ಬೆಂಗಳೂರು ಪ್ರವಾಹ ಎಫೆಕ್ಟ್: ಒತ್ತುವರಿ ತೆರವಿಗೆ ಟೊಂಕಕಟ್ಟಿ ನಿಂತ ಸಿಎಂ!

By Ramesh BFirst Published Sep 12, 2022, 3:48 PM IST
Highlights

ಬೆಂಗಳೂರಿನ ಕೆಲವೆಡೆ ಪ್ರವಾಹ ಉಂಟಾಗಿರುವುದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ನಗರದಲ್ಲಿ ಒತ್ತುವರಿ ತೆರವು ಕಾರ್ಯಚರಣೆಗೆ ಸಿಎಂ ಟೊಂಕಕಟ್ಟಿ ನಿಂತಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್.12): ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದ ಬೆಂಗಳೂರು ಹೆಸರು ರಾಷ್ಟ್ರದ ಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ತೆರವು ಕಾರ್ಯಚರಣೆಗಿಳಿದಿದೆ.

ಬೆಂಗಳೂರಿನ ಮಹದೇವಪುರ ವಲಯದ ರೈನ್‌ ಬೋ ಡ್ರೈವ್‌, ಇಕೋ ಸ್ಪೇಸ್‌, ಅನುಗ್ರಹ ಲೇಔಟ್‌, ಸಾಯಿಲೇಔಟ್‌ ಸೇರಿದಂತೆ ಇನ್ನಿತರೆ ಕಡೆ ಇಂದಿನಿಂದ ದೊಡ್ಡ ಮಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ಯಾರು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಸಹಜ ಕಾಲುವೆಗೆ ಯಾರೇ ಅಡ್ಡಿ ಬಂದರೂ ತೆರವು ಸೂಚನೆ ನೀಡಿದ್ದೇವೆ. ಅದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಎಲ್ಲರಿಗೂ ಕೂಡ ಮಳೆಯಿಂದ ತೊಂದರೆ ಆಗಿದೆ. ತೆರವು ಮಾಡುವುದು ಪ್ರಾರಂಭ ಆಗಿದೆ. ಅದು ನಿಲ್ಲುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.

Rajakaluve Encroachment ತೆರವಿಗೆ ಬಿಬಿಎಂಪಿ ಸ್ಪೆಷಲ್‌ ಡ್ರೈವ್‌; ನಿಮ್ಮ ಮನೆಯೂ ನೆಲಸಮವಾಗತ್ತಾ?

ಹಲವಾರು ಪ್ರಕರಣ ಈಗಾಗಲೇ ಕೋರ್ಟ್ ನಲ್ಲಿ ಇವೆ. ಕೋರ್ಟ್ ಕೂಡ ಒತ್ತುವರಿ ತೆರವು ಮಾಡಿ ಅಂತಲೇ ಸೂಚನೆ ನೀಡಿದೆ. ಈ ಬಾರಿ ನಾವು ನಿಲ್ಲಿಸೋದಿಲ್ಲ, ತೆರವು ಮಾಡಿಯೇ ಮಾಡ್ತೇವೆ. ಮಳೆಯಿಂದಾಗಿ ಐಟಿ-ಬಿಟಿಯವರಿಗೂ ತೊಂದರೆ ಆಗಿದೆ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆ ಆಗಿದೆ. ಸಾಮಾನ್ಯರಿಗೂ ತೊಂದರೆ ಆಗಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. 

ಇದೇ ವಿಚಾರವಾಗಿ ಬೊಮ್ಮಾನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಯಾರು ಎಷ್ಟೇ ಪ್ರಬಾವಿಗಳು ಇದ್ರೂ,ಒತ್ತುವರಿ ತೆರವು ಮಾಡುತ್ತೇವೆ. ಫ್ಲಡ್ ನಿಂದ ಎಲ್ಲೆಲ್ಲಿ ಮುಳುಗಡೆ ಆಗಿದೆ ಅದೆಲ್ಲಾ ನೋಡಿಕೊಂಡು ಸುಮ್ನೆ ಇರೋಕಾಗಲ್ಲ. ರಾಜಕಾಲುವೆ ಒತ್ತುವರಿ ತೆರವು ಬಗ್ಗೆ ಸ್ಟೇ ಕೊಡುವುದಕ್ಕೂ ಆಗಲ್ಲ. ತೆರವು ಮಾಡಿಸೋಕೆ ಯಾರೂ ಅಡ್ಡಿ ಪಡಿಸಬಾರದು. ಬೆಂಗಳೂರಿನಲ್ಲಿ ಮತ್ತೆ ಇಂತಹ ಅನಾಹುತ ಆಗಬಾರದು ಅಂದ್ರೆ ತೆರವು ಕಾರ್ಯ ಅನಿವಾರ್ಯ ಎಂದರು.

ದೊಡ್ಡವರಿದ್ರೂ ಅವರೂ ಅರ್ಥ ಮಾಡಿಕೊಳ್ಳಬೇಕು. ನನ್ನ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಕಡೆ ತೆರವು ನಡೀತಿದೆ. ಐಟಿ ಪಾರ್ಕ್ ಇರಲಿ. ಮನೆ ಇರಲಿ ಒತ್ತುವರಿ ಮಾಡಿದ್ರೆ ತೆರವು ಮಾಡ್ತೇವೆ. ಬಡವರಿದ್ರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡ್ತೇವೆ ಎಂದು ಹೇಳಿದರು.

ಬಿಡಿಎ, ಸೊಸೈಟಿ ಲೇಔಟ್, ಗಾಲ್ಫ್ ಕ್ಲಬ್ ಗಳು ಸಹ ಒತ್ತುವರಿ ಮಾಡಿವೆ. ಹಲವು ಕೆರೆಗಳನ್ನು ಮುಚ್ಚಿ ಲೇಔಟ್ ಮಾಡಲಾಗಿದೆ. ಸಾರ್ವಜನಿಕರು, ಐಟಿಬಿಟಿಗಳು ಅಷ್ಟೇ ಅಲ್ಲ ಸರ್ಕಾರಿ ಸಂಸ್ಥೆಗಳೂ ಸಹ ಒತ್ತುವರಿ ಮಾಡಿವೆ. ಸರ್ಕಾರದ ಸಂಸ್ಥೆಗಳು ಮಾಡಿದ ಒತ್ತುವರಿ ತೆರವು ಯಾವ ರೀತಿ ಮಾಡಬೇಕು ಅಂತ ನಿರ್ಧರಿಸ್ತೇವೆ ಎಂದು ತಿಳಿಸಿದರು.

ಸಿಎಂ ಬೆಂಗಳೂರು ಉಸ್ತುವಾರಿ ಆಗಿರೋದ್ರಿಂದ ಬೇಗ ಹಣ ಬಿಡುಗಡೆ ಆಗುತ್ತೆ. ಸಿಎಂಗೆ ಬೆಂಗಳೂರು ಮೇಲೆ ವಿಶೇಷ ಪ್ರೀತಿ ಇದೆ. ಬೆಂಗಳೂರು ಉಸ್ತುವಾರಿ ಯಾರೇ ಇದ್ದರೂ ಮಳೆ ತಡೆಯೋಕ್ಕೆ ಯಾರಿಂದಲೂ ಆಗಲ್ಲ. ಮಳೆ ವಿಚಾರದಲ್ಲಿ ರಾಜಕಾರಣ ಮಾಡೋದು ಬೇಡ ಎಂದು ಮನವಿ ಮಾಡಿದರು.

click me!