
ಬೆಂಗಳೂರು (ಜು.18): ಕಳೆದ 25 ವರ್ಷಗಳಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) .3,969 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಒತ್ತುವರಿ ತೆರವು ಮಾಡಿ 988 ಎಕರೆ ವಶಪಡಿಸಿಕೊಂಡಿದೆ ಎಂದು ಬಿಎಂಟಿಎಫ್ ಎಡಿಜಿಪಿ ಡಾ ಕೆ.ರಾಮಚಂದ್ರ ರಾವ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ, ಬಿಡಿಎ, ಜಲಮಂಡಳಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯ್ದೆಗಳ ಅಡಿಯಲ್ಲಿ ಬಿಎಂಟಿಎಫ್ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿನ ಸರ್ಕಾರಿ ಜಾಗ ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. 1996ರಲ್ಲಿ ಸ್ಥಾಪನೆಗೊಂಡ ಬಿಎಂಟಿಎಫ್ ಈವರೆಗೆ 9,296 ಪ್ರಕರಣಗಳಲ್ಲಿ ಒತ್ತುವರಿದಾರರ ಪಾಲಾಗಿದ್ದ .3,969.7 ಕೋಟಿ ಮೌಲ್ಯದ 988.68 ಎಕರೆ ಭೂಮಿಯನ್ನು ವಶಕ್ಕೆ ಪಡೆದು ಸಂಬಂಧಪಟ್ಟಇಲಾಖೆಗೆ ಬಿಎಂಟಿಎಫ್ ನೀಡಿದೆ ಎಂದು ತಿಳಿಸಿದರು. ಸರ್ಕಾರಿ ಭೂಮಿ ಒತ್ತುವರಿ ಸೇರಿ ಇನ್ನಿತರ ವಿಚಾರಕ್ಕೆ ಸಂಬಂಧಿಸಿದಂತೆ 2017ರಿಂದ 2022ರವರೆಗೆ ಬಿಎಂಟಿಎಫ್‌ಗೆ 3,345 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ 2,449 ಅರ್ಜಿಗಳ ಪರಿಶೀಲನೆ, ವಿಚಾರಣೆ, ತನಿಖೆ ನಡೆಸಿ ವಿಲೇವಾರಿ ಮಾಡಲಾಗಿದೆ. ಉಳಿದಂತೆ 896 ಅರ್ಜಿಗಳನ್ನು ಇತ್ಯರ್ಥಗೊಳಿಸುವುದು ಬಾಕಿ ಉಳಿದಿದೆ. ಪ್ರಸಕ್ತ ವರ್ಷವೂ ಸೇರಿದಂತೆ 6 ವರ್ಷಗಳಲ್ಲಿ 281 ಪ್ರಕರಣಗಳನ್ನು ಬಿಎಂಟಿಎಫ್ ಇತ್ಯರ್ಥಗೊಳಿಸಿದೆ. ಅದರಲ್ಲಿ 97 ಪ್ರಕರಣಗಳಿಗೆ ದೋಷಾರೋಪ ಪಟ್ಟಿಸಲ್ಲಿಸಿದ್ದರೆ, 34 ಪ್ರಕರಣಗಳಿಗೆ ಬಿ-ರಿಪೋರ್ಚ್ ನೀಡಿದೆ. ಅಲ್ಲದೆ, 13 ಪ್ರಕರಣಗಳಿಗೆ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ. 130 ಪ್ರಕರಣಗಳ ವಿಚಾರಣೆ, ತನಿಖೆ ಭಾಗಿಯಿದೆ ಎಂದು ರಾಮಚಂದ್ರ ರಾವ್ ತಿಳಿಸಿದರು.
ಇನ್ನು 2020-21ರಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಿದ್ದ ಕಾರಣಕ್ಕಾಗಿ ಬಿಎಂಟಿಎಫ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಕ್ಕೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ 594 ಪ್ರಕರಣಗಳನ್ನು ದಾಖಲಾಗಿವೆ. ವಿಚಾರಣೆ, ಒತ್ತುವರಿ ತೆರವಿನಂತಹ ಪ್ರಕ್ರಿಯೆ ನಡೆಸುವುದಕ್ಕೆ ಸಾಧ್ಯವಾಗಿಲ್ಲ ಎಂದರು.
ಜಲಮಂಡಳಿಗೆ 20 ಕೋಟಿ ನೀರಿನ ಶುಲ್ಕ ಸಂಗ್ರಹಕ್ಕೆ ಬಿಎಂಟಿಎಫ್ ನೆರವು: ಜಲಮಂಡಳಿಗೆ ನೀರಿನ ಬಿಲ್ ಪಾವತಿಸದೇ ವಂಚನೆ ಮಾಡಿದ ಗ್ರಾಹಕರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಕ್ರಮ ಕೈಗೊಳ್ಳುವ ಮೂಲಕ ಕಳೆದ 5 ವರ್ಷದಿಂದ .20 ಕೋಟಿ ವಸೂಲಿಗೆ ನೆರವಾಗಿದೆ ಎಂದು ಬಿಎಂಟಿಎಫ್ ಎಡಿಜಿಪಿ ಡಾ ಕೆ.ರಾಮಚಂದ್ರರಾವ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ 10.50 ಲಕ್ಷ ಸಂಪರ್ಕಗಳಿಗೆ ಕುಡಿಯುವ ನೀರನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಒದಗಿಸುತ್ತಿದೆ. ಪ್ರತಿ ವರ್ಷ ಸುಮಾರು 10 ಸಾವಿರಕ್ಕೂ ಅಧಿಕ ಗ್ರಾಹಕರು ನೀರಿನ ಬಿಲ್ ಸಮರ್ಪಕವಾಗಿ ಪಾವತಿಸದಿರುವ, ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದ ಮತ್ತು ನೀರಿನ ಕಳ್ಳತನ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಜಲಮಂಡಳಿಯು ಬಿಎಂಟಿಎಫ್‌ಗೆ ದೂರು ಸಲ್ಲಿಸುತ್ತದೆ. ಈ ದೂರು ಆಧರಿಸಿ ಬಿಎಂಟಿಎಫ್ ನೋಟಿಸ್ ಜಾರಿ ಮಾಡುವ, ನೋಟಿಸ್ ಜಾರಿಯ ನಂತರವೂ ನೀರಿನ ಬಿಲ್ ಪಾವತಿ ಮಾಡದವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಅಲ್ಲಿ ವಿಚಾರಣೆ ನಡೆಸಿ ಬಾಕಿ ಬಿಲ್ ಮೊತ್ತದ ಜತೆಗೆ, ದುಬಾರಿ ದಂಡವನ್ನು ವಿಧಿಸಿ ಕೂಡಲೇ ಪಾವತಿಸುವಂತೆ ಆದೇಶ ಹೊರಡಿಸಲಾಗುತ್ತದೆ. ವಾರ್ಷಿಕ ಬಿಎಂಟಿಎಫ್ ನೆರವಿನಿಂದ ಜಲಮಂಡಳಿಗೆ 3ರಿಂದ 5 ಕೋಟಿ ವಸೂಲಿ ಆಗುತ್ತಿದೆ ಎಂದರು.
2018ರಿಂದ 2022ರ ಜೂನ್ ಅಂತ್ಯಕ್ಕೆ ಒಟ್ಟು 551 ದೂರುಗಳು ದಾಖಲಾಗಿದ್ದವು. ಈ ಬಗ್ಗೆ ಬಿಎಂಟಿಎಫ್ ಕೈಗೊಂಡ ಕ್ರಮಗಳಿಂದಾಗಿ ಜಲಮಂಡಳಿಗೆ .19.34 ಕೋಟಿ ವಸೂಲಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಬಿಎಂಟಿಎಫ್ ನೆರವಿನಿಂದ ವಸೂಲಿಯಾದ ನೀರಿನ ಬಿಲ್
| ವರ್ಷ | ದೂರುಗಳ ಸಂಖ್ಯೆ | ವಸೂಲಿ ಮೊತ್ತ |
| 2018 | 78 | 2.95 ಕೋಟಿ |
| 2019 | 125 | 8.38 ಕೋಟಿ |
| 2020 | 47 | 3.05 ಕೋಟಿ |
| 2021 | 271 | 4.94 ಕೋಟಿ |
| 2022 | 30 | 72 ಸಾವಿರ (ಜೂ.30) |
| ಒಟ್ಟು | 551 | 19.34 ಕೋಟಿ |