
ಬೆಂಗಳೂರು (ಸೆ.11): ಅರಕೆರೆ ವಾರ್ಡ್‌ನ ಕೆಲವು ಪ್ರದೇಶ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೇರಿವೆ. ಇವುಗಳನ್ನು ಮತ್ತೆ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಬೇಕು ಎಂದು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಮಾಡಿದ್ದ ಆರೋಪಕ್ಕೆ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ತಿರುಗೇಟು ನೀಡಿದ್ದಾರೆ. ಬೇಗೂರು ಪಂಚಾಯಿತಿ ಪ್ರಾರಂಭವಾದ 3-4 ದಶಕಗಳಿಂದಲೂ ಶಿರಡಿ ಸಾಯಿ ನಗರ, ಹಿರಾ ನಂದಿನಿ ಅಪಾರ್ಚ್‌ಮೆಂಟ್, ಅಕ್ಷಯ್ ಗಾರ್ಡನ್ ಪ್ರದೇಶಗಳು ಬೇಗೂರಿನ ಕಂದಾಯ ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಾಗಿದೆ ಎಂದು ಎಂ.ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರು ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಗಳು ವಿಂಗಡಣೆಯಾಗಿ, ಮರು ರೂಪಗೊಂಡು 14 ವರ್ಷಗಳು ಸಂದಿವೆ. ಅಂದಿನಿಂದ 3 ವಿಧಾನ ಸಭಾ ಚುನಾವಣೆಗಳು, 3 ಸಂಸತ್ ಚುನಾವಣೆಗಳು ಹಾಗೂ ಎರಡು ಬಾರಿ ಪಾಲಿಕೆ ಚುನಾವಣೆಗಳು ನಡೆದು ನನ್ನ ಮತಕ್ಷೇತ್ರದ ಮತದಾರರು ಗೊಂದಲವಿಲ್ಲದೆ ಎಂಟೂ ಚುನಾವಣೆಗಳಲ್ಲಿ ನಮಗೇ ಮತ ಚಲಾಯಿಸಿದ್ದಾರೆ. ಆ ಭಾಗದ ಶಾಸಕನಾಗಿ ನನ್ನ ಅನುದಾನದ ಜೊತೆಗೆ ಇತರ ವಿಶೇಷ ಅನುದಾನಗಳನ್ನು ತಂದು ಈ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಬಿಬಿಎಂಪಿಯ ಅರಕೆರೆ ವಾರ್ಡ್‌ಗೂ ಈ ಬಡಾವಣೆಗಳಿಗೂ ಸಂಬಂಧವಿಲ್ಲ ಎಂಬುದು ಇದರಿಂದ ರುಜುವಾತಾಗಿದೆ ಎಂದಿದ್ದಾರೆ.
ಸತೀಶ್‌ರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ: ನನ್ನ ಕ್ಷೇತ್ರದ ಮತದಾರರು ಪ್ರಬುದ್ಧರಾಗಿದ್ದು, ಅವರ ಕನಸು ಮನಸಿನಲ್ಲಿಯೂ ಇಂತಹಾ ಆಲೋಚನೆ ಸುಳಿಯುವುದಿಲ್ಲ. ಎಲ್ಲೋ ಮಾಹಿತಿಯ ಕೊರತೆಯಿಂದಾಗಿ ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ ಬಾಲಿಷ ಹೇಳಿಕೆ ನೀಡಿ ಮತದಾರರಲ್ಲಿ ಗೊಂದಲ ಸೃಷ್ಟಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.
ಅರಕೆರೆ ವಾರ್ಡ್‌ಗೂ ಮೇಲ್ಕಂಡ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬೇಗೂರು ಪಂಚಾಯಿತಿಯ ನನ್ನ ಮತ ಕ್ಷೇತ್ರದ ಬಡಾವಣೆಗಳಿಗೂ ಏನು ಸಂಬಂಧ ಎಂದು ಅರ್ಥವಾಗಲಿಲ್ಲ. ಒಂದು ಮತ ಕ್ಷೇತ್ರ ವಿಂಗಡಣೆಯಾಗಿ, ಎಲ್ಲೆ ನಿಗದಿಯಾದ ಮೇಲೆ ಯಾರೇ ಎಷ್ಟೇ ಪ್ರಯತ್ನ ಪಟ್ಟರೂ ನೀರಿನಲ್ಲಿ ಹೋಮ ಮಾಡಿದಂತೆ. ಶಾಸಕನಾಗಿ ನನಗೆ ಸಂವಿಧಾನ ಹಾಗೂ ಕಾನೂನಿನ ಮೇಲೆ ಅಪಾರ ಗೌರವವಿದೆ. ವ್ಯವಸ್ಥೆಯನ್ನೂ ಗೌರಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿ ಜನಪ್ರತಿನಿಧಿಗಳಿಗಿರಬೇಕು ಎಂದು ಹೇಳಿದ್ದಾರೆ.