ಶಿಶುವಿನೊಂದಿಗೆ ಬಾಣಂತಿಯನ್ನು ಊರ ಹೊರಗಿಟ್ಟ ಗ್ರಾಮ

Kannadaprabha News   | Asianet News
Published : Apr 06, 2021, 08:02 AM IST
ಶಿಶುವಿನೊಂದಿಗೆ ಬಾಣಂತಿಯನ್ನು ಊರ ಹೊರಗಿಟ್ಟ ಗ್ರಾಮ

ಸಾರಾಂಶ

 ಹಸಿ ಬಾಣಂತಿಯರನ್ನು ಗ್ರಾಮದಿಂದ ಹೊರಹಾಕಿ ಗುಡಿಸಲಿನಲ್ಲಿ ಇರಿಸಿದ್ದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಪುಟ್ಟ ಶಿಶುವಿನ ಜೊತೆ ಬಾಣಂತಿಯನ್ನು ಊರ ಹೊರಗಿಡಲಾಗಿದೆ. 

 ಮದ್ದೂರು (ಏ.06):  ಕುಟುಂಬದವರ ಮೌಢ್ಯಕ್ಕೆ ಒಳಗಾಗಿದ್ದ ಹಸಿ ಬಾಣಂತಿಯರನ್ನು ಗ್ರಾಮದಿಂದ ಹೊರಹಾಕಿ ಗುಡಿಸಲಿನಲ್ಲಿ ಇರಿಸಿದ್ದ ಅಮಾನವೀಯ ಘಟನೆ ತಾಲೂಕಿನ ಆತಗೂರು ಹೋಬಳಿ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬಾಣಂತಿಯರ ಕುಟುಂಬದವರು, ಗ್ರಾಮಸ್ಥರು ನಡೆಸಿದ ಹೀನ ಕೃತ್ಯದ ವಿಷಯ ತಿಳಿದು ಹೆಚ್ಚೆತ್ತ ತಾಲೂಕಿನ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಊರ ಹೊರಗಿನ ಗುಡಿಸಲಿನಲ್ಲಿ ವಾಸವಾಗಿದ್ದ ಇಬ್ಬರು ಬಾಣಂತಿಯರು ಹಾಗೂ ಶಿಶುಗಳನ್ನು ಮನೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದಲ್ಲಿ ಹೆರಿಗೆಯಾದ ಬಾಣಂತಿಯರು, ಋುತುಮತಿ ಯುವತಿಯರನ್ನು ಕಟ್ಟುಪಾಡುಗಳಿಗೆ ಒಳಪಡಿಸಿ ಹಲವು ತಿಂಗಳ ಕಾಲ ಗ್ರಾಮದ ಹೊರಗಿನ ಗುಡಿಸಲಿನಲ್ಲಿ ಇಟ್ಟು ಮೌಢ್ಯಾಚರಣೆ ನಡೆಸುವುದು ಹಲವು ವರ್ಷಗಳಿಂದ ಗ್ರಾಮಸ್ಥರ ಸಂಪ್ರದಾಯವಾಗಿದೆ.

ಇಂದಿಗೂ ನಡೆಯುವ ಮೇಲುಕೋಟೆ ಚೆಲುವನಾರಾಯಣ ಪವಾಡ ಇದು! ..

ಈ ಹಿಂದೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿ ಮೌಢ್ಯಾಚರಣೆ ನಡೆಸದಂತೆ ತಾಕೀತು ಮಾಡಿದ್ದರು. ಆದರೆ, ಗ್ರಾಮಸ್ಥರು ಮೌಢ್ಯಾಚರಣೆ ಮುಂದುವರೆಸಿದ್ದರು. ಗೊಲ್ಲರದೊಡ್ಡಿಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಹೆರಿಗೆಯಾದ ಕೃಷ್ಣಮೂರ್ತಿಯವರ ಪತ್ನಿ ಜ್ಯೋತಿ, ಮರಿಸ್ವಾಮಿ ಪತ್ನಿ ಪವಿತ್ರ ಎಂಬುವವರನ್ನು ಶಿಶುಗಳನ್ನು ಹಾರೈಕೆ ಮಾಡಿ ಊರ ಹೊರವಲಯದಲ್ಲಿ ಗುಡಿಸಲಿನಲ್ಲಿ ಇಟ್ಟಿದ್ದರು.

ಈ ವಿಷಯ ತಿಳಿದ ಕದರಮಂಗಲದ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಣ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದರು. ನಂತರ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿತ್ತು. ತನಿಖೆ ನಡೆಸಿ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿತ್ತು. ಡೀಸಿ ಸೂಚನೆ ಮೇರೆಗೆ ತಹಸೀಲ್ದಾರ್‌ ಎಚ್‌.ವಿ.ವಿಜಯಕುಮಾರ್‌, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ಸಿಡಿಪಿಒ ಚೇತನ್‌ ಕುಮಾರ್‌, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್‌ ಅವರು ಕೆಸ್ತೂರು ಪಿಎಸ್‌ಐ ದಯಾನಂದ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮೌಢ್ಯಾಚರಣೆಗೆ ಒಳಗಾಗಿದ್ದ ಬಾಣಂತಿಯರು, ಶಿಶುಗಳನ್ನು ಗಂಡನ ಮನೆಗೆ ಕಳುಹಿಸಿ ಹೀನ ಕೃತ್ಯ ನಡೆಸಿರುವ ಬಗ್ಗೆ ತರಾಟೆ ತೆಗೆದುಕೊಂಡಿದ್ದಾರೆ.

ಬಳಿಕ ಅಧಿಕಾರಿಗಳ ತಂಡ ಗ್ರಾಮದಲ್ಲಿ ಮೌಢ್ಯಾಚರಣೆಗೆ ಬಳಸುತ್ತಿದ್ದ ಗುಡಿಸಲನ್ನು ಪೊಲೀಸರ ರಕ್ಷಣೆಯೊಂದಿಗೆ ನೆಲಸಮಗೊಳಿಸಿದ್ದಾರೆ. ಮುಂದೆ ಇಂತಹ ಹೀನಕೃತ್ಯ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?