ಕೊಡಗು ಜಿಲ್ಲೆಯಲ್ಲಿ ರಕ್ತ ವಿದಳನ ಘಟಕ ಆರಂಭ

By Kannadaprabha News  |  First Published Nov 25, 2019, 11:03 AM IST

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧಕ ಆಸ್ಪತ್ರೆ(ಜಿಲ್ಲಾಸ್ಪತ್ರೆ)ಯ ರಕ್ತ ನಿಧಿ ಕೇಂದ್ರದಲ್ಲಿ ಆಗಸ್ಟ್‌ನಿಂದ ರಕ್ತ ವಿದಳನ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉಪಕಾರಿಯಾಗಿದೆ.


ಮಡಿಕೇರಿ(ನ.25): ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧಕ ಆಸ್ಪತ್ರೆ(ಜಿಲ್ಲಾಸ್ಪತ್ರೆ)ಯ ರಕ್ತ ನಿಧಿ ಕೇಂದ್ರದಲ್ಲಿ ಆಗಸ್ಟ್‌ನಿಂದ ರಕ್ತ ವಿದಳನ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉಪಕಾರಿಯಾಗಿದೆ. ಈ ಮೂಲಕ ವಿವಿಧ ಗುಂಪಿನ ರಕ್ತವನ್ನು ಪಡೆದುಕೊಳ್ಳಲು ರೋಗಿಗಳು ಹೊರ ಜಿಲ್ಲೆಗೆ ತೆರಳಬೇಕಾದ ಅಳೆದಾಟ ಸ್ವಲ್ಪಮಟ್ಟಿಗೆ ತಪ್ಪಿದಂತಾಗಿದೆ.

ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?

Tap to resize

Latest Videos

ಜಿಲ್ಲೆಯ ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ ಹಾಗೂ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಶೇಖರಣೆ ಘಟಕಗಳಿದ್ದು, ಇಲ್ಲಿ ರಕ್ತದ ಬೇಡಿಕೆ ಬಂದ ಸಂದರ್ಭ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಿಂದ ಕೊಂಡೊಯ್ಯಲಾಗುತ್ತದೆ. ಇದರಿಂದಾಗಿ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರವನ್ನು ಮದರ್‌ ಬ್ಯಾಂಕ್‌ ಎಂದು ಕರೆಯಲಾಗುತ್ತದೆ. ಈಗ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ವಿದಳನ ಘಟಕ ಆರಂಭವಾಗಿದ್ದು, ವಿವಿಧ ಬಗೆಯ ರಕ್ತದ ಗುಂಪುಗಳನ್ನು ಪ್ರತ್ಯೇಕಿಸಿ ರೋಗಿಗಳಿಗೆ ವಿತರಣೆ ಮಾಡಲಾಗುತ್ತಿದೆ. ರಕ್ತ ವಿದಳನ ಘಟಕದಿಂದ ಈಗ ತಿಂಗಳಿಗೆ 150ರಿಂದ 170 ಬಾಟಲ್‌ ರಕ್ತವನ್ನು ರೋಗಿಗಳಿಗೆ ವಿತರಿಸಲಾಗುತ್ತಿದೆ.

ಶಿಬಿರದಲ್ಲಿ ರಕ್ತ ಸಂಗ್ರಹ

ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಆಯೋಜಿಸುವ ಮೂಲಕ ರಕ್ತವನ್ನು ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಂಗ್ರಹ ಮಾಡಲಾಗುತ್ತದೆ. ಜಿಲ್ಲೆಯ ಹಲವು ಕಾಲೇಜುಗಳಲ್ಲಿ ರೆಡ್‌ರಿಬ್ಬನ್‌ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ರಕ್ತದಾನ ಶಿಬಿರ ಹಮ್ಮಿಕೊಂಡು ದಾನಿಗಳಿಂದ ರಕ್ತವನ್ನು ಶೇಖರಣೆ ಮಾಡಲಾಗುತ್ತದೆ.

ಅಪರೂಪದ ಗುಂಪು ರಕ್ತ ಕಷ್ಟ

ಅಪರೂಪದ ರಕ್ತದ ಗುಂಪುಗಳು ದೊರಕುವುದು ಕಷ್ಟ. ಕೆಲವೊಂದು ತುರ್ತು ಸಂದರ್ಭಗಳಲ್ಲಿ ಅಪರೂಪದ ರಕ್ತದ ಗುಂಪು ಇರುವವರಿಗೆ ರಕ್ತ ದೊರಕದೆ ಪರದಾಡುವ ದೃಶ್ಯಗಳು ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ಹೊರ ಜಿಲ್ಲೆಯ ರಕ್ತ ನಿಧಿ ಕೇಂದ್ರಗಳನ್ನು ಆಶ್ರಯಿಸುವ ಅನಿವಾರ್ಯತೆ ಎದುರಾಗುತ್ತದೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಅಪರೂಪದ ಮಾದರಿಯ ಗುಂಪಿನ ರಕ್ತವನ್ನು ಹೊಂದಿರುವ ವ್ಯಕ್ತಿಯ ಮಾಹಿತಿ ರಕ್ತ ನಿಧಿ ಕೇಂದ್ರದಲ್ಲಿ ಇರುತ್ತದೆ. ಈ ವೇಳೆ ಅವರನ್ನು ಸಂಪರ್ಕಿಸಿ ಸಂಬಂಧಿಸಿದ ರೋಗಿಗೆ ರಕ್ತವನ್ನು ನೀಡುವ ಕೆಲಸ ಮಾಡಲಾಗುತ್ತದೆ.

ಉಚಿತವಾಗಿ ರಕ್ತ ವಿತರಣೆ

ರಕ್ತ ವಿದಳನ ಘಟಕದಿಂದ ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಉಚಿತವಾಗಿ ರಕ್ತ ವಿತರಣೆ ಮಾಡಲಾಗುತ್ತದೆ. ಉಳಿದ ರೋಗಿಗಳಿಂದ ಸರ್ಕಾರದ ಆದೇಶದನ್ವಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ 350 ರು. ತೆಗೆದುಕೊಳ್ಳಲಾಗುತ್ತದೆ.

ಏನಿದು ರಕ್ತ ವಿದಳನ ಘಟಕ?

ರಕ್ತದಲ್ಲಿ ನಾಲ್ಕು ಘಟಕಗಳಿರುತ್ತವೆ(ಕಾಂಪೊನೆಂಟ್‌). ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮತ್ತು ಪ್ಲೇಟ್‌ಲೆಟ್‌. ದಾನಿಗಳಿಂದ ಸಂಗ್ರಹಿಸುವ ರಕ್ತದಲ್ಲಿರುವ ಈ ನಾಲ್ಕು ಅಂಶಗಳನ್ನು ಪ್ರತ್ಯೇಕಿಸುವ ಘಟಕವೇ ರಕ್ತ ವಿದಳನ ಘಟಕ. ರಕ್ತದ ಕಣಗಳನ್ನು ಬೇರ್ಪಡಿಸಿ ರೋಗಿಗಳಿಗೆ ಬೇಕಾದಂತಹ ಅಗತ್ಯ ಕಣಗಳನ್ನು ಒದಗಿಸುವ ಕಾರ್ಯವನ್ನು ರಕ್ತ ವಿದಳನ ಘಟಕ ಮಾಡುತ್ತದೆ. ಒಂದು ಯುನಿಟ್‌ ರಕ್ತದಿಂದ ನಾಲ್ಕು ರೋಗಿಗಳಿಗೆ ಅನುಕೂಲವಾಗುತ್ತದೆ. ಪ್ಲೇಟ್‌ಲೆಟ್‌ 5 ದಿನ ಉಳಿಯುತ್ತದೆ. ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣಗಳನ್ನು 35 ದಿನಗಳವರೆಗೆ ಹಾಗೂ ಪ್ಲಾಸ್ಮಾವನ್ನು ಒಂದು ವಷÜರ್‍ದವರೆಗೂ ಕೆಡದಂತೆ ಇಡಬಹುದಾಗಿದೆ.

ಬ್ರಶ್ ಮಾಡಿದ ವ್ಯಕ್ತಿ ಸಾವು: ಟೂತ್ ಪೇಸ್ಟ್ ಎಂದು ಈತ ಬ್ರಶ್‌ಗೆ ಹಾಕಿದ್ದೇನು..?

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧಕ ಆಸ್ಪತ್ರೆಯಲ್ಲಿ ರಕ್ತ ವಿದಳನ ಘಟಕವಿದ್ದು ಕೆಂಪು ರಕ್ತ, ಬಿಳಿರಕ್ತ, ಫ್ಲಾಸ್ಮಾ ಅಂಶಗಳನ್ನು ಪ್ರತ್ಯೇಕಿಸಲಾಗುತ್ತದೆ. ಬೇಡಿಕೆ ತಕ್ಕಂತೆ ರೋಗಿಗಳಿಗೆ ನೀಡಲಾಗುತ್ತಿದೆ. ಅಗತ್ಯ ಬಂದ ಸಂದರ್ಭ ರೋಗಿಗಳು ಪಡೆದುಕೊಳ್ಳಬಹುದು. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡಬೇಕು. ಇದರಿಂದ ಹಲವಷ್ಟುಜೀವವನ್ನು ಉಳಿಸಬಹುದಾಗಿದೆ ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಹೇಳಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!