ತಂಗಿಯ ಕೊಂದು ಸ್ವಂತ ಸಹೋದರನೇ ಆತ್ಮಹತ್ಯೆಯ ನಾಟಕವಾಡಿದ್ದಾನೆ. ತಂಗಿಯ ಪ್ರೀತಿಯ ವಿಚಾರಕ್ಕಾಗಿ ಈ ಕೊಲೆ ನಡೆದಿದೆ. ಕೊನೆಗೂ ಅಣ್ಣನ ಪ್ಲಾನ್ ಬಯಲಾಗಿದೆ.
ಬೆಂಗಳೂರು (ಏ.06): ಅಣ್ಣನೇ ತನ್ನ ತಂಗಿಯನ್ನು ಹತ್ಯೆ ಮಾಡಿ ರೈಲ್ವೆ ಹಳಿ ಮೇಲೆ ಎಸೆದಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹೆಣ್ಣೂರಿನ ಟಿಎನ್‌ಟಿ ಲೇಔಟ್ ನಿವಾಸಿ ಮಂಗಳಾ ರವಿ (19) ಕೊಲೆಯಾದ ಯುವತಿ. ಈ ಸಂಬಂಧ ಸಹೋದರ ಕಿರಣ್ (25) ಎಂಬಾತನನ್ನು ಬಂಧಿಸಲಾಗಿದೆ. ಹತ್ಯೆ ಮಾಡಿದ ಬಳಿಕ ಆರೋಪಿ ಮೃತ ದೇಹವನ್ನು ರೈಲ್ವೆ ಹಳಿ ಮೇಲೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಎಂದು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮಂಗಳಾ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ತಾಯಿ ಹಾಗೂ ಸಹೋದರನ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕಿರಣ್ ಆಟೋ ಚಾಲಕನಾಗಿದ್ದ. ಮಂಗಳಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ಕಿರಣ್ ಎಚ್ಚರಿಕೆ ನೀಡಿದ್ದ. ಭಾನುವಾರ ಮಂಗಳಾ ಮನೆಗೆ ತಡವಾಗಿ ಬಂದಿದ್ದಳು. ಪ್ರಿಯಕರನ ಜತೆ ಇದ್ದಿದ್ದ ಬಗ್ಗೆ ಕಿರಣ್ ಸಹೋದರಿಯನ್ನು ಪ್ರಶ್ನೆ ಮಾಡಿದ್ದ.
ತನ್ನ ಮನೆಗೆ ಬಂದ ಪ್ರೇಯಸಿ ಉಸಿರುಗಟ್ಟಿಸಿ ಕೊಂದ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ! ...
ಈ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಕೋಪಗೊಂಡ ಕಿರಣ್ ಮನೆಯಲ್ಲಿದ್ದ ಚಾಕುವಿನಿಂದ ಸಹೋದರಿಗೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಬೈಯಪ್ಪನಹಳ್ಳಿ ರೈಲ್ವೆ ಹಳಿ ಮೇಲೆ ಎಸೆದಿದ್ದ. ಸೋಮವಾರ ಬೆಳಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಮೃತ ದೇಹ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೊದಲಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಿದ್ದರು.
ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಯುವತಿ ರೈಲ್ವೆ ಹಳಿಗೆ ಸಮೀಪ ನಡೆದುಕೊಂಡು ಹೋಗಿರುವ ಯಾವುದೇ ದೃಶ್ಯಾವಳಿಗಳು ಪತ್ತೆಯಾಗಿಲ್ಲ. ಬಳಿಕ ಆಟೋ ಹೋಗಿರುವುದು ಗೊತ್ತಾಗಿದೆ. ಕಿರಣ್‌ನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಕೊಲೆ ಪ್ರಕರಣದಲ್ಲಿ ತಾಯಿ ಹಾಗೂ ಇನ್ನಿತರರ ಪಾತ್ರ ಇದೆಯೇ ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.