ಇದು ಹೆಸರಿಗಷ್ಟೇ ಗ್ರಾಪಂ; ಮೂಲಭೂತ ಸೌಕರ್ಯಗಳನ್ನು ಕೇಳಲೇಬೇಡಿ!

By Web DeskFirst Published Aug 10, 2018, 11:12 AM IST
Highlights

- ಗೋವಿಂದಗಿರಿ ತಾಂಡಾ ಹೆಸರಿಗಷ್ಟೇ ಪಟ್ಟಣ ಪಂಚಾಯ್ತಿ | ಇಲ್ಲಿ ಮೂಲಭೂತ ಸೌಕರ್ಯಗಳದ್ದೇ ಬಲುದೊಡ್ಡ ಸಮಸ್ಯೆ

- ಮೂಲಭೂತ ಸೌಕರ್ಯವಿಲ್ಲದೇ ಜನರ ಪರದಾಟ 

- ಅಧಿಕಾರಿಗಳೇ ಇತ್ತ ಗಮನ ಹರಿಸುವಿರಾ? 

ಬಳ್ಳಾರಿ (ಆ. 10):  ಗೋವಿಂದಗಿರಿ ತಾಂಡಾ ಹಳ್ಳಿಯಾಗಿದ್ದರೂ ಕೂಡ್ಲಿಗಿ ಪಟ್ಟಣಕ್ಕೆ ಕೂಗಳತೆ ದೂರವಿರುವುದರಿಂದ ಇದನ್ನು ಕೂಡ್ಲಿಗಿ ಪಟ್ಟಣ ಪಂಚಾಯತಿಗೆ ಸೇರಿಸಲಾಗಿದೆ. ಹೆಸರಿಗಷ್ಟೇ ಇದು ಪಟ್ಟಣ ಪಂಚಾಯತಿ ಭಾಗವಾಗಿದ್ದರೂ, ಯಾವುದೇ ಸೌಲಭ್ಯ ಗ್ರಾಮಕ್ಕೆ ಸಿಗುತ್ತಿಲ್ಲ. ಈ ಗ್ರಾಮಕ್ಕೆ ಹೋಗಿ ನೋಡಿದರೆ ಗುಡಿಸಲು ಮುಕ್ತ ಗ್ರಾಮವಾಗಿ ಕಾಣುತ್ತದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಕೇಳಲೇ ಬೇಡಿ.

ಪ.ಪಂಗೆ ಕೋಟಿ ಕೋಟಿ ಅನುದಾನ ಬಂದರೂ 20 ನೇ ವಾರ್ಡಿನ ವ್ಯಾಪ್ತಿಗೆ ಬರುವ ಗೋವಿಂದಗಿರಿ ತಾಂಡಾ ಕುಗ್ರಾಮದಂತೆ ಕಾಣುತ್ತಿದೆ. ಈ ತಾಂಡಾವನ್ನು ಗುಡಿಸಲು ಮುಕ್ತ ಗ್ರಾಮವಾಗಿ ಮಾಡಿದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ರಸ್ತೆ ಸುಧಾರಣೆ, ವಿದ್ಯುತ್ ಅವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಕಾಣುತ್ತಿಲ್ಲ.

ಗ್ರಾಮದ ಮುಖ್ಯರಸ್ತೆಯು ಕಾಡಿನಲ್ಲಿರುವ ರಸ್ತೆಗಿಂತಲೂ ಕಡೆಯಾಗಿದ್ದು ಈ ರಸ್ತೆಯ ಮೇಲೆ ಚರಂಡಿಯ ನೀರು ಎಗ್ಗಿಲ್ಲದೇ ಹರಿಯುತ್ತಿರುವುದ್ದರಿಂದ ರೋಗ ರುಜಿನಿಗಳಿಗೆ ಎಡೆಮಾಡಿ ಕೊಡುತ್ತಿದೆ. ಈ ರಸ್ತೆಗೆ ಹೊಂದಿಕೊಂಡು ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಅವು ಕಳೆದ ತಿಂಗಳಿಂದ ಕಾರ್ಯನಿರ್ವಹಿಸದಿರುವ ಹಿನ್ನಲೆಯಲ್ಲಿ ರಾತ್ರಿಯಾದರೆ ಸಾಕು ಈ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುವಂತಾಗಿದೆ.

ನಿರುಪಯುಕ್ತ ಭವನಗಳು: 2011-12 ನೇ ಸಾಲಿನಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಿರ್ಮಿಸಲಾದ ಸಮುದಾಯ ಭವನ ಹಾಗೂ ಇತ್ತೀಚೆಗೆ ನಿರ್ಮಿಸಿದ ಸಮುದಾಯ ಭವನಗಳು ಇಂದಿಗೂ ಕಾರ್ಯರೂಪಕ್ಕೆ ಬರದೇ ನಿರುಪಯುಕ್ತವಾಗಿದೆ. ಇವುಗಳಿಗೆ ಹೋಗುವ ರಸ್ತೆಯೂ ಕೂಡ ಇಕ್ಕಟ್ಟಾಗಿದ್ದು ರಸ್ತೆಯೋ ಅಥವಾ ಕಸದ ತಿಪ್ಪೆಯೋ ಎನ್ನುವಂತಾಗಿದೆ.

ಕೂಡ್ಲಿಗಿ ಪಟ್ಟಣದಿಂದ 2 ಕಿ.ಮೀ. ದೂರವಿರುವ ಪಟ್ಟಣ ವ್ಯಾಪ್ತಿಯ ಈ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದರಿಂದ ಪ್ರತಿದಿನ ಕೂಡ್ಲಿಗಿಗೆ ಬಂದು ಶುದ್ಧ ಕುಡಿಯುವ ನೀರು ತರುವ ಪರಿಸ್ಥಿತಿಯಿದೆ. ಈ ಗ್ರಾಮಕ್ಕೆ ಉತ್ತಮ ನೀರು ಸರಬರಾಜು ಇದ್ದರೂ ಅದು ಕುಡಿಯಲು ಯೋಗ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿಯ ಗ್ರಾಮಸ್ಥರು. ಕೂಡ್ಲಿಗಿ ಸುತ್ತಮುತ್ತ ಕೊಳವೆಬಾವಿ ಕೊರೆಸುವುದರಿಂದ ಪ್ಲೊರೈಡ್ ನೀರು ಯಥೇಚ್ಚವಾಗಿ ಇದ್ದು ಈ ನೀರು
ಕುಡಿಯಲು ಯೋಗ್ಯವಾಗಿಲ್ಲ. ಸಂಡೂರು ರಸ್ತೆಯಲ್ಲಿ ಇರುವ ಕಾಡಂಚಿನ ಪಕ್ಕದಲ್ಲಿ ಕೊಳವೆಬಾವಿ ಹಾಕಿದರೆ ಇದ್ದುದರಲ್ಲಿಯೇ ಕುಡಿಯಲು ಯೋಗ್ಯವಾದ ನೀರು ಸಿಗುತ್ತದೆ.

ಆದರೆ, ಕುಡಿಯುವ ನೀರಿನ ಪೈಪ್ ಲೈನ್ ಹಾಕಲು ದೂರವಾಗುತ್ತೆ ಎಂದು ಅಧಿಕಾರಿಗಳು ಕೂಡ್ಲಿಗಿ ಸುತ್ತಮುತ್ತಲೂ ಕೊಳವೆಬಾವಿ ಹಾಕಿಸಿದ್ದು, ಇವೆಲ್ಲವೂಗಳಲ್ಲಿ ಪ್ಲೊರೈಡ್ ಅಂಶ ಹೆಚ್ಚಾಗಿರುವುದರಿಂದಾಗಿ ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳು ಕುಡಿಯುವ ನೀರನ್ನು ತರಲು ಕೂಡ್ಲಗಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  

click me!