ಲಾಕ್‌ಡೌನ್‌ನಿಂದ ರಕ್ತದಾನಿಗಳ ಸಂಖ್ಯೆ ಇಳಿಮುಖ: ಡಿಸಿ ಶಿವಕುಮಾರ್‌

By Kannadaprabha NewsFirst Published May 19, 2020, 12:49 PM IST
Highlights

ಸಂಶೋಧನಾ ವರದಿಗಳ ಪ್ರಕಾರ ರಕ್ತದಾನ ಮಾಡುವ ವ್ಯಕ್ತಿಗಳಲ್ಲಿ ಶೇ. 80ರಷ್ಟುಹೃದಯಾಘಾತ ಕಡಿಮೆ ಆಗುತ್ತದೆ ಎನ್ನಲಾಗಿದೆ. ಒಂದು ಯೂನಿಟ್‌ ರಕ್ತದಾನದಿಂದ ಮೂವರು ರೋಗಿಗಳ ಜೀವ ಉಳಿಸಲು ಸಾಧ್ಯತೆ ಇದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.19): ಇಂದಿನ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇದ್ದು, ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ​ಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು.

ಇಲ್ಲಿನ ವಿನೋಬನಗರದ ಮೂರ್ತಿ ಸೈಕಲ್ಸ್‌ ಮತ್ತು ಫಿಟ್ನೆಸ್‌ ಸೆಂಟರ್‌ನಲ್ಲಿ ಶಿವಮೊಗ್ಗ ಸೈಕಲ್‌ ಕ್ಲಬ್‌ನಿಂದ ಆಯೋಜಿಸಿದ್ದ ಬೃಹತ್‌ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಆಗಿದ್ದರಿಂದ ರಕ್ತದಾನಿಗಳ ಸಂಖ್ಯೆಯಲ್ಲಿ ಇಳಿಮುಖ ಆಗಿತ್ತು. ಅಲ್ಲದೇ ರಕ್ತದ ಅವಶ್ಯಕತೆ ಹೆಚ್ಚಿನ ಬೇಡಿಕೆ ಇತ್ತು ಎಂದ ಅವರು, ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢತೆ ಜತೆಗೆ ಅನೇಕ ಉಪಯುಕ್ತ ಅಂಶಗಳಿವೆ. ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ ರಕ್ತದಾನ ಮಾಡುವ ವ್ಯಕ್ತಿಗಳಲ್ಲಿ ಶೇ. 80ರಷ್ಟುಹೃದಯಾಘಾತ ಕಡಿಮೆ ಆಗುತ್ತದೆ ಎನ್ನಲಾಗಿದೆ. ಒಂದು ಯೂನಿಟ್‌ ರಕ್ತದಾನದಿಂದ ಮೂವರು ರೋಗಿಗಳ ಜೀವ ಉಳಿಸಲು ಸಾಧ್ಯತೆ ಇದೆ ಎಂದು ವಿವರಿಸಿದರು.

ಯೂತ್‌ ಹಾಸ್ಟೆಲ್‌ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್‌ ಮಾತನಾಡಿ, ಲಾಕ್‌ಡೌನ್‌ ಸಂದರ್ಭದಲ್ಲಿ ರಕ್ತದಾನ ಅತ್ಯಂತ ಪ್ರಮುಖವಾಗಿದೆ. ರಕ್ತದ ಬೇಡಿಕೆ ಹೆಚ್ಚಿರುವ ಕಾರಣ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವುದರಿಂದ ರಕ್ತದ ಕೊರತೆ ನೀಗಿಸಬಹುದು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆ ಅಪಾಯದ ಸ್ಥಿತಿಯಲ್ಲಿ ಇಲ್ಲ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌

ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು. ಕೊರೋನಾದಿಂದಾಗಿ ರಕ್ತದಾನ ಶಿಬಿರಗಳ ಸಂಖ್ಯೆಯೂ ಕಡಿಮೆ ಆಗಿದ್ದು, ಇದರಿಂದ ರಕ್ತದಾನಿಗಳ ಸಂಖ್ಯೆಯೂ ಕುಂಠಿತವಾಗಿದೆ. ಆರೋಗ್ಯವಂತ ಯುವಜನತೆ ಮೂರ್ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ರಕ್ತದಾನಿಗಳ ಆರೋಗ್ಯವೂ ಉತ್ತಮಗೊಳ್ಳುತ್ತದೆ. ರಕ್ತ ಪರೀಕ್ಷೆಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ
ಜಾಗೃತಿ ಮೂಡುತ್ತದೆ ಎಂದು ತಿಳಿಸಿದರು.

ಸೈಕಲ್‌ ಕ್ಲಬ್‌ ಅಧ್ಯಕ್ಷ ಶ್ರೀಕಾಂತ್‌ ಮಾತನಾಡಿ, ರಕ್ತದಾನ ಮಾಡುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಅರಿವು ಮೂಡಿಸಲು ಮುಂದಾಗುತ್ತಿವೆ. ರಕ್ತದಾನ ಶಿಬಿರ ನಡೆಸುತ್ತಿದ್ದ ಎಲ್ಲ ಸಂಘ ಸಂಸ್ಥೆಗಳು ಸಹ ಇತರರಿಗೆ ಪ್ರೇರಣೆ ನೀಡಿ ರಕ್ತದಾನ ಹೆಚ್ಚಾಗುವಂತೆ ಮಾಡಬೇಕು. ಇದರಿಂದ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.

ಶಿವಮೊಗ್ಗ ಸೈಕಲ್‌ ಕ್ಲಬ್‌ ಸದಸ್ಯರು, ಯೂತ್‌ ಹಾಸ್ಟೆಲ್‌ ಸದಸ್ಯರು ಒಟ್ಟು 45 ಮಂದಿ ರಕ್ತದಾನ ಮಾಡಿದರು. ವೀವೇಕಪ್ರಭು, ಅ.ನಾ.ವಿಜಯೇಂದ್ರರಾವ್‌, ಮಹಮದ್‌ ರಫಿ, ಧರಣೇಂದ್ರ ದಿನಕರ್‌, ನವೀನ್‌, ನರಸಿಂಹಮೂರ್ತಿ, ಹರೀಶ್‌ ಪಟೇಲ್‌, ಸಂಜಯ್‌, ನಾಗರಾಜ್‌, ರವಿ, ಮನೋಜ್‌, ಪ್ರಕಾಶ್‌, ಗುರುಮೂರ್ತಿ, ಜಗದೀಶ್‌, ನಾಗೇಂದ್ರ, ಸುರೇಶ್‌ಕುಮಾರ್‌, ಚಂದ್ರು, ರಾಹುಲ್‌, ಕಾರ್ತಿಕ್‌ ಮತ್ತಿತರರು ಪಾಲ್ಗೊಂಡಿದ್ದರು.
 

click me!