ಕರಾವಳಿಯ ಸ್ವಾಮೀಜಿಗಳ ಜೊತೆ ಜೆಪಿ ನಡ್ದಾ ಮಾತುಕತೆ, ಸಮಾನ ನಾಗರಿಕ ಸಂಹಿತೆಗೆ ಯತಿಗಳ ಬೇಡಿಕೆ

By Suvarna News  |  First Published Feb 20, 2023, 6:27 PM IST

ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಪರ್ಯಾಯ ಯತಿ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥರಿಂದ ಮಂತ್ರಾಕ್ಷತೆ ಸ್ವೀಕರಿಸಿದರು. ನಂತರ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಜೆ.ಪಿ. ನಡ್ಡಾ ಅವರೊಂದಿಗೆ ಕರಾವಳಿಯ ಯತಿವರೇಣ್ಯರು ಸಭೆ ನಡೆಸಿದರು. 


ಉಡುಪಿ (ಫೆ.20): ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಪರ್ಯಾಯ ಯತಿ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥರಿಂದ ಮಂತ್ರಾಕ್ಷತೆ ಸ್ವೀಕರಿಸಿದರು. ನಂತರ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಜೆ.ಪಿ. ನಡ್ಡಾ ಅವರೊಂದಿಗೆ ಕರಾವಳಿಯ ಯತಿವರೇಣ್ಯರು ಸಭೆ ನಡೆಸಿದರು. 

ಸಭೆಯಲ್ಲಿ ರಾಜ್ಯದ ಆಡಳಿತ ನಡೆಸುವ ಸರ್ಕಾರಗಳಿಂದ ಕರಾವಳಿಯ ಸಾಧು ಸಂತರಿಗೆ ಇರುವ ಅಪೇಕ್ಷೆಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮುಂದಿಟ್ಟರು. ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಉಸ್ತುವಾರಿ ಸಚಿವ ಅಂಗಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾ.ಪ್ರ.ಕಾರ್ಯದರ್ಶಿ ಸಿ.ಟಿ ರವಿ, ಇಂಧನ ಸಚಿವ ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ಮುಖಂಡರು ನಡ್ಡಾ ಅವರೊಂದಿಗೆ ಸಭೆಯಲ್ಲಿ ಹಾಜರಿದ್ದರು. 

Tap to resize

Latest Videos

ಸಭೆ ನಂತರ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, ಸನಾತನ ಧರ್ಮ‌ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡುವುದರ ಜೊತೆಗೆ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಚರ್ಚಿಸಲಾಯಿತು. 

ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ, ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗಬಾರದು. ಕರಾವಳಿಯ ಯುವಕರ ವಲಸೆಯನ್ನು ತಪ್ಪಿಸಲು ಉದ್ಯಮವನ್ನು ಸೃಷ್ಟಿಸುವ ಮತ್ತು ಕರಾವಳಿ ಪ್ರಗತಿಗೆ ಸಹಕಾರಿಯಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಕರಾವಳಿಯಲ್ಲಿ ಅತೀ ಹೆಚ್ಚು ಪ್ರಚಲಿತದಲ್ಲಿರುವ ತುಳು ಭಾಷೆಗೆ ಸರಕಾರ ಸೂಕ್ತ ಮಾನ್ಯತೆ ನೀಡಬೇಕು ಎಂದು ಕೇಳಿದ್ದೇವೆ. 

ದೇಶ ದ್ರೋಹಿ ಮತ್ತು ಉಗ್ರವಾದಿ ಚಟುವಟಿಕೆಗಳನ್ನು ಮಟ್ಟಹಾಕಬೇಕು, ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸಬೇಕು, ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಗೆ ತರುವುದರ ಜೊತೆಗೆ, ಗೋ ಸಂರಕ್ಷಣೆಗೆ ಪೂರಕ ಯೋಜನೆಗಳ ಮೂಲಕ ನೆರವು ನೀಡಬೇಕೆಂದು ಆಗ್ರಹಿಸಿದ್ದೇವೆ.

ಬಿಜೆಪಿ ವಿಕಾಸದ ಸಂಕೇತ, ಕಾಂಗ್ರೆಸ್‌ ಎಂದರೆ ಕಮಿಷನ್‌: ಜೆ.ಪಿ.ನಡ್ಡಾ ವಾಗ್ದಾಳಿ

ಭ್ರಷ್ಟಾಚಾರ ಮುಕ್ತ, ಸ್ವಚ್ಛ , ಪಾರದರ್ಶಕ ಆಡಳಿತ ನೀಡಬೇಕು, ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೇವೆ ಎಂದು ತಿಳಿಸಿದರು.

ಇಂದು, ನಾಳೆ ಕರ್ನಾಟಕದಲ್ಲಿ ಜೆ.ಪಿ.ನಡ್ಡಾ ಸಮಾವೇಶ

ಸಭೆಯಲ್ಲಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ, ಕುಕ್ಕೆ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ, ಉಡುಪಿ ಬೈಲೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದ, ಚಿತ್ರಾಪುರ ಮಠದ ಶ್ರೀ ವಿದ್ಯಾಯೇಂದ್ರ, ಮೂಡಬಿದ್ರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ, ಮಾಣಿಲ ಶ್ರೀ ಮೋಹನದಾಸ, ಆನೆಗುಂದಿ ಸ್ವರಸ್ವತಿ ಪೀಠಂ ನ ಶ್ರೀ ಕಾಳ ಹಸ್ತೇಂದ್ರ ಸರಸ್ವತಿ, ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

click me!