ಆರ್ಥಿಕ ಚಟುವಟಿಕೆಗೆ ನಿಯಮ ಕಡ್ಡಾಯ; ದಾವಣಗೆರೆ ಜಿಲ್ಲಾಧಿಕಾರಿ

By Suvarna News  |  First Published May 19, 2020, 1:42 PM IST

ದಾವಣಗೆರೆ ಅಗತ್ಯ ಸೇವೆಗೆ ಸಂಬಂಧಿಸಿದ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕರೊಂದಿಗೆ ಹಿಂಬದಿಯಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ ಎಂದು ದಾವಣಗೆರೆ ಡಿಸಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 


ದಾವಣಗೆರೆ(ಮೇ.19): ಸರ್ಕಾರದ ಆದೇಶದಂತೆ ಕಂಟೈನ್‌ಮೆಂಟ್‌ ಝೋನ್‌ ಹೊರತುಪಡಿಸಿ ನಗರ ಪಾಲಿಕೆ ವ್ಯಾಪ್ತಿ ಪ್ರದೇಶದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ 6 ಅಡಿಗಳ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ, ಸ್ಯಾನಿಟೇಸರ್‌ ಬಳಕೆಯ ಷರತ್ತಿಗೊಳಪಟ್ಟು, ಹವಾ ನಿಯಂತ್ರಿತ ಸಲಕರಣೆ ಉಪಯೋಗಿಸದೇ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ನಡೆಸಲು ಅನುಮತಿ ನೀಡಲಾಗಿದೆ.

ವಿಶೇಷ ಆರ್ಥಿಕ ವಲಯ, ರಫ್ತು ಆಧಾರಿತ ಘಟಕ, ಕೈಗಾರಿಕೆ ಎಸ್ಟೇಟ್‌, ಕೈಗಾರಿಕಾ ನಗರಗಳು, ಅವಶ್ಯಕ ವಸ್ತುಗಳ ತಯಾರಿಕಾ ಘಟಕ, ಔಷಧಿ, ವೈದ್ಯಕೀಯ ಸಲಕರಣೆ, ಫಾರ್ಮಾಸಿಟಿಕಲ್‌ ಹಾಗೂ ಅದಕ್ಕೆ ಸಂಬಂಧಿಸಿದ ಕಚ್ಚಾ ಸಾಮಗ್ರಿ ಘಟಕಗಳು, ತಯಾರಿಕಾ ಘಟಕಗಳು ಮತ್ತು ಅವುಗಳ ಸರಪಳಿಗಳು, ಐಟಿ ಹಾರ್ಡ್‌ ವೇರ್‌ ತಯಾರಿಕಾ ಘಟಕ, ಪ್ಯಾಕೇಜಿಂಗ್‌ ಸಾಮಗ್ರಿಗಳ ತಯಾರಿಕಾ ಘಟಕಗಳು ಸಾಮಾಜಿಕ ಅಂತರದೊಂದಿಗೆ ಕರ್ತವ್ಯ
ನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದ್ದಾರೆ.

Latest Videos

undefined

ನಗರ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ಚಟುವಟಿಕೆಗಳು ಸ್ಥಳೀಯವಾಗಿ ಕಾರ್ಮಿಕರು ಲಭ್ಯವಿದ್ದಲ್ಲಿ ಮಾತ್ರ ನಡೆಸಬಹುದು. ಹೊರಗಿನಿಂದ ಕಾರ್ಮಿಕರನ್ನು ಕರೆ ತರುವಂತಿಲ್ಲ. ನವೀಕರಿಸಬಹುದಾದ ಇಂಧನ ಯೋಜನೆಗಳ ಕಾಮಗಾರಿ ಕೈಗೊಳ್ಳಬಹುದು. ಮಾಲ್‌, ಮಾರುಕಟ್ಟೆ, ಮಾರುಕಟ್ಟೆಸಂಕೀರ್ಣ, ಕ್ಷೌರಿಕ ಅಂಗಡಿ, ಬ್ಯೂಟಿಪಾರ್ಲರ್‌, ಸ್ಪಾಗಳು, ಸಲೂನ್‌ಗಳನ್ನು ಮುಚ್ಚಬೇಕು. ಅವಶ್ಯಕ ಸಾಮಗ್ರಿ ಪೂರೈಸುವ ಅಂಗಡಿಗಳು ಮಾತ್ರ ಮಾರುಕಟ್ಟೆ, ಮಾರುಕಟ್ಟೆ ಸಂಕೀರ್ಣಗಳಲ್ಲಿ ತೆರೆಯಬಹುದು.

ಬಸ್‌ ಸಂಚಾರಕ್ಕೆ ಅನುಮತಿಯೇನೋ ಸಿಕ್ಕಿದೆ ಆದ್ರೆ ಪ್ರಯಾಣಿಕರ ಪರದಾಟ ತಪ್ಪಿಲ್ಲ..!

ಅವಶ್ಯಕ ಮತ್ತು ಅವಶ್ಯಕವಲ್ಲದ ಪದಾರ್ಥಗಳ ಅಂಗಡಿಗಳು ಸೇರಿದಂತೆ ಎಲ್ಲಾ ಒಂಟಿ ಅಂಗಡಿಗಳು, ಬಡಾವಣೆ ಅಂಗಡಿಗಳು, ವಸತಿ ಸಮುಚ್ಛಯಗಳ ಅಂಗಡಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡ ಬಗ್ಗೆ ಹಾಗೂ ಮುಂದುವರಿಸುವ ಬಗ್ಗೆ ಸಂಬಂಧಿಸಿದ ಅಂಗಡಿ ಮಾಲೀಕರು ಪಾಲಿಕೆ ಆಯುಕ್ತರಿಗೆ ಸ್ವಯಂ ಘೋಷಣಾ ಮುಚ್ಚಳಿಕೆ ಪತ್ರ ಸಲ್ಲಿಸಿ, ಅಂಗಡಿ ತೆರೆಯಬಹುದು.

ಖಾಸಗಿ ಕಚೇರಿಗಳು ಶೇ.33 ಸಿಬ್ಬಂದಿ ಮೂಲಕ ತೆರೆಯಬಹುದು. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸಬಹುದು. ಅವಶ್ಯಕ ವಸ್ತುಗಳಿಗೆ ಸಂಬಂಧಿಸಿದಂತೆ ಮಾತ್ರ ಇ-ಕಾಮರ್ಸ್‌ ಚಟುವಟಿಕೆ ನಡೆಸಬಹುದಾಗಿದೆ. ಸರ್ಕಾರದ ನಿರ್ದೇಶನಾನುಸಾರ ರಾಜ್ಯ ಸರ್ಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸತಕ್ಕದ್ದು.

ಅಗತ್ಯ ಸೇವೆಗೆ ಸಂಬಂಧಿಸಿದ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕರೊಂದಿಗೆ ಹಿಂಬದಿಯಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ದ್ವಿಚಕ್ರ ವಾಹನಗಳಲ್ಲಿ ವಾಹನ ಸವಾರರು ಮಾತ್ರ ಸಂಚರಿಸಬಹುದಾಗಿದ್ದು, ಹಿಂಬದಿ ಸಂಚಾರ ನಿರ್ಬಂಧಿಸಲಾಗಿದೆ. ಸೈಕಲ್‌, ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್‌, ಬಸ್‌ ಸಂಚಾರ ನಿಷೇಧಿಸಲಾಗಿದೆ.

ಸರ್ಕಾರ ನಿಗದಿಪಡಿಸಿದ ಮುಂಜಾಗ್ರತಾ ಕ್ರಮ ಕಡ್ಡಾಯ ಪಾಲಿಸಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತೀವ್ರ ಮೇಲ್ವಿಚಾರಣೆ ನಡೆಸುವುದು ಮತ್ತು ಉಲ್ಲಂಘಿಸಿದವರಿಗೆ 2 ಸಲ ನೋಟಿಸ್‌ ನೀಡಬೇಕು. ಪುನಾ ಆದೇಶ ಉಲ್ಲಂಘಿಸಿದರೆ ಸಂಬಂಧಿಸಿದ ಕೈಗಾರಿಕೆ, ಅಂಗಡಿಗಳ ಕಾರ್ಯ ಚಟುವಟಿಕೆ ಸೀಲ್‌ ಮಾಡಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು - ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

click me!