ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ?

By Kannadaprabha NewsFirst Published Jun 8, 2023, 4:43 AM IST
Highlights

ಮೆಟ್ರೋ ಶುಲ್ಕ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ನಮ್ಮ ಕೈಯಲ್ಲಿಲ್ಲ. ಅದರ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಪ್ರಸ್ತಾವನೆ ಸಲ್ಲಿಸಬಹುದಷ್ಟೇ. ಕೇಂದ್ರ ಸಾರಿಗೆಯೂ ಇದರ ಸಾಧಕ ಬಾಧಕಗಳನ್ನು ಯೋಚಿಸುತ್ತದೆ: ಅಂಜುಂ ಪರ್ವೇಜ್‌ 

ಬೆಂಗಳೂರು(ಜೂ.08):  ವಿದ್ಯುತ್‌ ದರ ಪರಿಷ್ಕರಣೆ, ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದರೂ ಸದ್ಯ ನಮ್ಮ ಮೆಟ್ರೋ ಪ್ರಯಾಣ ಶುಲ್ಕ ಹೆಚ್ಚಳ ಸಾಧ್ಯತೆ ಇಲ್ಲ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟಪಡಿಸಿದೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ಮೆಟ್ರೋ ಶುಲ್ಕ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ನಮ್ಮ ಕೈಯಲ್ಲಿಲ್ಲ. ಅದರ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಪ್ರಸ್ತಾವನೆ ಸಲ್ಲಿಸಬಹುದಷ್ಟೇ. ಕೇಂದ್ರ ಸಾರಿಗೆಯೂ ಇದರ ಸಾಧಕ ಬಾಧಕಗಳನ್ನು ಯೋಚಿಸುತ್ತದೆ. ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ಅಲ್ಲಿಯೂ ಸಮಿತಿ ರಚನೆಯಾಗಲಿದೆ. ಅವರ ವರದಿಯನ್ನು ಆಧರಿಸಿ ದರ ಪರಿಷ್ಕರಣ ಆಗಲಿದೆ. ನಾವು ಕೂಡ ದರ ಹೆಚ್ಚಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಸಲ್ಲಿಸುತ್ತಿಲ್ಲ ಎಂದು ಹೇಳಿದರು.

ಎಲ್ಲೆಲ್ಲಿ 'ನಮ್ಮ ಮೆಟ್ರೋ' ವಿಸ್ತರಣೆ ಸಾಧ್ಯ ಸರ್ವೆ ನಡೆಸಿ ವರದಿ ನೀಡಿ: ಡಿಕೆಶಿ

ಒಂದು ಟರ್ಮಿನಲ್‌ನಿಂದ ಇನ್ನೊಂದು ಟರ್ಮಿನಲ್‌ಗೆ ಗರಿಷ್ಠ ನಾವು .60 ನಿಗದಿ ಪಡಿಸಿದ್ದೇವೆ. ಈ ಹಿಂದಿಗಿಂತ ವ್ಯಾಪ್ತಿಯೂ ವಿಸ್ತಾರವಾಗಿದೆ. ಟರ್ಮಿನಲ್‌ಗಳ ನಡುವಿನ ಈ ಗರಿಷ್ಠ ದರವನ್ನು ಕೇಂದ್ರ ಸರ್ಕಾರದ ಎದುರು ನಿಗದಿ ಮಾಡುವ ಕಾರ್ಯ ಬಾಕಿ ಇದೆ ಎಂದು ಅವರು ಹೇಳಿದರು.

ಜೂ.11ರ ಬಳಿಕ ಬಿಎಂಟಿಸಿ ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ತನ್ನ ಒಂದಿಷ್ಟುಮಹಿಳಾ ಪ್ರಯಾಣಿಕರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಮೆಟ್ರೋದ ಆದಾಯದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಸದ್ಯಕ್ಕೆ ದರ ಪರಿಷ್ಕರಣೆ ಇಲ್ಲ ಎಂದಿರುವ ಬಿಎಂಆರ್‌ಸಿಎಲ್‌, ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿರ್ಧಾರದ ಬಗ್ಗೆ ಕಾದು ನೋಡಬೇಕಿದೆ. ಕಳೆದ 12 ವರ್ಷಗಳಿಂದ ಮೆಟ್ರೋ ಸೇವೆ ನೀಡುತ್ತಿದ್ದು, ಮೊದಲ ಹಂತದಲ್ಲಿ ನೇರಳೆ, ಹಸಿರು ಮಾರ್ಗ ಸೇರಿ 42 ಕಿ.ಮೀ. ಇದ್ದರೆ, ಇದೀಗ ಈ ಮಾರ್ಗ 68 ಕಿ.ಮೀ.ಗೆ ಏರಿಕೆಯಾಗಿದೆ. ಆದರೆ, ಹಿಂದಿನ ದರವೇ ಈಗಲೂ ಮುಂದುವರಿದಿದೆ.

click me!