
ಶಿವಮೊಗ್ಗ(ನ.22): ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲೂ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿನಿಂದ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲೂ ಪ್ರವಾಸ ನಡೆಸಲಿದ್ದಾರೆ. ನಾನೂ ಕೂಡ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದೆಲ್ಲೆಡೆ ಪಕ್ಷದ ಸಂಘಟನೆ ಶಕ್ತಿಯಾಲಿಯಾಗಿದೆ. ಬೂತ್ ಮಟ್ಟದ ಸಮಿತಿ ಎಲ್ಲೆಡೆ ಇರುವುದರಿಂದ ಚುನಾವಣೆಯಲ್ಲಿ ಕೆಲಸ ಮಾಡಲು ಯಾವುದೇ ತೊಂದರೆ ಆಗುವುದಿಲ್ಲ. ಕಾರ್ಯಕರ್ತರು ಸನ್ನದ್ಧರಾಗಿರುತ್ತಾರೆ. ಜತೆಗೆ ಪಕ್ಷದ ಸಂಘಟನೆ ಹಾಗೂ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಹೀಗಾಗಿ ನಮ್ಮ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ವ್ಯಾಜ್ಯ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕಗಳನ್ನು ನೀಡುತ್ತಾ ಹೋಗುವುದೇ ಕಾರಣ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಹೈಕೋರ್ಟ್ ಕಿಡಿಕಾರಿದ ಬಗ್ಗೆ ನನಗೆ ತಿಳಿದಿದೆ. ನ್ಯಾಯಾಲಯದ ಸೂಚನೆಗಳನ್ನು ಸರ್ಕಾರ ಪರಿಪಾಲನೆ ಮಾಡಲಿದೆ. ಈ ಬಗ್ಗೆ ಕಾನೂನು ಮಂತ್ರಿ ಮಾಧುಸ್ವಾಮಿ ಜೊತೆ ಚರ್ಚಿಸುತ್ತೇನೆಂದು ಹೇಳಿದರು.
ಕಾಂಗ್ರೆಸ್ ಒಡೆದ ಮನೆಯಾಗಿದ್ದರೆ, ಜೆಡಿಎಸ್ ಎಲ್ಲಿದೆ ಎಂದು ಹುಡುಕಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಉಪಚುನಾವಣೆ ಎದುರಾಗಿದ್ದು, ಚುನಾವಣೆ ನಂತರ ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ. ರಾಜ್ಯದಲ್ಲಿ ಇನ್ನುಳಿದ ಮೂರೂವರೆ ವರ್ಷದ ಅವಧಿಯನ್ನು ಬಿಜೆಪಿ ಸರಕಾರ ಪೂರ್ಣಗೊಳಿಸಲಿದೆ. ಯಾವುದೇ ಗೊಂದಲವಿಲ್ಲದೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಸಚಿವ ಈಶ್ವರಪ್ಪ ಭರವಸೆ ವ್ಯಕ್ತಪಡಿಸಿದರು
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.