ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು [ಡಿ.09]: ಚಲಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಪೀಣ್ಯ ಎಂಟನೇ ಮೈಲಿ ಸಮೀಪ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೀಣ್ಯ ಸಮೀಪದ ಶೋಭಾ ಅಪಾರ್ಟ್‌ಮೆಂಟ್ ನಿವಾಸಿ ಇರ್ಷಾದ್ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಪಾರಾದವರು. ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಇರ್ಷಾದ್ ಕುಟುಂಬ ಸಮೇತ ಕಾರಿನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನ ಹಿಂಬದಿ ಹೊಗೆ ಬರಲು ಆರಂಭಿಸಿದ್ದು, ಹಿಂಬದಿ ಸವಾರನೊಬ್ಬ ಇರ್ಷಾದ್ ಅವರಿಗೆ ಕೈಸನ್ನೆ ಮೂಲಕ ಹೊಗೆ ಬರುತ್ತಿರುವ ಬಗ್ಗೆ ಹೇಳಿದ್ದಾನೆ.
undefined
ಸತತ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದು!...
ಇರ್ಷಾದ್ ಕೂಡಲೇ ಕಾರು ನಿಲ್ಲಿಸಿದ್ದಾರೆ, ಅಷ್ಟರೊಳಗೆ ಹಿಂಬದಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪತ್ನಿ ಮತ್ತು ಮಕ್ಕಳನ್ನು ಕೆಳಗೆ ಇಳಿಸಿದ್ದಾರೆ. ನೋಡು-ನೋಡುತ್ತಿದ್ದಂತೆ ಬೆಂಕಿ ಜಾಸ್ತಿಯಾಗಿ ಕಾರು ಹೊತ್ತಿ ಉರಿಯತೊಡಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದರಾದರೂ ಅಷ್ಟೊತ್ತಿಗೆ ಕಾರು ಸುಟ್ಟು ಕರಕಲಾಗಿತ್ತು.
ಶಾರ್ಟ್ ಸಕ್ರ್ಯೂಟ್‌ನಿಂದ ಅವಘಡ ಸಂಭವಿಸಿರುವ ಶಂಕೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.