ಬಿಜೆಪಿ ಸಮಾವೇಶಕ್ಕೆ ಬಿಎಂಟಿಸಿ ಬಸ್‌: ಬೆಂಗಳೂರಿನಲ್ಲಿ ಓಡಾಡಲು ಪರದಾಡಿದ ಜನತೆ

By Kannadaprabha NewsFirst Published Sep 11, 2022, 8:13 AM IST
Highlights

1,600ಕ್ಕೂ ಅಧಿಕ ಬಿಎಂಟಿಸಿ  ಬಸ್‌ಗಳು ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಬಿಜೆಪಿ ಸಮಾವೇಶಕ್ಕೆ ತೆರಳಿದ್ದವು. ಶೇ.30 ರಷ್ಟು ಬಸ್‌ಗಳು ಸಮಾವೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅರ್ಧದಷ್ಟು ಬಸ್‌ಗಳ ಕೊರತೆಯು ಪ್ರಯಾಣಿಕರನ್ನು ಪರದಾಡುವಂತೆ ಮಾಡಿತ್ತು.

ಬೆಂಗಳೂರು (ಸೆ.11): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 1,600ಕ್ಕೂ ಅಧಿಕ ಬಸ್‌ಗಳು ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಬಿಜೆಪಿ ಸಮಾವೇಶಕ್ಕೆ ತೆರಳಿದ್ದ ಹಿನ್ನೆಲೆ ನಗರದಲ್ಲಿ ಪ್ರಯಾಣಿಕರು ಸಕಾಲಕ್ಕೆ ಬಸ್‌ ಇಲ್ಲದೇ ಪರದಾಟ ನಡೆಸಿದರು. ನಗರದಲ್ಲಿ ನಿತ್ಯ ವಿವಿಧ ಮಾರ್ಗಗಳಲ್ಲಿ ಬಿಎಂಟಿಸಿಯ ಅಂದಾಜು ಐದು ಸಾವಿರ ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಜನಸ್ಪಂದನಾ ಸಮಾವೇಶಕ್ಕಾಗಿ 1,637 ಬಸ್‌ಗಳನ್ನು ಬಿಜೆಪಿ ಶನಿವಾರ ಗುತ್ತಿಗೆ ಪಡೆದ ಕಾರಣ ದೊಡ್ಡಬಳ್ಳಾಪುರಕ್ಕೆ ತೆರಳಿದ್ದವು. ಹೀಗಾಗಿ, ಸಾಮಾನ್ಯ ದಿನಗಳಿಂತ ಮೂರನೇ ಒಂದು ಭಾಗದಷ್ಟು ಬಸ್‌ಗಳಿಲ್ಲದೇ ಬಹುತೇಕ ಮಾರ್ಗಗಳಲ್ಲಿ ಬಸ್‌ ಓಡಾಟ ಕಡಿಮೆಯಾಗಿತ್ತು. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿಯೂ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿ ಬಿಎಂಟಿಸಿ ಶೇ.20 ರಷ್ಟು ಬಸ್‌ಗಳ ಸಮಸ್ಯೆ ಎದುರಿಸುತ್ತದೆ. ಅದರಲ್ಲೂ ಶೇ.30 ರಷ್ಟು ಬಸ್‌ಗಳು ಸಮಾವೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅರ್ಧದಷ್ಟು ಬಸ್‌ಗಳ ಕೊರತೆಯು ಪ್ರಯಾಣಿಕರನ್ನು ಪರದಾಡುವಂತೆ ಮಾಡಿತ್ತು. ಬಸ್‌ ವ್ಯತ್ಯಯ ಬಗ್ಗೆ ಮಾಹಿತಿ ಇಲ್ಲದ ಪ್ರಯಾಣಿಕರು ಗಂಟೆಗಟ್ಟಲೆ ಕಾಯುತ್ತಿದ್ದ ದೃಶ್ಯಗಳು ನಗರದ ಬಸ್‌ ನಿಲ್ದಾಣಗಳಲ್ಲಿ ಕಂಡು ಬಂದವು. ನಗರದ ಹೊರವಲಯಗಳಲ್ಲಿ ಬಿಎಂಟಿಸಿ ಬಸ್‌ ಲಭ್ಯವಿಲ್ಲದೆ ಹಲವರು ಅನಿವಾರ್ಯವಾಗಿ ಆಟೋ ಅವಲಂಬಿಸಿದ್ದರು. ಲಭ್ಯವಿದ್ದ ಬಸ್‌ಗಳು ಸಂಪೂರ್ಣ ಭರ್ತಿಯಾಗಿ ಓಡಾಟ ನಡೆಸುತ್ತಿದ್ದವು. ಮೆಜೆಸ್ಟಿಕ್‌ನಲ್ಲಿ ವಿವಿಧ ಮಾರ್ಗಗಳಿಗೆ ಅಗತ್ಯ ಪ್ರಮಾಣದ ಬಸ್‌ ಲಭ್ಯವಿಲ್ಲದೇ ದೂರದ ಊರುಗಳಿಂದ ಆಗಮಿಸಿದ್ದ ಪ್ರಯಾಣಿಕರು ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನಸ್ಪಂದನಕ್ಕೆ ತೆರಳುವ ಮುನ್ನ ದೇಗುಲಕ್ಕೆ ಸಿಎಂ: ಬೆಂಗಳೂರು: ದೊಡ್ಡಬಳ್ಳಾಪುರದ ಹೊರವಲಯದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಸಮಾವೇಶಕ್ಕೆ ಹೊರಡುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಅರಮನೆ ರಸ್ತೆಯ ಬಾಲಬ್ರೂಯಿಯಲ್ಲಿ ಇರುವ ಮಾರುತಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಹಿಂದೆ ನಾನಾ ಕಾರಣಗಳಿಂದ ಸಮಾವೇಶ ಎರಡು ಬಾರಿ ಮುಂದೂಡಿಕೆಯಾಗಿತ್ತು. ಈ ಬಾರಿ ಯಾವುದೇ ವಿಘ್ನಗಳು ಎದುರಾಗದಿರಲೆಂದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಾಖಲೆ ಪ್ರಮಾಣದಲ್ಲಿ ಗೆಲುವು ಸಾಧಿಸಲಿದೆ. ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಲಿದೆ. ಜನರ ನಾಡಿಮಿಡಿತ ಅರಿತೇ ನಾನು ಈ ಮಾತು ಹೇಳುತ್ತಿದ್ದೇನೆ ಎಂದರು.

ಬಿಎಂಟಿಸಿ ಸಂಪೂರ್ಣ ಎಲೆಕ್ಟ್ರಿಕ್ ಮಯ, 921 ಟಾಟಾ ಎಲೆಕ್ಟ್ರಿಕ್ ಬಸ್‌ಗೆ ರಾಜ್ಯ ಸರ್ಕಾರ ಆರ್ಡರ್!

ಕಾರ್ಯಕ್ರಮಕ್ಕೆ ಸಂಸದ ಬಚ್ಚೇಗೌಡ ಗೈರು
ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ  ಬಿ.ಎನ್‌.ಬಚ್ಚೇಗೌಡ ದೂರವುಳಿದಿದ್ದು, ಚರ್ಚೆಗೆ ಗ್ರಾಸವಾಯಿತು.

BMTC: ಅಂತಿಮ ವರ್ಷದ ವಿದ್ಯಾರ್ಥಿಗಳ ಪಾಸ್‌ ವಿಸ್ತರಿಸಿದ ಬಿಎಂಟಿಸಿ

ಸಮಾವೇಶದಲ್ಲಿ ಮುಖ್ಯಮಂತ್ರಿ ಸೇರಿ ಪಕ್ಷದ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು ಸೇರಿ ಬಿಜೆಪಿ ಘಟಾನುಘಟಿ ನಾಯಕರು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. ಅದರಲ್ಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ದೊಡ್ಡಬಳ್ಳಾಪುರದಲ್ಲೇ ಇಷ್ಟುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರೂ ಸಂಸದ ಬಚ್ಚೇಗೌಡ ದೂರವುಳಿದಿದ್ದು, ಕುತೂಹಲ ಮೂಡಿಸಿತು. ತಮ್ಮ ರಾಜಕೀಯ ವೈರಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಸಮಾವೇಶದ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಹಿನ್ನೆಲೆಯಲ್ಲಿ ಅವರು ಸಮಾವೇಶದಿಂದ ದೂರವುಳಿದಿದ್ದರು ಎನ್ನಲಾಗಿದೆ.

click me!