Kodagu: ಮನೆ ಮಂಜೂರಾತಿಗೆ ತಡೆ: ಪಂಚಾಯಿತಿ ಅಧಿಕಾರಿಯನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

By Sathish Kumar KHFirst Published Jan 25, 2023, 6:32 PM IST
Highlights

ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆ ತಡೆ ಹಿಡಿದಿದ್ದ ಪಿಡಿಒ
ಗ್ರಾಮಸ್ಥರು ಸುಳ್ಳು ದಾಖಲೆಗಳನ್ನು ನೀಡಿದ್ದಾರೆ ಎಂದು ಪಿಡಿಓ ಆರೋಪ 
ಪೊಲೀಸರ ಮುಂದೆಯೇ ಪಂಚಾಯಿತಿ ಅಧಿಕಾರಿಗೆ ಥಳಿಸಿದ ಸಹೋದರರು

ವರದಿ ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.25): ಕರ್ತವ್ಯನಿರತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮೇಲೆ ಹಲ್ಲೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಒಂದರಲ್ಲಿ ಮಂಗಳವಾರ ಸಂಜೆ ನಡೆದಿದೆ. 

ಅನಿಲ್ ಕುಮಾರ್ ಹಲ್ಲೆಗೊಳಗಾದ ಪಿಡಿಒ ಆಗಿದ್ದಾರೆ. ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲು ನೀಡಿಲ್ಲ ಎನ್ನುವ ಕಾರಣದಿಂದ ನೆಲ್ಯಹುದಿಕೇರಿಯ ಶಿವಕುಮಾರ್ ಮತ್ತು ಆತನ ಸಹೋದರರಿಬ್ಬರು ಪಿಡಿಓ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಮತ್ತು ಪದ್ಮನಾಭ ಎಂಬ ಸಹೋದರರಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿತ್ತು. ಆದರೆ ಅವರ ಆದಾಯ ದೃಢೀಕರಣ ಪತ್ರದಲ್ಲಿ ಆದಾಯ ಮಿತಿಗಿಂತಲೂ ಹೆಚ್ಚಿನ ಆದಾಯ ನಮೂದಾಗಿರುವುದು ಗೊತ್ತಾಗಿತ್ತು. ಹೀಗಾಗಿ ಪಿಡಿಓ ಅನಿಲ್ಕುಮಾರ್ ಅವರು ಅವರ ಬಸವ ವಸತಿ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯನ್ನು ತಡೆಹಿಡಿದಿದ್ದರು ಎನ್ನಲಾಗಿದೆ. 

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಮಳೆ

ಬೇರೊಂದು ಮನೆ ಜಿಪಿಎಸ್‌ ಮಾಡಲು ಹೋದಾಗ ಹಲ್ಲೆ: ಮಂಗಳವಾರ ಸಂಜೆ ಬಸವ ವಸತಿ ಯೋಜನೆಯ ಮತ್ತೊಂದು ಮನೆಯನ್ನು ಪಿಡಿಓ ಅನಿಲ್ ಕುಮಾರ್ ಅವರು ಜಿಪಿಎಸ್ ಮಾಡಲು ಹೋಗಿ ವಾಪಸ್ ಆಗುವ ವೇಳೆ ಶಿವಕುಮಾರ್ ಅವರ ಮನೆ ಇರುವ ರಸ್ತೆ ಮಾರ್ಗದಲ್ಲಿ ಪಿಡಿಓ ವಾಪಸ್ಸ್ ಪಂಚಾಯಿತಿಗೆ ಆಗಮಿಸುತ್ತಿದ್ದರು. ಈ ವೇಳೆ ಪಿಡಿಓ ಅವರನ್ನು ತಡೆದ ಇಬ್ಬರು ಅಣ್ಣ ತಮ್ಮಂದಿರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಪಿಡಿಒ ಅವರ ಬೈಕ್ ಅನ್ನು ಕಿತ್ತುಕೊಂಡಿದ್ದರು. ನಂತರ ಪೊಲೀಸರಿಗೆ ದೂರು ನೀಡಿದ್ದ ಅನಿಲ್ ಕುಮಾರ್ ಅವರು ಪೊಲೀಸರೊಂದಿಗೆ ಸ್ಥಳಕ್ಕೆ ಹೋದಾಗಲೂ ಯಥಾಸ್ಥಿತಿಯಲ್ಲೇ ಪಿಡಿಓ ಅವರನ್ನು ನಿಂದಿಸುತ್ತಿದ್ದರು.

ಪೊಲೀಸರೆದುರೇ ಅಧಿಕಾರಿಗೆ ಹಲ್ಲೆ: ಹೀಗಾಗಿ ಪಿಡಿಓ ಅವರು ಅದೆಲ್ಲವನ್ನೂ ತಮ್ಮ ಮೊಬೈಲ್‍ನಲ್ಲಿಯೇ ಚಿತ್ರೀಕರಿಸಿಕೊಳ್ಳುತ್ತಿದ್ದರು. ವಿಡಿಯೋ ಮಾಡಬೇಡ ಎಂದು ಇಬ್ಬರು ಪಿಡಿಓ ವಿರುದ್ಧ ಗಲಾಟೆ ಮಾಡಿದ್ದಾರೆ. ಆದರೂ ವಿಡಿಯೋ ಮಾಡುತ್ತಿದ್ದರಿಂದ ಶಿವಕುಮಾರ್ ಮತ್ತು ಪದ್ಮನಾಭ ಇಬ್ಬರು ಪೊಲೀಸರ ಎದುರೇ ಪಿಡಿಓ ಮೇಲೆ ಹಲ್ಲೆ ಮಾಡಿದ್ದಾರೆ. ಪಿಡಿಓ ಓಡಿದರೂ ಬಿಡದೆ ಹಿಂದಿನಿಂದ ಅಟ್ಟಾಡಿಸಿಕೊಂಡು ಬಂದ ಇಬ್ಬರು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಪಿಡಿಒಗೆ ಗಾಯಗಳಾಗಿದ್ದು, ಸಿದ್ದಾಪುರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸುಳ್ಳು ದಾಖಲೆ ನೀಡಿ ಮನೆ ಪಡೆದಿದ್ದರು: ಈ ಕುರಿತು ಪ್ರತಿಕ್ರಿಯಿಸಿರುವ ಪಿಡಿಓ ಅನಿಲ್‌ ಕುಮಾರ್ ಅವರು ಬಸವ ವಸತಿ ಯೋಜನೆ ಅಡಿಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಮನೆ ಮಂಜೂರು ಮಾಡಿಸಿಕೊಂಡಿದ್ದರು. ದಾಖಲೆಗಳನ್ನು ಪರಿಶೀಲಿಸುವಾಗ ಅವರ ನೀಡಿರುವ ದಾಖಲೆಗಳಿಗೂ, ಮೂಲ ದಾಖಲೆಗಳಿಗೆ ವ್ಯತ್ಯಾಸ ಇರುವುದು ಕಂಡು ಬಂತು. ಹೀಗಾಗಿ ಅದನ್ನು ಪತ್ತೆ ಹಚ್ಚಿ ಮನೆ ಕೊಡುವುದನ್ನು ತಡೆ ಹಿಡಿದಿರುವುದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ, ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Assembly election; ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಯಾಕೆ ಯಾವ ಯಾತ್ರೆ ಮಾಡಲಿಲ್ಲ? ಸಂಸದ ಪ್ರಜ್ವಲ್ ರೇವಣ್ಣ

ಹಲ್ಲೆ ಘಟನೆ ಬಗ್ಗೆ ಪರಿಶೀಲನೆ ನಂತರ ಕ್ರಮ: ಇನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಮಾತನಾಡಿ ಪಿಡಿಓ ಅವರಿಗೆ ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಆದರೆ, ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎನ್ನುವುದನ್ನು ಪರಿಶೀಲನೆ ಮಾಡುತ್ತೇನೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವುದು ಸರಿಯಲ್ಲ. ಯಾರದೇ ತಪ್ಪಾಗಿದ್ದರೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಓ ಮತ್ತು ತಾಲ್ಲೂಕು ಪಂಚಾಯಿತಿ ಇಓ ಇಬ್ಬರಿಗೂ ಅನಿಲ್‍ಕುಮಾರ್ ಮತ್ತು ಪಿಡಿಓಗಳ ಸಂಘವು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

click me!