ನಗರದ ಹೊರವಲಯದ ನಗರಪಾಲಿಕೆಗೆ ಸೇರಿದ ಸತ್ಯಮಂಗಲ ಕೆರೆ ಕಳೆದ ಕೆಲ ದಿನಗಳಿಂದ ಬಿದ್ದ ಮಳೆಗೆ ತುಂಬಿ ಕೋಡಿ ಬಿದ್ದ ಪರಿಣಾಮ ನಗರ ಶಾಸಕ ಜ್ಯೋತಿಗಣೇಶ್ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಕೆರೆಗೆ ಬಾಗಿನ ಅರ್ಪಿಸಿದರು.
ತುಮಕೂರು (ಅ.18): ನಗರದ ಹೊರವಲಯದ ನಗರಪಾಲಿಕೆಗೆ ಸೇರಿದ ಸತ್ಯಮಂಗಲ ಕೆರೆ ಕಳೆದ ಕೆಲ ದಿನಗಳಿಂದ ಬಿದ್ದ ಮಳೆಗೆ ತುಂಬಿ ಕೋಡಿ ಬಿದ್ದ ಪರಿಣಾಮ ನಗರ ಶಾಸಕ ಜ್ಯೋತಿಗಣೇಶ್ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಕೆರೆಗೆ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ನಗರದ 23ನೇ ವಾರ್ಡಿಗೆ ಸೇರಿದ ಸತ್ಯಮಂಗಲ ಕೆರೆ ತುಂಬಿ 25 ವರ್ಷಗಳೇ ಸಂದಿದ್ದು, ಈ ಬಾರಿ ಬಿದ್ದ ಬಾರಿ ಮಳೆಗೆ ಕೆರೆ ತುಂಬಿತ್ತು. ಆದರೆ ಕಳೆದ ಒಂದು ವಾರದಿಂದು ಸುರಿಯುತ್ತಿರುವ ಮಳೆಗೆ ಕೋಡಿ ಬಿದ್ದಿದೆ. ಇದರಿಂದಾಗಿ ಕೆರೆಗೆ ಹೇಮಾವತಿ ನೀರು ಹರಿಸಬೇಕೆಂಬ ಸ್ಥಳೀಯರು, ಜನಪ್ರತಿನಿಧಿಗಳ ಬೇಡಿಕೆಗೆ ವರುಣನೇ ಆಶೀರ್ವಾದ ಮಾಡಿದಂತಿದ್ದು, ಈ ಭಾಗದ ಜನಪ್ರತಿನಿಧಿಗಳ ಬೇಡಿಕೆಯಂತೆ ಗಾರೆ ನರಸಯ್ಯನ ಕಟ್ಟೆರೀತಿ, ಸತ್ಯಮಂಗಲ ಕೆರೆಯನ್ನು ಸಹ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ 23ನೇ ವಾರ್ಡಿನ ಕೌನ್ಸಿಲರ್ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ನಗರದ ಹೊರವಲಯದಲ್ಲಿರುವ ಸತ್ಯಮಂಗಲ ಕೆರೆಗೆ ಹೇಮಾವತಿ ನೀರು ತುಂಬಿಸಬೇಕೆಂಬ ಬೇಡಿಕೆಯನ್ನು ಹಲವಾರು ವರ್ಷಗಳಿಂದ ಈ ಭಾಗದ ಜನರು ಹಾಗೂ ಜನಪ್ರತಿನಿಧಿಗಳು ಪಾಲಿಕೆಗೆ ಸಲ್ಲಿಸುತ್ತಲೇ ಬಂದಿದ್ದೆವು. ಅದೃಷ್ಟವಶಾತ್ ಈ ವರ್ಷ ಮಳೆಯ ನೀರಿನಿಂದಲೇ ಕೆರೆ ತುಂಬಿದೆ. ಇದು ಅತ್ಯಂತ ಸಂತಸ ತಂದಿದೆ. ಇದರ ಜೊತೆಗೆ, ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂಬುದು ನಮ್ಮ ಕೋರಿಕೆ. ಈ ನಿಟ್ಟಿನಲ್ಲಿ ಈಗಾಗಲೇ ಸಣ್ಣ ನೀರಾವರಿ ಹಾಗೂ ಪಾಲಿಕೆಯೊಂದಿಗೆ ಮಾತನಾಡಿರುವುದಾಗಿ ಶಾಸಕರು ತಿಳಿಸಿದ್ದಾರೆ. ಜನರ ಕೋರಿಕೆಯಂತೆ ಇಂದು ಕೆರೆಗೆ ಬಾಗಿನ ಅರ್ಪಿಸಲಾಗಿದೆ. ಈ ಭಾಗದ ಜನರಲ್ಲಿ ಕೆರೆ ತುಂಬಿರುವುದು ಮಂದಹಾಸ ಮೂಡಿಸಿದೆ ಎಂದರು.
ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್ ಮಾತನಾಡಿ, ತುಮಕೂರಿಗೆ ಸಮೀಪವಿದ್ದರೂ ಈ ಭಾಗದ ಜನರು ಕೆರೆಗೆ ಹೇಮಾವತಿ ನೀರು ಹರಿಸಲು ಒತ್ತಾಯಿಸುತ್ತಿದ್ದರು. ಅಲ್ಲದೆ ಹಣ್ಣು, ತರಕಾರಿ ಬೆಳೆ ಬೆಳೆಯಲು ಕೊಳವೆ ಬಾವಿ ಕೊರೆಸಿ, ವಿಫಲವಾಗಿ ಹೈರಾಣಾಗಿದ್ದರು. ಆದರೆ ಅಮಾನಿಕೆರೆ ತುಂಬಿದ ನಂತರ ಕೊಳವೆ ಬಾವಿ ವೈಫಲ್ಯ ಕಡಿಮೆಯಾಗಿದೆ. ಅಲ್ಲದೆ ನಮ್ಮೂರಿನ ಕೆರೆಯೂ ತುಂಬಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆರೆಯ ನೀರು ಬೇಗ ಹಿಂಗಿ ಹೋಗದಂತೆ ಅಭಿವೃದ್ಧಿಪಡಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಸಕರಿಗೆ ಮನವರಿಕೆ ಮಾಡಲಾಗಿದೆ ಎಂದರು.
ಜಿ.ಬಿ.ಜ್ಯೋತಿಗಣೇಶ್ ಶಾಸಕರಾದ ನಂತರ ನಗರದ ಹೊರವಲಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ಸತ್ಯಮಂಗಲದಿಂದ ನವಿಲುಹಳ್ಳಿ, ವಡ್ಡರಹಳ್ಳಿ ಮೂಲಕ ಬೆಳಗುಂಬವರೆಗೆ ರಸ್ತೆ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಿದ್ದಾರೆ. ಅಲ್ಲದೆ ಜಗನ್ನಾಥಪುರದ ಮೂಲಕ ನವೀಲುಹಳ್ಳಿ ಕ್ರಾಸ್‌ವರೆಗೂ ಸಹ ರಸ್ತೆ ಅಭಿವೃದ್ಧಿಗೆ ಸದ್ಯದಲ್ಲಿಯೇ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸತ್ಯಮಂಗಲ ಜಗದೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಅಣೆತೋಟ ಶ್ರೀನಿವಾಸ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೋಟ....
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೆರೆಗಳ ಪುನಶ್ಚೇತನ ಯೋಜನೆಯ ನೆರವಿನಿಂದ ಹೂಳೆತ್ತಿ, ಕೆರೆ ಏರಿ ಭದ್ರಪಡಿಸಿ, ಸೌಂಧರ್ಯಕ್ಕೆ ಒತ್ತು ನೀಡಿದ ಪರಿಣಾಮ, ಇಷ್ಟುದೊಡ್ಡ ಮಳೆಯಾದರೂ ಆ ಭಾಗದಲ್ಲಿ ಪ್ರವಾಹ ಆಗುವುದನ್ನು ತಡೆ ಹಿಡಿದಿದೆ. ಅದೇ ರೀತಿ ತುಮಕೂರು ಪಾಲಿಕೆ ವ್ಯಾಪ್ತಿಗೆ ಸೇರಿದ ಇತರೆ ಕೆರೆಗಳನ್ನು ಅಭಿವೃದ್ಧಿಪಡಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಜೊತೆ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಡಿಪಿಆರ್ ತಯಾರಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಜಿ.ಬಿ.ಜ್ಯೋತಿ ಗಣೇಶ್, ಶಾಸಕ