ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ: ಸಂವಿಧಾನ ಜಾರಿಗೊಂಡು 74 ವರ್ಷವಾದರೂ ಅಸ್ಪೃಶ್ಯತೆ ಜೀವಂತ

By Sathish Kumar KH  |  First Published Jan 25, 2023, 3:54 PM IST

ದಲಿತರಿಗೆ ದೇವಸ್ಥಾನಲ್ಲಿ ಕಾರ್ಯಕ್ರಮ ಮಾಡಲು ನಿರಾಕರಣೆ
ಜಿಲ್ಲಾಡಳಿತದ ಅಧಿಕಾರಿಗಳು ಮಾಡಿದ್ದ ಶಾಂತಿ ಸಭೆ ವಿಫಲ
ದೇವಸ್ಥಾನಕ್ಕೆ ಬೀಗವನ್ನು ಹಾಕಿ ದೇಗುಲ ಪ್ರವೇಶಿಸದಂತೆ ಕ್ರಮ


ಗದಗ (ಜ.25): ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದ ದ್ಯಾಮವ್ವ ದೇವಿ ಗುಡಿ ಪ್ರವೇಶಕ್ಕೆ ದಲಿತ ಕುಟುಂಬಕ್ಕೆ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಜ.26ರಂದು ಮಾದಿಗ ಸಮುದಾಯದ ಮದುವೆ ಇದ್ದು, ಇದರ ನಿಮಿತ್ತ ಮಂಗಳವಾರ ಊರಿನಲ್ಲಿರುವ ದ್ಯಾಮಮ್ಮ ಗುಡಿಗೆ ಹಾಲುಗಂಬ, ಹಸಿರುಗಂಬ ಪೂಜೆಗೆ ದಲಿತ ಕುಟುಂಬ ಹೋಗಿತ್ತು. ಆದರೆ, ಈ ಸಂದರ್ಭದಲ್ಲಿ ಊರಿನ ಇತರೆ ಸಮುದಾಯಗಳ ಮುಖಂಡರು ಗುಡಿಗೆ ಬೀಗ ಹಾಕುವ ಮೂಲಕ ದೇವಸ್ಥಾನ ಪ್ರವೇಶ ನಿಷೇಧಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. 

ಜ.21ರಂದು ಶ್ಯಾಗೋಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ  ಗ್ರಾಮದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಕ್ರಮವಹಿಸುವಂತೆ ಊರಿನ ಹಿರಿಯರು, ಯುವಕರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅದಾದ ನಂತರ, ಗ್ರಾಮಕ್ಕೆ ಗದಗ ಪೊಲೀಸರು ಭೇಟಿ ನೀಡಿ ಊರಿನವರ ಸಮ್ಮುಖದಲ್ಲೇ ಮಾದಿಗ ಸಮುದಾಯದ ಜನರನ್ನು ಊರಿನ ದೇವಸ್ಥಾನಗಳಿಗೆ ಪ್ರವೇಶಾವಕಾಶ ಕಲ್ಪಿಸಿದ್ದರು. ಆಗ ಸುಮ್ಮನಿದ್ದ ಗ್ರಾಮಸ್ಥರು ಈಗ ಬೇಕಂತಲೇ ಗುಡಿಗೆ ಬೀಗ ಹಾಕಿಸಿ, ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

Latest Videos

undefined

ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ

ದಿನಸಿ ಅಂಗಡಿಗಳೂ ಬಂದ್‌: ಮದುವೆ ಸಂಬಂಧ ದಿನಸಿ ಖರೀದಿಗೆ ಹೋದರೆ ಆ ಅಂಗಡಿಗಳಿಗೂ ಬೀಗ ಹಾಕಿಸಿದ್ದಾರೆ. ಚಹಾದಂಗಡಿ, ಕ್ಷೌರದಂಗಡಿ ಎಲ್ಲಡೆಯೂ ನಮ್ಮನ್ನು ಅಸ್ಪೃಶ್ಯರನ್ನಾಗಿ ನೋಡಲಾಗುತ್ತಿದೆ. ನಮಗೆ ಏನಾದರೂ ಕೊಟ್ಟರೆ ದಂಡ ವಿಧಿಸುವುದಾಗಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮಾದಾರ್‌ ಕುಟುಂಬ ಸದಸಯರು ಆರೋಪ ಮಾಡಿದರು. ಮದುವೆ ಸಂಬಂಧ ನಮ್ಮ ಪದ್ಧತಿ ಪ್ರಕಾರ ಅನೇಕ ಶಾಸ್ತ್ರಗಳನ್ನು ಮಾಡಬೇಕಾಗುತ್ತದೆ. ಇವತ್ತು ಹಾಲುಗಂಬ ಪೂಜೆ ಇತ್ತು. ಆದರೆ, ದ್ಯಾಮಮ್ಮನ ಗುಡಿಗೆ ಬೀಗ ಹಾಕಿದ್ದಾರೆ. ಬುಧವಾರ ಹನುಮಪ್ಪನಿಗೆ ಎಲೆಪೂಜೆ ಮಾಡಬೇಕಿದೆ. ನಾಳೆ ಆ ದೇವಸ್ಥಾನಕ್ಕೂ ಬೀಗ ಹಾಕಿಸಬಹುದು ಎಂದು ದಲಿತ ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಸಮೇತ ಗ್ರಾಮದಲ್ಲಿ ಬೀಡುಬಿಟ್ಟ ಅಧಿಕಾರಿಗಳು: ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಲ್ಲೇ ಬೀಡುಬಿಟ್ಟ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಲ್ಲಿ‌ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಶ್ಯಾಗೋಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಸಂದರ್ಭದಲ್ಲಿ ಈ ವಿಚಾರ ತಿಳಿದುಬಂದಿದ್ದು, ಆ ದಿನವೇ ಎಲ್ಲರೊಂದಿಗೂ ಸಭೆ ನಡೆಸಿ, ತಿಳಿವಳಿಕೆ ಮೂಡಿಸಲಾಗಿದೆ..  ಮಂಗಳವಾರ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮುಂದೆಯೂ ನಡೆಯದಂತೆ ಕ್ರಮವಹಿಸಲಾಗುವುದು. ಇಂದು ಮತ್ತೇ ಶಾಂತಿ ಸಭೆ ನಡೆಸುತ್ತೇವೆ ಅಂತಾ ಗದಗ ತಹಶೀಲ್ದಾರ್‌ ಕಿಶನ್ ಕಲಾಲ್ ಹೇಳಿದರು.

ಪ್ಲಾಸ್ಟಿಕ್‌ ಅಕ್ಕಿ ಎಂದು ಸಾರವರ್ಧಿತ ಅಕ್ಕಿ ಪಡೆಯಲು ಗ್ರಾಮಸ್ಥರು ಹಿಂದೇಟು

ಗ್ರಾಮದಲ್ಲಿ ಮಾದಿಗ ಸಮುದಾಯದ 14 ಮನೆಗಳು ಮಾತ್ರ ಇವೆ. ಊರಿನಲ್ಲಿರುವ ಎಲ್ಲರಂತೆ ನಮ್ಮ 70 ಮಂದಿಗೂ ಸಮಾನವಾಗಿ ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ ಅಂತಾ ದಲಿತ ಯುವಕರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ದಲಿತ ಮುಖಂಡರ ಆಗ್ರಹವಾಗಿದೆ.

click me!