ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ರಸ್ತೆ ಬಿರುಕುಗೊಂಡಿದ್ದು, ಮತ್ತೆ ಕುಸಿಯುವ ಭೀತಿ ಉಂಟಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪ್ರವಾಸಿಗರು ಮುಂಜಾಗ್ರತೆ ವಹಿಸುವುದು ಉತ್ತಮ
ಕಾರ್ಕಳ (ಜು.18): ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ರಸ್ತೆ ಬಿರುಕುಗೊಂಡಿದ್ದು, ಮತ್ತೆ ಕುಸಿಯುವ ಭೀತಿ ಉಂಟಾಗಿದೆ. ಆಗುಂಬೆ ಪರಿಸರದಲ್ಲಿ ಕಳೆದ 15 ದಿನಗಳಿಂದ ಭಾರಿ ಮಳೆ ಸುರಿಯುತಿದ್ದು, ಘಾಟ್ ರಸ್ತೆ ಮತ್ತೆ ಕುಸಿಯುವ ಸಾಧ್ಯತೆ ಇದೆ. ಜುಲೈ 10ರಂದು ಆಗುಂಬೆ ಘಾಟ್‌ನ 3ನೇ ಹಾಗೂ ಹತ್ತನೇ ತಿರುವಿನಲ್ಲಿ ಗುಡ್ಡ ಕುಸಿದು ಎರಡು ದಿನ ಸಂಚಾರ ನಿರ್ಬಂಧ ಹೇರಲಾಗಿತ್ತು. ನಂತರ ರಸ್ತೆಯನ್ನು ಸಂಚಾರಕ್ಕೆ ಯೋಗ್ಯಗೊಳಿಸಿ ಲಘು ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಕಳೆದ ಒಂದು ವಾರದ ಹಿಂದೆ ಇದೇ ಸ್ಥಳದಲ್ಲಿ ಭೂಕುಸಿತ(Landslide) ಹಾಗೂ ಭಾರಿ ಗಾತ್ರದ ಮರವೊಂದು ಬಿದ್ದಿತ್ತು. ಈ ರಸ್ತೆಯಲ್ಲಿ ಸಂಚರಿಸುವ ವಾಹನ(Vehicle) ಚಾಲಕರು ಹಾಗೂ ಪ್ರಯಾಣಿಕರು ಜಾಗ್ರತೆವಹಿಸಿ ಪ್ರಯಾಣಿಸುವುದು ಉತ್ತಮ.
ರಸ್ತೆಯಲ್ಲಿ ಚರಂಡಿಗಳಿಲ್ಲ: ಘಟ್ಟಪ್ರದೇಶಗಳಲ್ಲಿ ಹರಿಯುವ ನೀರು ರಸ್ತೆ ಬದಿಯಲ್ಲಿ ಹರಿಯದೆ ಮಧ್ಯಭಾಗದಲ್ಲಿ ಹರಿಯುತ್ತಿದೆ. ಇದರಿಂದಾಗಿ ಮಣ್ಣು ಹದಗೊಂಡಿದೆ. ಜು.10ರಂದು ರಸ್ತೆ ಕುಸಿತವಾದ ದಿನದಂದು ಚಿಕ್ಕ ಬಿರುಕು ಮೂಡಿದ್ದು, ಜು.17ರಂದು ಬಿರುಕು ಮತ್ತಷ್ಟುಹಿರಿದಾಗಿದೆ. ರಸ್ತೆಯ ಮೇಲೆ ನಿರಂತರ ನೀರು ಸಾಗಿ ರಸ್ತೆಯ ಕೆಳಭಾಗದಲ್ಲಿ ಝರಿಯಂತೆ ನೀರು ಹರಿಯುತ್ತಿದೆ. ಸದ್ಯಕ್ಕೆ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಲಘು ವಾಹನಗಳಿಗೆ ಶಿರಾಡಿ ಪರ್ಯಾಯ ಮಾರ್ಗ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ದೋಣಿಗಲ್‌ನಲ್ಲಿ ಭೂಕುಸಿತ ಸಂಭವಿಸಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿರುವುದರಿಂದ ಮಂಗಳೂರು ಮತ್ತು ಬೆಂಗಳೂರಿನಿಂದ ಸಂಚರಿಸುವ ಲಘು ವಾಹನಗಳಿಗೆ ಪ್ರತ್ಯೇಕ ಏಕಮುಖ ಸಂಚಾರ ಮಾರ್ಗಗಳನ್ನು ಸೂಚಿಸಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಾರು, ಜೀಪು, ಟೆಂಪೊ, ಎಲ್‌ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು, ಆಂಬ್ಯುಲೆನ್ಸ್‌ಗಳಿಗೆ ಮಾತ್ರ ಈ ಮಾರ್ಗ ಅನ್ವಯಿಸುತ್ತದೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಈ ವಾಹನಗಳು 30 ಮೀ. ವೇಗಮಿತಿಯಲ್ಲಿ ಸಕಲೇಶಪುರ- ಆನೆಮಹಲ್- ಕ್ಯಾನಹಳ್ಳಿ- ಚಿನ್ನಳ್ಳಿ- ಕಡಗರವಳ್ಳಿ- ಮಾರನಹಳ್ಳಿ ಮಾರ್ಗವಾಗಿ ಸಂಚರಿಸಬಹುದು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು 30 ಕಿ.ಮೀ. ವೇಗ ಮಿತಿಯಲ್ಲಿ ಮಾರನಹಳ್ಳಿ- ಕಾಡುಮನೆ- ಹಾರ್ಲೆ- ಕೂಡಿಗೆ- ಆನೆಮಹಲ್- ಸಕಲೇಶಪುರ ಮಾರ್ಗವಾಗಿ ಸಂಚರಿಸಬಹುದು. ಇದನ್ನೂ ಓದಿ: ದ.ಕ., ಉಡುಪಿ: ಮಳೆ ಕಡಿಮೆ, ಇಂದು ಆರೆಂಜ್ ಅಲರ್ಟ್
ಶಿರಾಡಿ ಘಾಟಿ ಹೆದ್ದಾರಿ ಸಂಚಾರ ಬಂದ್ ಆಗಿರುವುದರಿಂ ದ ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ಎಲ್ಲ ಬಗೆಯ ವಾಹನಗಳಿಗೆ ಈಗಾಗಲೇ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಹಾಸನ- ಅರಕಲಗೂಡು- ಕುಶಾಲನಗರ- ಸಂಪಾಜೆ ಮೂಲಕ ಮಂಗಳೂರಿಗೆ, ಹಾಸನ- ಬೇಲೂರು- ಮೂಡಿಗೆರೆ- ಚಾರ್ಮಾಡಿ ಘಾಟಿ ಮೂಲಕ ಮಂಗಳೂರಿಗೆ (16,200 ಕೆಜಿಗಿಂತ ಕಡಿಮೆ ವಾಹನಗಳು), ಇದಕ್ಕಿಂತ ಹೆಚ್ಚು ತೂಕದ ಸರಕು ವಾಹನಗಳು ಈ ಎರಡು ಮಾರ್ಗಗಳನ್ನು ಹೊರತುಪಡಿಸಿ ಇತರ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ.
ಕೊಡಗಿನಲ್ಲಿ ಭಾರೀ ಮಳೆ ಹೆದ್ದಾರಿ ಬಿರುಕು:
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಳ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಬಿರುಕು ಬಿಡುತ್ತಿದ್ದು, ಕುಸಿಯುವ ಆತಂಕ ಇರುವುದರಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಮತ್ತು ಮಂಗಳೂರಿನಿಂದ ಮಡಿಕೇರಿಗೆ ಬರುವವರು ಮೇಕೆರಿ- ತಾಳತ್ತಮನೆ- ಅಪ್ಪಂಗಳ ಮಾರ್ಗವಾಗಿ ಸಾಗುವಂತೆ ಸೂಚನೆ ನೀಡಲಾಗಿದೆ. ತಿಮ್ಮಯ್ಯ ವೃತ್ತದಲ್ಲಿ ಶನಿವಾರ ರಾತ್ರಿ ಬ್ಯಾರಿಕೇಡ್ ಅಳವಡಿಸಿ ಮಂಗಳೂರು ರಸ್ತೆಯನ್ನು ಸಂಚಾರಿ ಪೊಲೀಸರು ಬಂದ್ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗ ಬಂದ್ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆ ಬಂದ್ ಮಾಡಲಾಗಿರುವುದರಿಂದ ಮೇಕೇರಿ ಮಾರ್ಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಹಂತದಲ್ಲಿರುವುದರಿಂದ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮಳೆ ಹಾನಿ ಸಂತ್ರಸ್ತರಿಗೆ ಕ್ಷಿಪ್ರವಾಗಿ ಸ್ಪಂದಿಸಿ: ಸಚಿವ ನಾಗೇಶ್
ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 275ನಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಮಡಿಕೇರಿ- ಸುಳ್ಯ ನಡುವಿನ ದೇವರಕೊಲ್ಲಿ-ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟದೆ. ರಸ್ತೆ ಕತ್ತರಿಸಿದಂತೆ ಬಿರುಕು ಬಿಟ್ಟಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಆತಂಕ ಹೆಚ್ಚಾಗಿದೆ. ಬಿರುಕು ಬಿಟ್ಟಿದ್ದಲ್ಲದೆ ಸ್ವಲ್ಪ ಜಗ್ಗಿದ ಹಾಗೆ ರಾಷ್ಟ್ರೀಯ ಹೆದ್ದಾರಿ ಕಾಣುತ್ತಿದೆ. ರಸ್ತೆಯಲ್ಲಿನ ಬಿರುಕು ಹೆಚ್ಚಾದರೆ ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಎದುರಾಗಿದೆ. ಬಿರುಕು ಬಿಟ್ಟಿರುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.