ಕೊರೋನಾ ಅಟ್ಟಹಾಸ: ಬೆಡ್‌ ಸಿಗದೆ 3 ಆಸ್ಪತ್ರೆಗೆ ಅಲೆದು ವ್ಯಕ್ತಿ ಸಾವು

By Kannadaprabha NewsFirst Published Apr 12, 2021, 7:45 AM IST
Highlights

ಬೆಂಗಳೂರಿನಲ್ಲಿ ನಡೆದ ಘಟನೆ| ಮೊದಲು ಹಾಸಿಗೆ ಇದೆ ಎಂದ ಆಸ್ಪತ್ರೆಗಳು ಕೊನೆಯಲ್ಲಿ ಇಲ್ಲ ಎಂದು ಹೇಳಿ ಅಮಾನವೀಯತೆ| ಆಸ್ಪತ್ರೆಗೆ ಶೋಕಾಸ್‌ ನೋಟಿಸ್‌| ಆಸ್ಪತ್ರೆ ಉತ್ತರ ನೀಡಿದ ಬಳಿಕ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ: ಬಿಬಿಎಂಪಿ| 
 

ಬೆಂಗಳೂರು(ಏ.12): ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ಆರಂಭದ ದಿನದಲ್ಲೇ 33 ವರ್ಷ ವಯಸ್ಸಿನ ಕೋವಿಡ್‌ ರೋಗಿಯೊಬ್ಬರು ಮೂರು ಆಸ್ಪತ್ರೆಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ಸಿಗದೆ ಶನಿವಾರ ನಸುಕಿನ ವೇಳೆ ಮರಣವನ್ನಪ್ಪಿದ್ದಾರೆ.

ವ್ಯಕ್ತಿಯೊಬ್ಬರು ಮಡಿವಾಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ನ್ಯೂಮೋನಿಯಾಕ್ಕೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಆದರೆ ಆ ಬಳಿಕ ಕೋವಿಡ್‌ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ರೋಗಿಯನ್ನು ಡಿಸ್‌ಚಾರ್ಜ್‌ ಮಾಡುವಂತೆ ಶುಕ್ರವಾರ ಸಂಜೆ ಆಸ್ಪತ್ರೆ ಸೂಚಿಸಿತ್ತು. ಆಗ ಕೋವಿಡ್‌ ರೋಗಿಗಳಿಗೆ ನೆರವು ನೀಡುವ ಎನ್‌ಜಿಒ ಸಂಸ್ಥೆಯನ್ನು ರೋಗಿಯ ಸಂಬಂಧಿಕರು ಸಂಪರ್ಕಿಸಿದ್ದರು.

ಎನ್‌ಜಿಒ ಸದಸ್ಯರ ನೆರವಿನಿಂದ 108 ಆ್ಯಂಬುಲೆನ್ಸ್‌ನ ಮೂಲಕ ಶುಕ್ರವಾರ ರಾತ್ರಿ 8.15ಕ್ಕೆ ವಸಂತ ನಗರದಲ್ಲಿರುವ ಮಹಾವೀರ ಜೈನ್‌ ಆಸ್ಪತ್ರೆಯಲ್ಲಿ ಎಚ್‌ಡಿಯು (ಹೈ ಡಿಪೆಂಡೆನ್ಸಿ ಯೂನಿಟ್‌) ಹಾಸಿಗೆಯನ್ನು ಕಾದಿರಿಸಲಾಗಿತ್ತು. 8.30ಕ್ಕೆ ರೋಗಿ ಆಸ್ಪತ್ರೆ ತಲುಪಿದಾಗ ಬೆಡ್‌ ಇಲ್ಲ ಎಂದು ಆಸ್ಪತ್ರೆ ಹೇಳಿದೆ. ರೋಗಿಯ ಸಂಬಂಧಿಕರು ರೋಗಿಯ ಆಮ್ಲಜನಕದ ಮಟ್ಟ ಪರೀಕ್ಷಿಸುವಂತೆ, ಆ್ಯಂಬುಲೆನ್ಸ್‌ನ ಸಿಲಿಂಡರ್‌ಗೆ ಆಮ್ಲಜನಕ ನೀಡುವಂತೆ ಮಾಡಿಕೊಂಡ ಮನವಿಯನ್ನೂ ಕೂಡ ಆಸ್ಪತ್ರೆ ನಿರಾಕರಿಸಿತು ಎಂದು ಎನ್‌ಜಿಒ ಸದಸ್ಯರು ಹೇಳಿದ್ದಾರೆ.

ಕೊರೋನಾ ವ್ಯಾಕ್ಸೀನ್ ಹಾಕಿಸ್ಕೊಂಡವರ ಕುಟುಂಬಕ್ಕೆ ತೆರಿಗೆ ರಿಯಾಯಿತಿ..!

ಬಳಿಕ 9 ಗಂಟೆಗೆ ಮತ್ತೊಂದು ಆಸ್ಪತ್ರೆಗೆ ಹುಡುಕಾಟ ಪ್ರಾರಂಭಿಸಿದಾಗ ಇಲ್ಲಿಂದ 12 ಕಿ.ಮೀ. ದೂರದ ಇದೇ ಆಸ್ಪತ್ರೆಯ ಸಮೂಹಕ್ಕೆ ಸೇರಿದ ಮಹಾವೀರ ಜೈನ ಆಸ್ಪತ್ರೆಯಲ್ಲಿ ಬೆಡ್‌ ಖಾಲಿ ಇರುವುದು ಗೊತ್ತಾಯಿತು. 9.50ಕ್ಕೆ ತಮ್ಮಲ್ಲಿ ಹಾಸಿಗೆ ಇಲ್ಲ ಎಂದು ಆಸ್ಪತ್ರೆಯು ತಿಳಿಸಿತ್ತು. ರೋಗಿಯ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವಂತೆ ವಿನಂತಿಸಿದಾಗ ಒಪ್ಪಿಕೊಂಡರು. ಆಗ ಆಮ್ಲಜನಕದ ಮಟ್ಟಅಪಾಯಕಾರಿ ಮಟ್ಟಕ್ಕೆ ಇಳಿತ್ತು.

ಸುಮಾರು 30 ನಿಮಿಷ ಮನವಿ ಮಾಡಿಕೊಂಡ ಬಳಿಕ ರೋಗಿಯನ್ನು ತುರ್ತು ಕೊಠಡಿಗೆ ಕರೆದುಕೊಂಡು ಹೋದಾಗ ರೋಗಿಯ ಆಮ್ಲಜನಕದ ಮಟ್ಟತೀರಾ ಕಡಿಮೆ ಇತ್ತು. ಸ್ವಲ್ಪ ಹೊತ್ತು ರೋಗಿಗೆ ಚಿಕಿತ್ಸೆ ನೀಡಿ ಆರೋಗ್ಯ ತುಸು ಸುಧಾರಿಸಿದ ಬಳಿಕ ಈತನಿಗೆ ತುರ್ತು ಕೊಠಡಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ಬೇರೆಡೆ ಶಿಫ್ಟ್‌ ಮಾಡುವಂತೆ ಹೇಳಿದ್ದರು. ಶನಿವಾರ ರಾತ್ರಿಯೇ ಆತನಿಗೆ ಕೋರಮಂಗಲದ ಆಸ್ಪತ್ರೆಯಲ್ಲಿ ಹಾಸಿಗೆ ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ವೆಂಟಿಲೇಟರ್‌ ಇರುವ ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ಅಲ್ಲಿಗೆ ಕೊಂಡೊಯ್ಯಲಾಯಿತು. ಆದರೆ ನಸುಕಿನ ಜಾವ 4 ಗಂಟೆಗೆ ರೋಗಿ ಮರಣವನ್ನಪ್ಪುತ್ತಾನೆ ಎಂದು ಅವರು ಎನ್‌ಜಿಒ ಸದಸ್ಯರು ವಿವರಿಸಿದರು.

ಆಸ್ಪತ್ರೆಗೆ ಈಗಾಗಲೇ ಶೋಕಾಸ್‌ ನೋಟಿಸ್‌ ನೀಡಿದ್ದ ಸೋಮವಾರ ಸಂಜೆಯೊಳಗೆ ಉತ್ತರಿಸಬೇಕಿದೆ. ಆಸ್ಪತ್ರೆ ಉತ್ತರ ನೀಡಿದ ಬಳಿಕ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.
 

click me!