ಬೆಂಗಳೂರು ಕೃಷಿ ಮೇಳದಲ್ಲಿ ಬಾಟಲ್‌ ಬದನೆ ಆಕರ್ಷಣೆ: ಇದರ ವಿಶೇಷತೆಯೇನು ಗೊತ್ತಾ?

By Kannadaprabha NewsFirst Published Nov 15, 2023, 7:23 AM IST
Highlights

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.17 ರಿಂದ 20 ರವರೆಗೂ ಆಯೋಜಿಸಲಿರುವ ‘ಕೃಷಿ ಮೇಳ’ದಲ್ಲಿ ವಿದೇಶಿ ತಳಿಗಳಾದ ಬಾಟಲ್‌ ಬದನೆ, ಅಲಂಕಾರಿಕ ಸೂರ್ಯಕಾಂತಿ ಪ್ರಾತ್ಯಕ್ಷಿಕೆಗಳು ರೈತರನ್ನು ಆಕರ್ಷಿಸಲಿವೆ.

ಬೆಂಗಳೂರು (ನ.15): ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.17 ರಿಂದ 20 ರವರೆಗೂ ಆಯೋಜಿಸಲಿರುವ ‘ಕೃಷಿ ಮೇಳ’ದಲ್ಲಿ ವಿದೇಶಿ ತಳಿಗಳಾದ ಬಾಟಲ್‌ ಬದನೆ, ಅಲಂಕಾರಿಕ ಸೂರ್ಯಕಾಂತಿ ಪ್ರಾತ್ಯಕ್ಷಿಕೆಗಳು ರೈತರನ್ನು ಆಕರ್ಷಿಸಲಿವೆ. ‘ಎಸ್‌ವಿ-1574 ಇವಿ’ ತಳಿಯ ಬಾಟಲ್‌ ಬದನೆ(ಬಾಟಲ್‌ ಬ್ರಿಂಜಾಲ್‌) ಯನ್ನು ವಿವಿಯ ತೋಟಗಾರಿಕಾ ವಿಭಾಗ ಬೆಳೆದಿದ್ದು ರೈತರು ಬಾಟಲ್‌ ಬದನೆ ಬೆಳೆದರೆ ಹೇಗೆ ಹೆಚ್ಚು ಆದಾಯ ಗಳಿಸಬಹುದು ಎಂಬ ಮಾಹಿತಿ ಸಿಗಲಿದೆ. 

ಇದು ವಿದೇಶಿ ತಳಿಯಾಗಿದ್ದು, ಪಾಲಿಹೌಸ್‌ ಅಥವಾ ಹಸಿರು ಮನೆಯಲ್ಲಿ ಬೆಳೆದರೆ ಉತ್ತಮ ಗುಣಮಟ್ಟದ ಜೊತೆಗೆ ಇಳುವರಿಯೂ ಅಧಿಕವಾಗುವುದರಿಂದ ಲಾಭ ಗಳಿಸಬಹುದು.  ನಾಟಿ ಮಾಡಿದ ಎರಡೂವರೆ ತಿಂಗಳ ಬಳಿಕ ಹೂ ಬಿಡಲು ಪ್ರಾರಂಭಿಸುತ್ತದೆ. ನಾಲ್ಕರಿಂದ ಆರು ತಿಂಗಳವರೆಗೂ ಕಾಯಿ ಕಟಾವು ಮಾಡಬಹುದು. ಕಾಯಿ ಬಹಳ ದಪ್ಪ ಆಗುವುದರಿಂದ ಗಿಡಕ್ಕೆ ಆಸರೆಯಾಗಿ ಕಡ್ಡಿಯನ್ನು ನೆಟ್ಟು ದಾರ ಕಟ್ಟಬೇಕು. ಪ್ರತಿ ಕಾಯಿ ಅರ್ಧ ಕೇಜಿಯಿಂದ ಒಂದೂವರೆ ಕೇಜಿಯಷ್ಟು ತೂಕ ಬರಲಿದ್ದು, ಮಾರುಕಟ್ಟೆಯಲ್ಲೂ ಬೇಡಿಕೆ ಇದೆ ಎಂದು ವಿವಿ ತಿಳಿಸಿದೆ.

ಅಲಂಕಾರಕ್ಕೆ ಸೂರ್ಯಕಾಂತಿ: ಸಾಮಾನ್ಯವಾಗಿ ಬೀಜಕ್ಕಾಗಿ ಸೂರ್ಯಕಾಂತಿ ಬೆಳೆಯುತ್ತಿದ್ದು, ಬೀಜದಿಂದ ಎಣ್ಣೆ ತೆಗೆಯಲಾಗುತ್ತದೆ. ಆದರೆ ವಿನ್ಸೆಂಟ್‌ ಟು ಚಾಯ್ಸ್‌ ಎಂಬ ಆರ್ನಮೆಂಟಲ್‌ (ಅಲಂಕಾರಿಕ) ಸೂರ್ಯಕಾಂತಿ ಎಂಬ ವಿದೇಶಿ ತಳಿಯನ್ನು ವಿವಿಯಿಂದ ಬೆಳೆಸಲಾಗಿದೆ. ವಿಶೇಷವೆಂದರೆ ಇದು ಕಡಿಮೆ ಎತ್ತರ ಬೆಳೆಯುವ ಅಲಂಕಾರಿಕ ತಳಿಯಾಗಿದೆ. ವಿವಾಹ, ಆರತಕ್ಷತೆ ಮತ್ತಿತರ ಶುಭ ಸಮಾರಂಭಗಳಿಗೆ ಸರಬರಾಜು ಮಾಡಬಹುದು. ಹೊಸ ಬೆಳೆ ಆಗಿದ್ದು ಒಂದು ಹೂವನ್ನು ₹10ರಿಂದ 15ಕ್ಕೆ ಮಾರಾಟ ಮಾಡಬಹುದು. ಇದನ್ನು ಬೆಳೆದರೆ ರೈತರಿಗೂ ಲಾಭದಾಯಕವಾಗಲಿದೆ. ಈ ಬೆಳೆಯನ್ನೂ ಕೃಷಿ ಮೇಳದಲ್ಲಿ ಪ್ರಾತ್ಯಕ್ಷಿಕೆ ಮಾಡಲಾಗಿದ್ದು, ಕೀಟಬಾಧೆ, ತಾಂತ್ರಿಕತೆ ಮತ್ತಿತರ ಮಾಹಿತಿಯನ್ನು ಕೃಷಿ ಮೇಳದಲ್ಲಿ ರೈತರು ಪಡೆಯಬಹುದು.

ಕಾಡಂಚಿನ ಹಳ್ಳಿಗಳಿಗೆ ಹಗಲಲ್ಲೇ 3 ಫೇಸ್‌ ವಿದ್ಯುತ್‌ ಕೊಡಿ: ಸಚಿವ ಈಶ್ವರ ಖಂಡ್ರೆ

ವಿದೇಶಿ ತಳಿಗಳಾದ ಬಾಟಲ್‌ ಬದನೆ, ಅಲಂಕಾರಿಕ ಸೂರ್ಯಕಾಂತಿ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಲಾಭವಾಗಲಿದೆ. ಕೃಷಿ ಮೇಳದಲ್ಲಿ ಈ ಎರಡೂ ಬೆಳೆಯ ಪ್ರಾತ್ಯಕ್ಷಿಕೆ ವೀಕ್ಷಿಸಬಹುದು.
-ಡಾ। ಕೆ.ಎನ್‌.ಶ್ರೀನಿವಾಸಪ್ಪ, ಕೃಷಿ ವಿವಿ ತೋಟಗಾರಿಕಾ ವಿಭಾಗದ ಪ್ರಾಧ್ಯಾಪಕ

click me!