ಬಸ್ಸೊಂದು ಬೆಂಕಿಗೆ ಆಹುತಿಯಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದುರಂತವಾಗಿದೆ.
ರಾಮನಗರ [ಡಿ.13]: ತಾಲೂಕಿನ ಪಾದರಹಳ್ಳಿಯ ಶಿಲ್ಹಾಂದರ ರೆಸಾರ್ಟ್ ಬಳಿ ಪ್ರವಾಸಿಗರನ್ನು ಕರೆ ತಂದಿದ್ದ ಖಾಸಗಿ ಬಸ್ಸೊಂದು ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
ರೆಸಾರ್ಟ್ ವೀಕ್ಷಣೆಗೆ ಆಗಮಿಸಿದ್ದ ಎಲ್ಲಾ ಪ್ರವಾಸಿಗರು ಬಸ್ಸಿನಿಂದ ಇಳಿದು ತೆರಳಿದ ನಂತರ ದುರ್ಘಟನೆ ಸಂಭವಿಸಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.
ಎಸ್‌ಆರ್‌ಎಸ್ ಕಂಪನಿಗೆ ಸೇರಿದ ಬಸ್ ಬೆಂಗಳೂರಿನಿಂದ ಪಾದರಹಳ್ಳಿಯ ಶಿಲ್ಹಾಂದರ ರೆಸಾರ್ಟ್‌ಗೆ ಬೆಳಿಗ್ಗೆ 11 ಗಂಟೆಗೆ ಪ್ರವಾಸಿಗರನ್ನು ಹೊತ್ತು ಬಂದಿದೆ. ಪ್ರಯಾಣಿಕರು ಬಸ್ಸಿನಿಂದ ಇಳಿದು ರೆಸಾರ್ಟ್‌ನೊಳಗೆ ಪ್ರವೇಶಿಸಿದ್ದಾರೆ. ಇತ್ತ ಚಾಲಕ ಮತ್ತು ನಿರ್ವಾಹಕ ಎಸಿ ಆನ್‌ನಲ್ಲಿಯೇ ಇಟ್ಟು ಬಸ್ಸಿನಿಂದ ಕೆಳಗಿಳಿದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಧ್ಯಾಹ್ನದ ವೇಳೆಗೆ ಬಸ್ಸಿನಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಇಡೀ ಬಸ್ಸನ್ನು ಆವರಿಸಿದೆ. ಯಾರು ಕೂಡ ಬಸ್ಸಿನ ಬಳಿಗೆ ತೆರಳುವ ಧೈರ್ಯ ಮಾಡಲಿಲ್ಲ. ಪ್ರಯಾಣಿಕರಿಗೆ ಸೇರಿದ ಕೆಲವು ವಸ್ತುಗಳು ಸುಟ್ಟು ಕರಕಲಾಗಿತ್ತು.
ಘಟನೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಆದರೆ, ಅಷ್ಟರೊಳಗೆ ಬಸ್ ಸಂಪೂರ್ಣವಾಗಿ ಭಸ್ಮಗೊಂಡಿತ್ತು. ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.