
ಬೆಂಗಳೂರು (ಅ. 27): ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಕುರಿತ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕಥೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ರದ್ದುಗೊಂಡಿದೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಭಾರೀ ವಿರೋಧದ ಬಳಿಕ ಇಮ್ರಾನ್ ಖಾನ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು ಮಾಡಲಾಗಿದೆ. ಹಿಂದೂಪರ ಸಂಘಟನೆಗಳು ಕಲಾಗ್ರಾಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದವು. ಈ ಬೆನ್ನಲ್ಲೇ ಎಚ್ಚೆತ್ತ ಕಾರ್ಯಕ್ರಮ ಆಯೋಜಕರು 'ಕಾರ್ಯಕ್ರಮ ರದ್ದು' ಎಂದು ಮಾಹಿತಿ ಫಲಕ ಹಾಕಿದ್ದಾರೆ.
ಸುಧಾಕರ ಎಸ್ ಬಿ ಬರೆದಿರುವ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕಥೆ' ಪುಸ್ತಕವನ್ನು ಪ್ರಮಥ ಪ್ರಕಾಶನ ಪ್ರಕಟಿಸುತ್ತಿದೆ. ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಸಂಜೆ 5:30ಕ್ಕೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಬೇಕಿತ್ತು. ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ಕಾರ್ಯಕ್ರಮ ಭಾವಹಿಸಬೇಕಿತ್ತು. ಆದರೆ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಆಯೋಜಕರು ಮಾಹಿತಿ ನೀಡಿದ್ದಾರೆ.
ಆಯೋಜಕರ ವಿರುದ್ಧ ದೂರು: ಇನ್ನು ಹಿಂದೂ ಜನಜಾಗೃತಿ ಸಮಿತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಕರ ವಿರುದ್ಧ ದೂರು ದಾಖಲಿಸಿತ್ತು. ಇಮ್ರಾನ್ ಖಾನ್ ಪುಸ್ತಕ ಬಹಿಷ್ಕರಿಸುವಂತೆ , ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮನವಿ ಮಾಡಿವೆ. ನಮ್ಮ ದೇಶದಲ್ಲಿ ಸಾಕಷ್ಟು ಪರಿಸರವಾದಿಗಳು, ಜೀವಂತ ದಂತಕತೆಗಳಿವೆ. ಅದರ ಬಗ್ಗೆ ಬರೆಯೋದು ಬಿಟ್ಟು ಪಾಕ್ ದಿವಾಳಿಯನ್ನಾಗಿ ಮಾಡಿದ ಇಮ್ರಾನ್ ಪುಸ್ತಕ ಬರೆಯೋದು ಎಷ್ಟರ ಮಟ್ಟಿಗೆ ಸರಿ? ಇಂತಹ ಗಂಜಿ ಗಿರಾಕಿಗಳಿಗೆ ತಕ್ಕ ಪಾಠ ಕಲಿಸ್ಬೇಕು ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು.