ನಗರದ ಜನನಿಬಿಡ ಪ್ರದೇಶವಾಗಿರುವ ಸಿಟಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗಬೇಕಾದರೆ ನಿಮ್ಮ ಬಳಿ ದುಡ್ಡು ಇರಲೇಬೇಕು. ಉಚಿತ ಎಂದು ಕಾಲಿಟ್ಟರೆ ಮರ್ಯಾದೆ ಹೋಗುವುದು ಶತಸಿದ್ಧ.
ನಿಲ್ದಾಣಗಳ ದುಸ್ಥಿತಿ ಭಾಗ-2
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ (ಜೂ.25) ನಗರದ ಜನನಿಬಿಡ ಪ್ರದೇಶವಾಗಿರುವ ಸಿಟಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗಬೇಕಾದರೆ ನಿಮ್ಮ ಬಳಿ ದುಡ್ಡು ಇರಲೇಬೇಕು. ಉಚಿತ ಎಂದು ಕಾಲಿಟ್ಟರೆ ಮರ್ಯಾದೆ ಹೋಗುವುದು ಶತಸಿದ್ಧ.
ಹೌದು, ನಗರದ ಸಿಟಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದರೂ ಶೌಚಾಲಯಕ್ಕೆ ಹೋಗುವ ಪ್ರತಿಯೊಬ್ಬರೂ ಹಣ ನೀಡಲೇಬೇಕು. ಸಾಮಾನ್ಯವಾಗಿ ಎಲ್ಲಿಯೂ ಮೂತ್ರ ವಿಸರ್ಜನೆಗೆ ಹಣ ನಿಗದಿ ಪಡಿಸುವುದಿಲ್ಲ. ಇಲ್ಲಿಯೂ ಶೌಚಾಲಯದ ಹೊರಗಡೆ ಮೂತ್ರ ವಿಸರ್ಜನೆ ಉಚಿತ ಎಂಬ ನಾಮಫಲಕ ಹಾಕಲಾಗಿದೆ. ಉಚಿತ ಎಂದು ಒಳಹೋಗಿ ಬಂದರೆ ಹೊರಗಡೆ ನಿರ್ವಹಣೆ ಮಾಡುವ ಸಿಬ್ಬಂದಿ ಹಿಡಿದು ಹಣ ನೀಡಿ ಎಂದು ಕೇಳಿಯೇ ಬಿಡುತ್ತಾನೆ. ಅರೇ ಇಲ್ಲಿ ಉಚಿತ ಎಂದು ಬೋರ್ಡ್ ಹಾಕಿದೆಯಲ್ಲ ಎಂದು ಕೇಳಿದರೆ ಇಲ್ಲಿ ಯಾವುದೂ ಉಚಿತ ಇಲ್ಲ, ಹಣ ನೀಡಿಯೇ ಹೋಗಬೇಕು ಎಂಬ ಉತ್ತರ ಕೊಡುತ್ತಾನೆ. ಇನ್ನು ಜನ ಮರ್ಯಾದೆಗೆ ಅಂಜಿ ಗೊಣಗುತ್ತಲೇ ಹಣ ನೀಡಿ ಹೋಗುತ್ತಾರೆ.
ಧಾರವಾಡ: ಬಸ್ ನಿಲ್ದಾಣಗಳಲ್ಲಿನ ಸೌಲಭ್ಯಗಳಿಗಿಲ್ಲ‘ಶಕ್ತಿ’!
₹5, .10 ನೀಡಬೇಕು:
ಎಲ್ಲೆಡೆಯೂ ಸಾರ್ವಜನಿಕ ಶೌಚಾಲಯಗಳಲ್ಲಿ, ಇನ್ನು ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದ್ದರೆ, ಮಲ ವಿಸರ್ಜನೆಗೆ .5 ನಿಗದಿಪಡಿಸಿದ್ದಾರೆ. ಆದರೆ, ಸಿಟಿ ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ .5 ನೀಡಬೇಕು. ಮಲ ವಿಸರ್ಜನೆಗೆ .10 ನೀಡಬೇಕು. ಹೀಗೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದರೆ ಅಲ್ಲಿ ಕುಳಿತ ಶೌಚಾಲಯದ ನಿರ್ವಹಣೆ ಮಾಡುವ ವ್ಯಕ್ತಿ ಹಿಂದಿಯಲ್ಲಿಯೇ ಬೇಜವಾಬ್ದಾರಿಯಾಗಿ ಹೇಳಿಕೆ ನೀಡುತ್ತಾನೆ.
ಕನ್ನಡ ಮಾಲೂಮ್ ನೈ:
ಈ ಶೌಚಾಲಯ ನಿರ್ವಹಣೆಗೆ ಇರಿಸಿರುವ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಹಳ್ಳಿಗಳಿಂದ ಇಲ್ಲವೇ ನಗರ ಪ್ರದೇಶದಿಂದ ಬಂದಾಗ ಈ ಶೌಚಾಲಯದ ಮೇಲೆ ಹಾಕಿರುವ ಉಚಿತ ಬೋರ್ಡ್ ನೋಡಿ ಮೂತ್ರ ವಿಸರ್ಜನೆ ಮಾಡಿ ಬಂದಾಗ ಹೊರ ನಿಂತಿರುವ ಶೌಚಾಲಯದ ನಿರ್ವಹಣಾ ಸಿಬ್ಬಂದಿ ನಿಲ್ಲಿಸಿ ಹಿಂದಿಯಲ್ಲಿಯೇ ಹಣ ಕೇಳುವನು. ನಿನಗೆ ಕನ್ನಡ ಬರುವುದಿಲ್ಲವಾ ಎಂದು ಪ್ರಶ್ನಿಸಿದರೆ ‘ಮುಜೆ ಕನ್ನಡ ಮಾಲೂಮ್ ನೈ’ ಎಂಬ ಹೇಳಿಕೆ ನೀಡುತ್ತಾನೆ. ಹಿಂದಿ ಭಾಷೆ ಬಾರದ ಅದೆಷ್ಟೋ ಜನರು ನಿತ್ಯ ಇವನೊಂದಿಗೆ ವಾಗ್ವಾದ ನಡೆಸುವುದು ಇಲ್ಲಿ ಸರ್ವೇ ಸಾಮಾನ್ಯ.
ನಿರ್ವಹಣೆ ಅಷ್ಟಕ್ಕಷ್ಟೆ:
ನಗರದ ಪ್ರಮುಖ ಜನನಿಬಿಡ ಸ್ಥಳವಾದ ಸಿಟಿ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಾರೆ. ಬಸ್ ಇಳಿದ ಕೂಡಲೇ ಒಳಹೋಗುವ ವೇಳೆ ಎಡಭಾಗದಲ್ಲಿ ಕಾಣಸಿಗುವ ಈ ಶೌಚಾಲಯಕ್ಕೆ ನೂರಾರು ಜನರು ಭೇಟಿ ನೀಡುವುದು ಸರ್ವೇ ಸಾಮಾನ್ಯ. ಶೌಚಾಲಯ ಸೇರಿದಂತೆ ಬಸ್ ನಿಲ್ದಾಣದ ನಿರ್ವಹಣೆ ಅಷ್ಟಕ್ಕಷ್ಟೆ. ಎಲ್ಲಿ ನೋಡಿದರಲ್ಲಿ ಉಗುಳಿರುವ ಕಲೆ, ನಳದ ಜಾಗದಲ್ಲಿ ದುರ್ನಾತ ಬೀರುತ್ತಿದೆ. ಬಸ್ ನಿಲ್ದಾಣದ ಹೊರಗಡೆ ಒಂದೇ ಭಾಗದಲ್ಲಿ ಬಸ್‌ಗಳು ನಿಲ್ಲಿಸಲು ವ್ಯವಸ್ಥೆ ಮಾಡಿದ್ದು, ಬರುವ ಮತ್ತು ಹೋಗುವ ಬಸ್‌ಗಳಿಗೆ ನಿತ್ಯವೂ ಕಿರಿಕಿರಿಯನ್ನುಂಟು ಮಾಡುತ್ತಿದೆ. ಇನ್ನು ಪಾರ್ಕಿಂಗ್ ಸ್ಥಳವನ್ನು ಹೇಳುವಂತಿಲ್ಲ. ಎಲ್ಲೆಂದರಲ್ಲಿ ಇಟ್ಟಿಗೆ, ಕಲ್ಲುಗಳನ್ನು ಹಾಕಲಾಗಿದೆ. ಸ್ವಚ್ಛತೆಯಂತೂ ಹೇಳತೀರದಾಗಿದೆ. ಪಾರ್ಕಿಂಗ್ ಸ್ಥಳ ಹಗಲಿನಲ್ಲಿಯೇ ಭೂತಬಂಗಲೆಯಂತೆ ಭಾಸವಾಗುತ್ತದೆ.
ಶಕ್ತಿ ಯೋಜನೆ: ಬಸ್‌ನಲ್ಲಿ ನೂಕುನುಗ್ಗಲಿಗೆ ವಿಜಯಪುರ ಬಸ್ ನಿಲ್ದಾಣದಲ್ಲಿ ರಾಶಿ ರಾಶಿ ಎಟಿಎಂ, ಆಧಾರ್ ಐಡಿ ಕಾರ್ಡ್‌ಗಳು!
ಮೂತ್ರಕ್ಕ ಎಲ್ಲಾ ಫ್ರೀ ಐತಿ ಅಂತಾ ಟಾಯ್ಲಟ್ ಹೊರಗ ಬೋರ್ಡ್ ಹಾಕ್ಯಾರಿ, ಆದ್ರ ಒಳಗ್ ಹೋಗಿ ಬಂದ್ರ .5 ಕೊಟ್ಟೇ ಹೋಗ್ರಿ ಅಂತಾರ. ಅವನಿಗೆ ಕನ್ನಡಾ ಬರಲ್ಲಾ ನಂಗ ಹಿಂದಿ ಬರಲ್ಲಾ 10 ನಿಮಿಷದಿಂದ ಅವನೊಂದಿಗೆ ಜಗಳ ಮಾಡಿದ್ಯಾ. ಯಾರೋ ಒಬ್ಬ ಹುಡುಗ ಬಂದು .5 ನೀಡಬೇಕು ಅಂತಾ ಹೇಳಿದಮ್ಯಾಲೆ ನಾನು ಹಣ ಕೊಟ್ಟು ಬಂದೀನ್ರಿ.
ಹನುಮಮ್ಮ ಶ್ಯಾಗೋಟಿ, ಗೋಪನಕೊಪ್ಪದ ನಿವಾಸಿ
ಎಲ್ಲಡೆಯೂ ಮೂತ್ರ ವಿಸರ್ಜನೆಗೆ ಹಣವಿಲ್ಲ. ಆದರೆ, ಸಿಟಿ ಬಸ್ ನಿಲ್ದಾಣದಲ್ಲಿ ಹಣ ನೀಡಿಯೇ ಮೂತ್ರ ವಿಸರ್ಜನೆಗೆ ಹೋಗುವ ಪರಿಸ್ಥಿತಿ ಇದೆ. ಹೇಗಿದ್ದರೂ ನಿಲ್ದಾಣದಲ್ಲಿ ಉಚಿತ ಶೌಚಾಲಯವಿದೆ, ಅಲ್ಲಿಯೇ ಹೋದರಾಯ್ತು ಎಂದು ಬರುವವರಿಗೆ ಬರೆ ಬೀಳುವುದು ಖಚಿತ.
ರಾಮಕೃಷ್ಣ ಬೇವೂರ, ನವನಗರದ ನಿವಾಸಿ