ಧಾರವಾಡದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಹಂಪ್ಸ್, ಉಬ್ಬುತಗ್ಗು ಮಾಡಲು ಮತ್ತು ಕಮಾನು, ದ್ವಾರಬಾಗಿಲು ಮತ್ತು ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸಂಬಂಧಿಸಿದ ಪೋಲಿಸ್ ಇಲಾಖೆಯಿಂದ ಪೂರ್ವಾನುಮತಿ ಮತ್ತು ಎನ್‍ಓಸಿ ಪಡೆಯುವುದು ಕಡ್ಡಾಯವಾಗಿದೆ.
ಧಾರವಾಡ (ಅ.27): ಸಾರ್ವಜನಿಕ ರಸ್ತೆಗಳಲ್ಲಿ ಹಂಪ್ಸ್, ಉಬ್ಬು ತಗ್ಗು ಮಾಡಲು ಮತ್ತು ಕಮಾನು, ದ್ವಾರ ಬಾಗಿಲು ಮತ್ತು ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸಂಬಂಧಿಸಿದ ಪೋಲಿಸ್ ಇಲಾಖೆಯಿಂದ ಪೂರ್ವಾನುಮತಿ ಮತ್ತು ಎನ್‍ಓಸಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು. ಅವರು ಇಂದು ಬೆಳಿಗ್ಗೆ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಸಾರಿಗೆ ಪ್ರಾಧಿಕಾರದ ಸಮಿತಿ ಸಭೆ ಜರುಗಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಅನುಮತಿ ಇಲ್ಲದೆ ಹಂಪ್ಸ್ ಹಾಕುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ ಇಂತಹ ಬಹುತೇಕ ಕಡೆ ಸೂಚನಾ ಫಲಕಗಳು ಸಹ ಇರುವದಿಲ್ಲ.ಇದರಿಂದ ವಾಹನಗಳ ಅಪಘಾತವಾಗುತ್ತಿವೆ ಯಾವುದೇ ಇಲಾಖೆ ಅಥವಾ ಇತರರು ರಸ್ತೆಯಲ್ಲಿ ಹಂಪ್ಸ್ ಹಾಕುವ ಅಥವಾ ಕಮಾನು, ಬಸ್ ನಿಲ್ದಾಣ ನಿರ್ಮಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಹಾಗೂ ಎನ್‍ಓಸಿ ಪಡೆಯುವುದು ಕಡ್ಡಾಯ ಈ ಕುರಿತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಿಂದ ತಕ್ಷಣ ಸುತ್ತೋಲೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ವಿವಿದೆಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಇದರಿಂದ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ಸವಾರರ ಸುರಕ್ಷಿತ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಸಂಭಂದಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಅವಳಿ ನಗರಗಳಲ್ಲಿ ಹಾಗೂ ಗ್ರಾಮೀಣ ರಸ್ತೆಗಳಲ್ಲಿರುವ ಅವೈಜ್ಞಾನಿಕ ಉಬ್ಬುಗಳನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮವಹಿಸಬೇಕು.ಇಲಾಖೆಗಳು ಜಂಟಿಯಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ಮೋಟಾರು ವಾಹನ (ತಿದ್ದಪಡಿ) ಕಾಯ್ದೆ ಅನ್ವಯ ದ್ವಿಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಕುಳಿತವರು ಕಡ್ಡಾಯವಾಗಿ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ ಮತ್ತು ನಾಲ್ಕುಚಕ್ರದ ವಾಹನಗಳಲ್ಲಿ ಸಂಚರಿಸುವುದು ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು. ಈ ಕುರಿತು ಜಿಲ್ಲಾ ಪೋಲಿಸ್ ಹಾಗೂ ನಗರ ಪೋಲಿಸ್ ಆಯುಕ್ತರು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜ್ಯೂಬಲಿ ಸರ್ಕಲ್ ನಿಂದ ನರೇಂದ್ರ ಹತ್ತಿರದ ಬೈಪಾಸ್ ವರೆಗೆ ರಸ್ತೆ ಪಕ್ಕದಲ್ಲಿ ಸೈನೆಜ್, ರಿಪ್ಲೇಕ್ಟರ್ ಗಳನ್ನು ಅಳವಡಿಸಬೇಕು. ಸ್ಮಾರ್ಟ್ ಸಿಟಿ ಕಾಮಗಾರಿಗಳನ್ಬು ಆದ್ಯತೆ ಮೇಲೆ ನಿರ್ವಹಿಸಬೇಕು. ಮಳೆ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ತಕ್ಷಣ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳನ್ನು ಆದ್ಯತೆ ಮೇಲೆ ಮುಕ್ತಾಯಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಉಪ ಪೋಲಿಸ್ ಆಯುಕ್ತ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ರಸ್ತೆ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ,ಮಹಾನಗರಪಾಲಿಕೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಕಾಮಗಾರಿಗಳು ನಿಧಾನ ಆಗುತ್ತಿರುವದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು. ಮತ್ತು ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಪೋಲಿಸ್ ಇಲಾಖೆ ಗಮನಕ್ಕೂ ತರಬೇಕು.ಇದರಿಂದ ಸುಗಮ ಸಂಚಾರಕ್ಕೆ ಇಲಾಖೆಯಿಂದ ಮುಂಜಾಗ್ರತಾ ಕ್ರಮವಹಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಿಪೇಡ್ ಆಟೋರಿಕ್ಷಾ ಕೌಂಟರ್ ಸ್ಥಾಪಿಸಿ, ಪ್ರಾರಂಭಿಸುವ ಕುರಿತು ಸರ್ಕಾರಕ್ಕೆ ಸಲ್ಲಿಸುವ ಕರಡು ಪ್ರಸ್ತಾವನೆ ಬಗ್ಗೆ ಚರ್ಚಿಸಿ, ಪ್ರಾಧಿಸಿಕ ಸಾರಿಗೆ ಅಧಿಕಾರಿಗಳು ಆಟೋಚಾಲಕರಿಗೆ ಮತ್ತು ಗ್ರಾಹಕರಿಗೆ ತೊಂದರೆ ಆಗದಂತೆ ಸೂಕ್ತವಾದ ವರದಿಯನ್ನು ಸಮಿತಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅವಳಿನಗರದಲ್ಲಿ ಆಟೋರೀಕ್ಷಾ ನಿಲ್ದಾಣಗಳ ಆಧುನೀಕರಣ ಮತ್ತು ಹೊಸ ಆಟೋರೀಕ್ಷಾ ನಿಲ್ದಾಣಗಳನ್ನು ನಿರ್ಮಿಸಲು ಮಹಾನಗರಪಾಲಿಕೆ ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಬೇಕು. ಮತ್ತು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಾಗೂ ಪಾಲಿಕೆ ಸದಸ್ಯರ ಅನುದಾನದಲ್ಲಿ ಅಗತ್ಯವಿರುವಲ್ಲಿ ಹೊಸ ಆಟೋರೀಕ್ಷಾ ನಿಲ್ದಾಣಗಳನ್ನು ನಿರ್ಮಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಅವರು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಂಚರಿಸುವ ಆಟೋರೀಕ್ಷಾಗಳ ಮೀಟರ್ ಅಳವಡಿಸುವ ಬಗ್ಗೆ ಚರ್ಚಿಸಿ, ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೋಳ್ಳಲು ನೀಡಿರುವ ಕಾಲಮಿತಿಯನ್ನು ಪರಿಷ್ಕರಿಸಿ, ಜನವರಿ ತಿಂಗಳವರೆಗೆ ಸಮಯಾವಕಾಶ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ವೇದಿಕೆಯಲ್ಲಿ ಇದ್ದರು. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ, ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಮುರಳಿಧರ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು ಸಭೆಯಲ್ಲಿ ಪ್ರಾಧೇಶಿಕ ಸಾರಿಗೆ ಅಧಿಕಾರಿಗಳಾದ ಬಿ. ಶಂಕರಪ್ಪ, ಕೆ. ದಾಮೋದರ, ಡಿವೈಎಸ್ ಪಿ ಚಂದ್ರಕಾಂತ ಪೂಜಾರ, ಸಂಚಾರಿ ಪೋಲೀಸ್ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯ್ಕರ್, ಮಹಾನಗರಪಾಲಿಕೆ ಅದೀಕ್ಷಕ ಅಭಿಯಂತರ ತಿಮ್ಮಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಆರ್.ಸಿ.ಹುರಕಡ್ಲಿ, ಎನ್.ಡಬ್ಲ್ಯೂ ಕೆ.ಎಸ್.ಆರ್.ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶಶಿಧರ ಚನ್ನಪ್ಪಗೌಡರ, ವಿವೇಕಾನಂದ ವಿಶ್ವಜ್ಞ, ವಿಭಾಗೀಯ ಸಾರಿಗೆ ಅಧಿಕಾರಿ ಆರ್.ಬಿ.ರೂಗೆ, ಕೆ.ಎಲ್.ಗುಡೆನ್ನವರ, ಮುಜುಮದಾರ, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಜಿ.ವಿ.ದಿನಮಣಿ, ಲಕ್ಷ್ಮಿ ಬೂದನ್ನವರ ಸೇರಿದಂತೆ ವಿವಿಧ ಅಧಿಕಾರಿಗಳು, ರಸ್ತೆ ಸುರಕ್ಷತಾ ಸಮಿತಿ ಸದಸ್ಯರು ಭಾಗವಹಿಸಿದ್ದರು.