
ಬೆಂಗಳೂರು (ಮಾ. 21): ಬ್ರಾಹ್ಮಣ ಸಾಧಕರು ಕೇವಲ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರು ಇಡೀ ಸಮಾಜಕ್ಕೆ ಬೇಕಾದವರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದ್ದಾರೆ. ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಮಲ್ಲೇಶ್ವರದಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ 78ನೇ ವಾರ್ಷಿಕ ಸಭೆ ಮತ್ತು ವಿಜಯೀಭವ-3 ಸ್ಫೂರ್ತಿದಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ, ಧರ್ಮ, ಹಣ, ಅಧಿಕಾರ ಬಲವಿಲ್ಲದ ಸಮುದಾಯದ ಸಾಮಾನ್ಯ ವ್ಯಕ್ತಿಗಳು ಸ್ವಸಾಮರ್ಥ್ಯದಿಂದ ಇಂದು ಉನ್ನತ ಸ್ಥಾನ ತಲುಪಿ ಸಾಧನೆ ಮಾಡಿದ್ದಾರೆ. ಅಂತಹ ಸಾಧಕರತ್ನರು ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ ಎಂದು ತಿಳಿಸಿದರು.
ಹವ್ಯಕ ಮಹಾಸಭಾವನ್ನು ಅಧ್ಯಕ್ಷ ಗಿರಿಧರ್ ಕಜೆ ಅವರು ಸಮರ್ಪಕವಾಗಿ ನಿರ್ವಹಿಸುವುದನ್ನು ನೋಡಿದರೆ ಬ್ರಾಹ್ಮಣ ಮಹಾಸಭಾವನ್ನು ಅದೇ ರೀತಿ ನಿರ್ವಹಿಸಬೇಕೆಂದು ಅನ್ನಿಸುತ್ತದೆ. ಬ್ರಾಹ್ಮಣರಲ್ಲಿ ಬುದ್ಧಿವಂತರಿದ್ದಾರೆ. ಆದರೆ ಇಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ ಎಂಬಂತಾಗಿದ್ದು, ನಾವು ಇನ್ನಷ್ಟುಸಂಘಟಿತರಾಗಬೇಕಾದ ಅಗತ್ಯತೆ ಇದೆ ಎಂದರು.
ಇದನ್ನೂ ಓದಿ: ಬಡ ಬ್ರಾಹ್ಮಣ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಿ: ಅಶೋಕ್ ಹಾರನಹಳ್ಳಿ!
ಸಾಧಕರು ಮತ್ತು ಸ್ಫೂರ್ತಿ ಚೇತನರಾದ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಳ್ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತಮ್ಮ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದವರು. ಮಡಿಯಾಳರು ಅಪರೂಪದ ಸರಳ, ಸಜ್ಜನಿಕೆಯ ವ್ಯಕ್ತಿ. ಅಂತಹವರು ಪೊಲೀಸ್ ಇಲಾಖೆಯಲ್ಲಿ ಸಿಗುವುದೇ ವಿರಳ. ಇನ್ನು ಮಾಧ್ಯಮ ರಂಗದಲ್ಲಿ ಬದಲಾವಣೆ ತಂದ ವಿಶ್ವೇಶ್ವರ ಭಟ್ ಅವರು ತಮ್ಮ ಬರವಣಿಗೆಯಿಂದಲೇ ಅಪಾರ ಓದುಗರನ್ನು ಸಂಪಾದಿಸಿದವರು. ಈ ಸಾಧಕರು ನಮ್ಮ ಸಮುದಾಯದವರು ಎಂಬುದೇ ಹೆಮ್ಮೆ ಎಂದು ವಿವರಿಸಿದರು.
‘ಹವ್ಯಕ ಮಾಸಪತ್ರಿಕೆ’ ಮಾದರಿಯಲ್ಲಿ ‘ವಿಪ್ರ ನುಡಿ’ ಹೊರತಂದಿದ್ದು, ಬ್ರಾಹ್ಮಣ ಮಹಾಸಭಾದ ಕಾರ್ಯಕ್ರಮ, ಇನ್ನಿತರ ವಿಷಯಗಳು ಪತ್ರಿಕೆಯಲ್ಲಿ ಹಾಗೂ ಮಹಾಸಭಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಸದಾ ಸಿದ್ಧರಿರಬೇಕು: ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ನಾನು ಸಂಪಾದಕನಾಗುತ್ತೇನೆ ಎಂದುಕೊಂಡಿರಲಿಲ್ಲ. ಕುಗ್ರಾಮದಲ್ಲಿ ಹುಟ್ಟಿಬೆಳೆದ ನಾವು ಬೆಂಗಳೂರಿಗೆ ಬರುವುದೇ ದೊಡ್ಡ ಸಾಧನೆ ಎಂಬ ಭಾವನೆ ಮನದಲ್ಲಿತ್ತು. ಪ್ರತಿಯೊಬ್ಬರಿಗೂ ಆದರ್ಶಪ್ರಾಯ ಮತ್ತು ಉತ್ತಮ ಬದುಕು ಕಟ್ಟಿಕೊಳ್ಳುವ ಅವಕಾಶ ಸಿಗುತ್ತದೆ. ಅಂತಹ ಅವಕಾಶ ಬಳಸಿಕೊಳ್ಳಲು ಸದಾ ಸಿದ್ಧರಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದರು.
ಇದನ್ನೂ ಓದಿ: ಹಿಂದೂ ಧರ್ಮ ಉಳಿವಿಗೆ ಬ್ರಾಹ್ಮಣರ ಕೊಡುಗೆ ಅಪಾರ: ಸಚಿವ ಸುಧಾಕರ್
ಹವ್ಯಕ ಮಹಾಸಭಾದಿಂದ ತಿಮ್ಮಪ್ಪಯ್ಯ ಮಡಿಯಾಳ್ ಹಾಗೂ ವಿಶ್ವೇಶ್ವರ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸಾಧಕರೊಂದಿಗೆ ಸಮುದಾಯದವರು ಸಂವಾದ ನಡೆಸಿದರು. ಗಾಯಕರಾದ ಸಾಕೇತ್ ಶರ್ಮಾ, ಕು ಪೃಥ್ವಿ ಭಟ್ ಮತ್ತು ಮಾಸ್ಟರ್ ಗುರುಕಿರಣ್ ಹೆಗಡೆ ಅವರು ಘೋಷ ಗಾನ ನಡೆಸಿಕೊಟ್ಟರು. ನಂತರ ಪಾಣಿನಿ ದೇರಾಜೆ ಮತ್ತವರ ತಂಡದಿಂದ ನಾಕಾರು ತಂತಿ ಸಂಗೀತ ಕಾರ್ಯಕ್ರಮ ಜರುಗಿತು.
ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ್ ಕಜೆ, ಹವ್ಯಕ ಮುಖಂಡರಾದ ಮೋಹನ್ ಹೆಗಡೆ, ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ಸಾಹಿತಿ ನಾರಾಯಣ ಹುಳೇಗಾರ್, ನಿರೂಪಕಿ ಸುಕನ್ಯಾ ಸಂಪತ್, ಕಾರ್ಯಕ್ರಮ ಸಂಚಾಲಕರಾದ ಆದಿತ್ಯ ಹೆಗಡೆ ಕಲಗಾರು ಮತ್ತು ರವಿ ನಾರಾಯಣ ಪಟ್ಟಾಜೆ ಮತ್ತಿತರರು ಉಪಸ್ಥಿತರಿದ್ದರು.
ಹವ್ಯಕ ಮಹಾಸಭೆಗೆ 7ನೇ ಬಾರಿ ಕಜೆ ಅಧ್ಯಕ್ಷ: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಡೆದ ಸರ್ವಸದಸ್ಯರ ಚುನಾವಣೆಯಲ್ಲಿ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಗಿರಿಧರ್ ಕಜೆ ಅವರು ಏಳನೇ ಬಾರಿ ಆಯ್ಕೆ ಆಗಿದ್ದಾರೆ. ಅಲ್ಲದೆ ಬೆಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ರಾಜ್ಯದ ಇತರ ಕಡೆಗಳಲ್ಲಿ ಅವಿರೋಧವಾಗಿ 16 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.