
ಬಸವರಾಜ ಹಿರೇಮಠ
ಧಾರವಾಡ[ಡಿ.14]: ಕಡು ಬಡವರಿಗೆ ಸರ್ಕಾರ ನೀಡುತ್ತಿರುವ ಬಿಪಿಎಲ್ ಕಾರ್ಡ್ ಪಡೆದು, ಪಡಿತರ ಪಡೆಯುತ್ತಿದ್ದ ನೂರಾರು ಅಕ್ರಮ ಫಲಾನುಭವಿಗಳು ಇದೀಗ ಬೆಚ್ಚಿ ಬೀಳುವಂತಾಗಿದೆ. ಸರ್ಕಾರದ ಖಡಕ್ ಎಚ್ಚರಿಕೆಗೆ ಬೆದರಿ ಅನಿವಾರ್ಯವಾಗಿ ಸರ್ಕಾರಕ್ಕೆ ಪಡಿತರ ಚೀಟಿಗಳನ್ನು ವಾಪಸ್ ಮಾಡುತ್ತಿದ್ದಾರೆ.
ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸುವ ಮೂಲಕ ಪಡೆದ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಸರ್ಕಾರಕ್ಕೆ ಮರಳಿಸಿದರೆ ಉತ್ತಮ, ಇಲ್ಲದೇ ಹೋದಲ್ಲಿ ತಾವು ಪಡಿತರ ಚೀಟಿ ಪಡೆದ ದಿನದಿಂದ ಇಲ್ಲಿಯ ವರೆಗೂ ಪಡೆದ ಪಡಿತರವನ್ನು ಹಣದ ರೂಪದಲ್ಲಿ ಮರಳಿಸುವುದಲ್ಲದೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಆಹಾರ ಇಲಾಖೆ ಮೂಲಕ ಎಚ್ಚರಿಸಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಧಾರವಾಡ ಜಿಲ್ಲೆಯ 121 ಸರ್ಕಾರಿ ನೌಕರರು, ಕಾರ್ಪೊರೇಟ್ ವಲಯದಿಂದ 85, ಮಿತಿಗಿಂತ ಹೆಚ್ಚಿನ ಭೂ ಹಿಡುವಳಿ ಹೊಂದಿರುವವರು 864, ನಾಲ್ಕು ಚಕ್ರ ವಾಹನ ಮಾಲೀಕರು 45 ಹಾಗೂ ಇತರ ಕಾರಣಗಳಿಂದ 535 ಸೇರಿದಂತೆ ಒಟ್ಟು 1650 ಅಕ್ರಮ ಫಲಾನುಭವಿಗಳು ತಮ್ಮ ಪಡಿತರ ಚೀಟಿಯನ್ನು ಸ್ವಯಂ ಪ್ರೇರಣೆಯಿಂದ ವಾಪಸ್ ಮಾಡಿದ್ದಾರೆ. ಈ ಎಲ್ಲರಿಗೂ ಪ್ರತಿ ತಿಂಗಳು . 12.96 ಲಕ್ಷ ಮೌಲ್ಯದ 462 ಕ್ವಿಂಟಲ್ ಪಡಿತರ ಹಂಚಿಕೆಯಾಗುತ್ತಿತ್ತು ಎನ್ನುವುದು ಗಮನಾರ್ಹ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
1650 ಜನರು ಸ್ವಯಂಪ್ರೇರಣೆಯಿಂದ ಪಡಿತರ ಚೀಟಿಗಳನ್ನು ವಾಪಸ್ ಮಾಡಿದ್ದಾರೆ. ಆದರೆ, ಇನ್ನೂ ಸಾಕಷ್ಟುಜನರ ಬಳಿ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ಗಳಿವೆ. ಆದರೆ, ಅವು ಇನ್ನೂ ವಾಪಸಾಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಹ ಸುಮ್ಮನೆ ಕುಳಿತಿಲ್ಲ. ಡಿಸೆಂಬರ್ ತಿಂಗಳೊಳಗೆ ಸ್ವಯಂಪ್ರೇರಣೆಯಿಂದ ವಾಪಸ್ ಮಾಡದೇ ಹೋದಲ್ಲಿ ಅವರ ವಿರುದ್ಧ ಕಾರ್ಯಾಚರಣೆ ನಡೆಸಲು ಇಲಾಖೆ ಸಿದ್ಧವಾಗಿದೆ.
ಈಗಾಗಲೇ ಆರ್ಟಿಒ ಕಚೇರಿಯಲ್ಲಿ ನಾಲ್ಕು ಚಕ್ರ ವಾಹನ ಹೊಂದಿರುವ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಪಟ್ಟಿಸಿದ್ಧಪಡಿಸಿದ್ದಾರೆ. ನಗರದಲ್ಲಿ 1 ಸಾವಿರ ಚದರ ಅಡಿ ಸ್ವಂತ ಮನೆ ಹೊಂದಿದವರಿಗೂ ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ. ಹೀಗಾಗಿ ಪಾಲಿಕೆಯಿಂದ ಈ ಮಾಹಿತಿ ಸಹ ತರಿಸಿಕೊಳ್ಳಲಾಗಿದೆ. ಜತೆಗೆ ತಹಸೀಲ್ದಾರ್ ಕಚೇರಿಯಿಂದ ಫಲಾನುಭವಿ ಭೂಮಿ ಹೊಂದಿರುವ ಮಾಹಿತಿ ಮತ್ತು ಕುಟುಂಬದ ವಾರ್ಷಿಕ . 1.20 ಲಕ್ಷಕ್ಕಿಂತಲೂ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಮಾಹಿತಿ ಸಹ ಪಡೆದಿದ್ದು, ಇನ್ನೇನು ಕಾರ್ಯಾಚರಣೆ ಮಾತ್ರ ಬಾಕಿ ಇದೆ.
ಇದರೊಂದಿಗೆ ಇ-ಕೆವೈಸಿ ಮೂಲಕ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರ ಬಯೋ ಅಥೆಂಟಿಕೇಶನ್ ಮಾಡಲಾಗುತ್ತಿದ್ದು, ಈ ಮೂಲಕವೂ ತೀರಿಹೋದವರ, ವಲಸೆ ಹೋದವರ ಹಾಗೂ ಅಕ್ರಮ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಲಿದೆ. ಸದ್ಯಕ್ಕೆ 12.19 ಲಕ್ಷ ಜನರ ಪೈಕಿ 5.95 ಲಕ್ಷ ಇ-ಕೆವೈಸಿ ಪ್ರಕ್ರಿಯೆ ಅಂದರೆ ಶೇ. 46.43ರಷ್ಟುಮುಕ್ತಾಯವಾಗಿದೆ. ಆದಷ್ಟುಶೀಘ್ರ ಪೂರ್ಣಗೊಳ್ಳಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 3,59,879 ಬಿಪಿಎಲ್ ಹಾಗೂ 21,530 ಅಂತ್ಯೋದಯ ಕುಟುಂಬಗಳು ಪಡಿತರ ಚೀಟಿ ಹೊಂದಿವೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಈ ಬಗ್ಗೆ ಮಾತನಾಡಿದ ಆಹಾರ ಇಲಾಖೆ ಹಿರಿಯ ಉಪ ನಿರ್ದೇಶಕ ಸದಾಶಿವ ಮಿರ್ಜಿ ಅವರು, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡ ಫಲಾನುಭವಿಗಳು ಆದಷ್ಟು ಬೇಗ ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರಕ್ಕೆ ವಾಪಸು ಮಾಡಬೇಕು. ಇಲ್ಲದೇ ಹೋದಲ್ಲಿ ಅಂಥವರ ಪಟ್ಟಿ ತಮ್ಮಲ್ಲಿದ್ದು ಕಾನೂನಿನ ಕ್ರಮ ಕೈಗೊಳ್ಳಬೇಕಾಗುತ್ತದೆ. 2016ರಲ್ಲಿ ಇದೇ ರೀತಿ ಕಾರ್ಯಾಚರಣೆ ನಡೆಸಿದ್ದರ ಫಲವಾಗಿ 356 ಸರ್ಕಾರಿ ನೌಕರರಿಂದ 43.42 ಲಕ್ಷ ದಂಡ ಪಡೆದಿರುವುದನ್ನು ಸ್ಮರಿಸಬಹುದು ಎಂದು ತಿಳಿಸಿದ್ದಾರೆ.
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರ ಪಟ್ಟಿ
ತಾಲೂಕು ಒಪ್ಪಿಸಿದ ಕಾರ್ಡ್ ಸಂಖ್ಯೆ
ಧಾರವಾಡ ಶಹರ 262
ಧಾರವಾಡ ಗ್ರಾಮೀಣ 183
ಹುಬ್ಬಳ್ಳಿ ಶಹರ 208
ಹುಬ್ಬಳ್ಳಿ ಗ್ರಾಮೀಣ 66
ಕಲಘಟಗಿ 50
ಕುಂದಗೋಳ 375
ನವಲಗುಂದ 506
ಒಟ್ಟು 1650