲ. ಆ ಗ್ರಂಥಾಲಯಕ್ಕೆ ಯಾರ ಹೆಸರು ಬೇಕಿಲ್ಲ. ಕನ್ನಡ ಸಾರ್ವಜನಿಕ ಗ್ರಂಥಾಲಯ ಎಂದೇ ನಮೂದಾಗಬೇಕು. ಈ ಭಾಗದಲ್ಲಿ ಶೇ.98ರಷ್ಟು ಉರ್ದು ಭಾಷಿಗರು ಇದ್ದಾರೆ. ಇಲ್ಲಿ ಕನ್ನಡದ ಅಗತ್ಯವಿದ್ದು, ಹೆಚ್ಚು ಹೆಚ್ಚು ಕನ್ನಡ ಬೆಳೆಸುವ ಕೆಲಸ ಮಾಡಬೇಕು ಎಂದು ಕನ್ನಡ ಪ್ರೇಮಿ ಸೈಯದ್ ಇಸಾಕ್ ತಿಳಿಸಿದ್ದಾರೆ.