ಬಿಜೆಪಿ ನೂತನ ಅಧ್ಯಕ್ಷರ ಮುಂದಿವೆ ಸಾಲು ಸಾಲು ಸವಾಲು!

By Kannadaprabha News  |  First Published Jan 13, 2020, 3:21 PM IST

ಚಿಕ್ಕಬಳ್ಳಾಪುರದ ನೂತನ ಬಿಜೆಪಿ ಅಧ್ಯಕ್ಷರಾಗಿ ರಾಮ ಲಿಂಗಪ್ಪ ಆಯ್ಕೆಯಾಗಿದ್ದು ಇದೀಗ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. 


ಚಿಕ್ಕಬಳ್ಳಾಪುರ [ಜ.15]:  ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ದಿನಗಳು ಆರಂಭವಾದ ಕಾಲದಲ್ಲಿ ನೂತನ ಸಾರಥಿಯಾಗಿ ರಾಮಲಿಂಗಪ್ಪ ಆಯ್ಕೆಯಾಗಿದ್ದಾರೆ. ಮುಂದಿನ  ದಿನಗಳಲ್ಲಿ ಜಿಲ್ಲೆಯಾದ್ಯಂತ ಪಕ್ಷವನ್ನು ಸಂಘಟಿಸುವಜೊತೆಗೆ ಇತರೆ ಕ್ಷೇತ್ರಗಳಲ್ಲಿ ಕಮಲ ಅರಳುವಂತೆ ನೋಡಿಕೊಳ್ಳುವ ಹೊಣೆ ನೂತನ ಅಧ್ಯಕ್ಷರ ಹೆಗಲೇರಿದೆ.

ಭಾನುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ರಾಮಲಿಂಗಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ನಿಕಟಪೂರ್ವ ಅಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ಅವರು ನೂತನ ಅಧ್ಯಕ್ಷರಿಗೆ ಈಗಾಗಲೇ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

Tap to resize

Latest Videos

ರಾಮಲಿಂಗಪ್ಪ ಹಿನ್ನೆಲೆ: ರಾಮಲಿಂಗಪ್ಪ ಅವರು ಜಿಲ್ಲೆಯವರೇ ಆಗಿದ್ದು, ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ತಾಲೂಕಿನ ಹಿಂದುಳಿದ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಪಾತಪಾಳ್ಯ ಗ್ರಾಮದವರು. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು, ಬೆಂಗಳೂರಿನಲ್ಲಿ ತಮ್ಮದೇ ಆದ ವ್ಯಾಪಾರದ ಮೂಲಕ ಹೆಸರು ಪಡೆದಿದ್ದಾರೆ. ಅಲ್ಲದೆ ಹಿಂದುಳಿದ ವರ್ಗಕ್ಕೆ ಸೇರಿದ ಬಲಿಜ ಸಮುದಾಯಕ್ಕೆ ಸೇರಿದ ರಾಮಲಿಂಗಪ್ಪ ಅವರು ಪ್ರಸ್ತುತ ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರಾಗಿದ್ದಾರೆ.

ನೂತನ ಅಧ್ಯಕ್ಷರಾಗಿರುವ ರಾಮಲಿಂಗಪ್ಪ ಅವರ ಮುಂದೆ ಹಲವು ಸವಾಲುಗಳಿವೆ. ಕೇವಲ ಒಂದು ತಿಂಗಳಲ್ಲಿ ಎದುರಾಗಲಿರುವ ನಗರಸಭಾ ಚುನಾವಣೆಯಲ್ಲಿ ಕಮಲ ಅರಳಿಸಬೇಕಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಎದುರಾಗಲಿರುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪರ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಬೇಕಿದೆ. ಜೊತೆಗೆ 2021ರಲ್ಲಿ  ಎದುರಾಗಲಿರುವ ತಾಪಂ ಮತ್ತು ಜಿಪಂ ಚುನಾವಣಯೆಲ್ಲಿಯೂ ಬಿಜೆಪಿ ಗೆಲ್ಲಿಸಬೇಕಿದೆ.

ಸಚಿವ ಸಂಪುಟದ ಜೊತೆ ಬಿಜೆಪಿ ನಾಯಕರಿಗೆ ಇನ್ನೊಂದು ಸಂಕಟ!..

ಸ್ಥಳೀಯ ಸಂಸ್ಥೆಗಳು ಕಮಲದ ಗೂಡಿಗೆ? ಡಾ.ಕೆ. ಸುಧಾಕರ್ ಅವರು ಕಾಂಗ್ರೆಸ್ ಶಾಸಕರಾಗಿದ್ದ ಅವಧಿಯಲ್ಲಿ ಜಿಲ್ಲೆಯ ಎಪಿಎಂಸಿ, ನಗರಸಭೆ, ಜಿಪಂ, ತಾಪಂ, ಟಿಎಪಿಎಂಸಿಎಸ್, ಪಿಎಲ್‌ಡಿ ಬ್ಯಾಂಕ್ ಸೇರಿದಂತೆ ಎಲ್ಲ  ಚುನಾವಣೆ ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಳೆದ 10 ವರ್ಷದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಕೋಚಿಮುಲ್ ಹೊರತುಪಡಿಸಿ ಎಲ್ಲ ಚುನಾವಣೆಗಳಲ್ಲಿಯೂ ಸುಧಾಕರ್ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದರು. ಆದರೆ ಪ್ರಸ್ತುತ ಸುಧಾಕರ್ ಅವರು ಬಿಜೆಪಿ ಶಾಸಕರಾಗಿದ್ದು, ಪ್ರಸ್ತುತ ಕಾಂಗ್ರೆಸ್ ವಶದಲ್ಲಿರುವ ಎಲ್ಲ ಅಧಿಕಾರ ಬಿಜೆಪಿ ಹಸ್ತಾಂತರವಾಗಬೇಕಿದೆ. ಇದರಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಶ್ರಮವೂ ಹೆಚ್ಚಿಗಿದ್ದು, ಶಾಸಕರು, ಸಂಸದರು ಮತ್ತು ಜಿಲ್ಲಾಧ್ಯಕ್ಷರ ನಡುವೆ ಸಮನ್ವಯದ ಅಗತ್ಯವಿದೆ. ಇದು ಸಾಧ್ಯವಾದಲ್ಲಿ ಜಿಲ್ಲೆಯ ಎಲ್ಲ ಚುನಾಯಿತ ಹುದ್ದೆಗಳಲ್ಲಿಯೂ ಕಮಲ ಅರಳುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

click me!