Tumakuru : ಕಾಂಗ್ರೆಸ್‌ ನಿರ್ನಾಮ, ಕಮಲ ಅಧಿಕಾರಕ್ಕೆ ತರುವುದೇ ಗುರಿ : ಬಿಜೆಪಿ ಸೇರಿದ ಶಾಸಕ

By Kannadaprabha News  |  First Published Oct 18, 2022, 4:51 AM IST

ಕಾಂಗ್ರೆಸ್‌ ತೊರೆದು, ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡ ನಂತರ ಪ್ರಥಮ ಬಾರಿಗೆ ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.


 ತುರುವೇಕೆರೆ (ಅ.18):  ಹಿಂದೂ ವಿರೋಧಿಯಾಗಿರುವ ಕಾಂಗ್ರೆಸ್‌ನ್ನು ನಿರ್ನಾಮ ಮಾಡುವುದು ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವುದೇ ತಮ್ಮ ಧ್ಯೇಯವಾಗಿದೆ ಎಂದು ರಾಜ್ಯ ನೇಕಾರರ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಂ.ಡಿ.ಲಕ್ಷ್ಮೇನಾರಾಯಣ್‌ ಹೇಳಿದರು.

ಕಾಂಗ್ರೆಸ್‌ (Congress) ತೊರೆದು, ಭಾರತೀಯ ಜನತಾ ಪಕ್ಷ (BJP) ಸೇರ್ಪಡೆಗೊಂಡ ನಂತರ ಪ್ರಥಮ ಬಾರಿಗೆ ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Tap to resize

Latest Videos

ಕಾಂಗ್ರೆಸ್‌ನ ಸಂಸ್ಕೃತಿ ಹಿಂದೂ ವಿರೋಧಿತನ. ತಾವು ಆರಂಭದಿಂದಲೂ ವಿಶ್ವಹಿಂದೂ ಪರಿಷತ್‌, ಆರ್‌ಎಸ್‌ಎಸ್‌ನಲ್ಲಿದ್ದವರು. ಆರ್‌ಎಸ್‌ಎಸ್‌ ದೇಶಾಭಿಮಾನವನ್ನು ಕಲಿಸುವ ಸಂಸ್ಥೆಯಾಗಿದೆ. ಆದರೆ ರಾಜ್ಯದ ಕಾಂಗ್ರೆಸ್‌ ನಾಯಕರು ಆರ್‌ಎಸ್‌ಎಸ್‌ನ್ನು ದೂಷಿಸುವುದು ಸರಿಯಲ್ಲ. ಕಾಂಗ್ರೆಸ್ಸಿಗರು ಹಿಂದೂ ವಿರೋಧಿಗಳು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಮುಖಂಡರು ಹಿಂದೂಗಳನ್ನು ವಿರೋಧಿಸುವುದೇ ತಮ್ಮ ನಿಲುವು ಎಂಬಂತೆ ವರ್ತಿಸುತ್ತಾರೆ. ಅಲ್ಲದೇ ಒಂದು ಕೋಮಿನ ಜನರ ಪರವಾಗಿ ದನಿಯಾಗಿದ್ದಾರೆ. ಇದು ಹಿಂದೂಗಳ ಮನಸ್ಸಿಗೆ ನೋವು ತರುವಂತಹುದು. ಇಂತಹ ಸಂಸ್ಕೃತಿ ಇರುವ ಕಾಂಗ್ರೆಸ್‌ನಲ್ಲಿ ಇರುವುದು ಸೂಕ್ತವಲ್ಲ ಎಂದು ನಿರ್ಧರಿಸಿ ತಾವು ಕಾಂಗ್ರೆಸ್‌ ಪಕ್ಷ ತ್ಯಜಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದೆ ಎಂದು ಲಕ್ಷ್ಮೇನಾರಾಯಣ್‌ ಹೇಳಿದರು.

ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿರುವ ಎಂ.ಡಿ.ಲಕ್ಷ್ಮೇನಾರಾಯಣ್‌ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದು ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದು ಶಾಸಕ ಮಸಾಲಾ ಜಯರಾಮ್‌ ಹೇಳಿದರು. ಎಂ.ಡಿ.ಎಲ್‌ರವರು ಸುಮಾರು 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಭಾವವಿರುವ ನಾಯಕರಾಗಿದ್ದಾರೆ. ಅವರ ಶಕ್ತಿಯನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳುವುದಲ್ಲದೇ ಬಿಜೆಪಿಯ ಮುಖಂಡರು ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವರು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಮುಂಬರುವ 2023ರ ಚುನಾವಣೆಯಲ್ಲಿ ಬಿಜೆಪಿ ಸುಮಾರು 150 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆದಿದೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯಗಳು ಆಗಿವೆ. ಇನ್ನೂ ಸುಮಾರು 200 ಕೋಟಿಯಷ್ಟುಅಭಿವೃದ್ಧಿ ಕಾರ್ಯಗಳು ಬಾಕಿ ಇವೆ. ಇವನ್ನು ನವೆಂಬರ್‌ 29ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬೊಮ್ಮಾಯಿಯವರಿಂದ ಪ್ರಾರಂಭಿಸುವುದಾಗಿ ಶಾಸಕರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಮಂಡಲದ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ತಾಲೂಕು ಮಾಜಿ ಅಧ್ಯಕ್ಷರಾದ ದೊಂಬರನಹಳ್ಳಿ ಬಸವರಾಜು, ದುಂಡ ರೇಣುಕಯ್ಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್‌, ಕಡೇಹಳ್ಳಿ ಸಿದ್ದೇಗೌಡ, ವಕೀಲರಾದ ಡಿ.ಟಿ.ರಾಜಶೇಖರ್‌, ಪಕ್ಷದ ಪಕ್ತಾರ ಮುದ್ದೇಗೌಡ, ಕೋಳಾಲ ಮಹೇಶ್‌, ವೆಂಕಟಾಪುರ ವೀರೇಂದ್ರ ಪಾಟೀಲ್‌, ಮುತ್ತುಗದಹಳ್ಳಿ ಕೆಂಪೇಗೌಡ, ವಿ.ಬಿ.ಸುರೇಶ್‌ ಸೇರಿದಂತೆ ಹಲವು ಮುಖಂಡರು ಎಂ.ಡಿ.ಲಕ್ಷಿತ್ರ್ಮೕನಾರಾಯಣ್‌ ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷ ಸಂಘಟನೆಗೆ ಹೆಚ್ಚು ಶಕ್ತಿ ತಂದಿದೆ ಎಂದರು.

ಮುಖಂಡರಾದ ಮುನಿಯೂರು ಮೂರ್ತಿ, ಮುನಿಯೂರು ಗ್ರಾಮ ಪಂಚಾಯ್ತಿ ಸದಸ್ಯ ಗೊಟ್ಟೀಕೆರೆ ಕಾಂತರಾಜು, ಡೊಂಕಿಹಳ್ಳಿ ಪ್ರಕಾಶ್‌, ಬಡಗರಹಳ್ಳಿ ರಾಮೇಗೌಡ, ಎಪಿಎಂಸಿ ಸದಸ್ಯ ಚಂದ್ರಣ್ಣ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೂಡಾರತ್ನ, ಅನಿತಾ ನಂಜುಂಡಯ್ಯ, ಶೋಭಾ, ಉಮಾರಾಜ್‌, ಜಯಶೀಲಾ, ಯಶೋಧರ್‌, ಕಣತೂರು ನಾಗೇಶ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ತಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಬಿಜೆಪಿ ಸೇರಿದ್ದೇನೆ. ತಮ್ಮ ಮೂಲ ಮಂತ್ರ ಕಾಂಗ್ರೆಸ್‌ ಸೋಲಿಸುವುದೇ ಆಗಿದೆ. ನೇಕಾರ ಸಮುದಾಯ ರಾಜ್ಯದ ಸುಮಾರು 58 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಬಿಜೆಪಿ ತಮಗೆ ರಾಜ್ಯದ 224 ಕ್ಷೇತ್ರಗಳ ಪೈಕಿ 58 ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಿದೆ. ಅಲ್ಲಿ ಬಿಜೆಪಿ ಗೆಲ್ಲಿಸುವುದೇ ತಮ್ಮ ಗುರಿಯಾಗಿದೆ. ಅದೇ ರೀತಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿರುವ ಹಾಲಿ ಶಾಸಕ ಮಸಾಲಾ ಜಯರಾಮ್‌ರನ್ನು ಪುನಃ ಶಾಸಕರನ್ನಾಗಿ ಮಾಡುವುದು ತಮ್ಮ ಉದ್ದೇಶವಾಗಿದೆ.

ಎಂ.ಡಿ.ಲಕ್ಷ್ಮೇನಾರಾಯಣ್‌ ಮಾಜಿ ಶಾಸಕ

click me!