
ದಕ್ಷಿಣ ಕನ್ನಡ (ನ.17): ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್‌ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ಲೋಪದೋಷಗಳನ್ನು ಎಸಗುತ್ತಿದ್ದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ (Bolas Agro Private Limited) ಆಹಾರೋತ್ಪನ್ನ ಘಟಕದಿಂದ ಬರೋಬ್ಬರಿ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಆರೋಗ್ಯ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಿಬ್ಬಂದಿ ದಾಳಿ ಮಾಡಿದಾಗ ಘಟಕದಲ್ಲಿನ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು (Raw Groundnut Oil) ತರಿಸಿ, ಅದನ್ನು ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ (Cold Pressed Groundnut Oil) ಎಂದು ರೀಪ್ಯಾಕ್ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಇದು ಸ್ಪಷ್ಟವಾಗಿ ಮಿಸ್‌ಬ್ರ್ಯಾಂಡಿಂಗ್ ಹಾಗೂ ಗ್ರಾಹಕರನ್ನು ದಾರಿತಪ್ಪಿಸುವ ಕೃತ್ಯವಾಗಿರುವುದರಿಂದ ಈ ಜಪ್ತಿ ಕ್ರಮ ಕೈಗೊಳ್ಳಲಾಗಿದೆ.
ಬೋಲಾಸ್ ಆಗ್ರೋ ಘಟಕದಿಂದ ಒಟ್ಟು 1,240 ಕೆ.ಜಿ. ತೂಕದ ಈ ಕೆಳಗಿನ ಅಡುಗೆ ಎಣ್ಣೆ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ:
ಕಡಲೆಕಾಯಿ ಎಣ್ಣೆ (ಬಾಕ್ಸ್): ಪ್ರತಿ ಬಾಕ್ಸ್‌ಗೆ 10 ಕೆ.ಜಿ.ಯಂತೆ ಒಟ್ಟು 11 ಬಾಕ್ಸ್‌ಗಳು.
ಕಡಲೆಕಾಯಿ ಎಣ್ಣೆ (ಕ್ಯಾನ್): ಪ್ರತಿ ಕ್ಯಾನ್‌ಗೆ 35 ಲೀಟರ್‌ನಂತೆ ಒಟ್ಟು 30 ಕ್ಯಾನ್‌ಗಳು.
ತೆಂಗಿನ ಎಣ್ಣೆ (ಬಾಕ್ಸ್): ಪ್ರತಿ ಬಾಕ್ಸ್‌ಗೆ 20 ಕೆ.ಜಿ.ಯಂತೆ ಒಟ್ಟು 4 ಬಾಕ್ಸ್‌ಗಳು.
ಮಿಸ್‌ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಯ ವಿರುದ್ಧ ಕೈಗೊಂಡಿರುವ ಈ ಕಠಿಣ ಕ್ರಮವು, ಗ್ರಾಹಕರ ಹಿತಾಸಕ್ತಿ ಮತ್ತು ಆಹಾರ ಸುರಕ್ಷತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.