ನನ್ನನ್ನೂ ಮಂತ್ರಿ ಮಾಡಿ: ಸೋಮಶೇಖರ ರೆಡ್ಡಿ

By Kannadaprabha News  |  First Published Jul 30, 2021, 11:23 AM IST

* ಕೇಂದ್ರ ನಾಯಕರನ್ನು ಭೇಟಿ ಮಾಡಿ ಮಂತ್ರಿಗಿರಿಗೆ ಮೊರೆ ಇಟ್ಟ ಶಾಸಕ
* ಬಳ್ಳಾರಿ ಜಿಲ್ಲೆಯ ಕೋಟಾದಲ್ಲಿ ಮಂತ್ರಿ ಮಾಡುವಂತೆ ಕೋರಿಕೆ
* ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬಹುದು ಎಂಬ ಒತ್ತಾಸೆ ನನ್ನದು
 


ಬಳ್ಳಾರಿ(ಜು.30): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಲು ರಾಜ್ಯದ ವಿವಿಧ ಶಾಸಕರು ನಾನಾ ಕಸರತ್ತು ನಡೆಸುತ್ತಿರುವಾಗಲೇ ಬಳ್ಳಾರಿ ನಗರ ಶಾಸಕ ಸಹ ಸಚಿವ ಸ್ಥಾನ ಕೋರಿ ದೆಹಲಿ ನಾಯಕರನ್ನು ಭೇಟಿ ಮಾಡಿ, ನನಗೂ ಮಂತ್ರಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಚಿವ ಸ್ಥಾನ ನೀಡುವಂತೆ ಕೋರಿ ಬೆಂಗಳೂರಿಗೆ ತೆರಳಿದ್ದ ಶಾಸಕ ರೆಡ್ಡಿ, ದೆಹಲಿಯ ವೀಕ್ಷಕರಾಗಿ ಆಗಮಿಸಿದ್ದ ಧಮೇಂದ್ರ ಪ್ರಧಾನ್‌, ಕಿಷನ್‌ ರೆಡ್ಡಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತಿತರ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನ ಆಸೆ ಮುಂದಿಟ್ಟಿದ್ದಾರೆ.

Tap to resize

Latest Videos

undefined

ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕಾಗಿದ್ದು, ಅದನ್ನು ನನಗೆ ನೀಡಿ. ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿರುವ ನಮ್ಮನ್ನು ಸಚಿವರಾಗಿ ಕೆಲಸ ಮಾಡುವ ಅವಕಾಶ ಕೊಡಿ ಎಂದು ಕೇಂದ್ರದ ನಾಯಕರನ್ನು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬೊಮ್ಮಾಯಿ ಪದಗ್ರಹಣಕ್ಕೆ ಗೈರು: ಶ್ರೀರಾಮುಲು ಮುನಿಸಿಗೆ ಕಾರಣವೇನು?

ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು ಮಾತ್ರ ಬಿಜೆಪಿ ಶಾಸಕರಿದ್ದಾರೆ. ಸಿರುಗುಪ್ಪ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಮೂರು ಬಾರಿ ಶಾಸಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಇದೇ ಸಮುದಾಯದ ಬಾಲಚಂದ್ರ ಜಾರಕಿಹೊಳಿ, ಶ್ರೀರಾಮುಲು, ಶಿವನಗೌಡ ನಾಯಕ್‌, ರಾಜುಗೌಡ ನಾಯಕ್‌ ಅವರು ಸಚಿವ ಸ್ಥಾನಕ್ಕೆ ಮುಂಚೂಣಿಯ ಪ್ರಯತ್ನದಲ್ಲಿದ್ದಾರೆ. ನಾಯಕ ಸಮುದಾಯದಲ್ಲಿ ಪ್ರಭಾವಿಗಳು ಎನಿಸಿದ ಶ್ರೀರಾಮುಲು, ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತ ಎನ್ನಲಾಗುತ್ತಿದ್ದು, ಈ ಇಬ್ಬರಿಗೆ ಅವಕಾಶ ಸಿಕ್ಕರೆ ಸೋಮಲಿಂಗಪ್ಪ ಅವರನ್ನು ಪಕ್ಷ ಪರಿಗಣಿಸುವುದಿಲ್ಲ. ಹೀಗಾಗಿ ಬಳ್ಳಾರಿ ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂಬುದು ಶಾಸಕ ರೆಡ್ಡಿ ಆಪ್ತರು ಹಾಗೂ ಬೆಂಬಲಿಗರ ಲೆಕ್ಕಾಚಾರ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯ ಕಮಲ ಅರಳಲು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿಯವರದ್ದೂ ಹೆಚ್ಚಿನ ಶ್ರಮವಿದೆ. ಪ್ರತಿ ಚುನಾವಣೆಯಲ್ಲೂ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುವ ಹಾಗೂ ಅಭ್ಯರ್ಥಿಗಳನ್ನು ಚುನಾಯಿಸಿಕೊಳ್ಳಲು ಸಾಕಷ್ಟುಕೆಲಸ ಮಾಡುವ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಸಚಿವರನ್ನಾಗಿಸಬೇಕು ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.

ಶಾಸಕ ರೆಡ್ಡಿ ಬೆಂಗಳೂರಿಗೆ ತೆರಳಿ ಕೇಂದ್ರದ ನಾಯಕರನ್ನು ಭೇಟಿ ಮಾಡಿ, ಸಚಿವ ಸ್ಥಾನಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಂತೆಯೇ ಇತ್ತ ಬೆಂಬಲಿಗರು, ಸಾಮಾಜಿಕ ಜಾಲತಾಣಗಳ ಮೂಲಕ ಶಾಸಕ ಜಿಎಸ್ಸಾರ್‌ ಮಂತ್ರಿ ಮಾಡಿ ಎಂಬ ಕೂಗು ಮೊಳಗಿಸಿದ್ದಾರೆ. ಜಿಲ್ಲೆಯ ಭಾಗಶಃ ಬಿಜೆಪಿ ನಾಯಕರು ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಮಂತ್ರಿ ಮಾಡಬೇಕು ಎಂಬ ಒತ್ತಾಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದ್ದು, ರೆಡ್ಡಿಗೆ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ.
ಎಲ್ಲ ಶಾಸಕರಂತೆ ನನಗೂ ಸಚಿವನಾಗಬೇಕು ಎಂಬ ಆಸೆ ಇದೆ. ನಾನು ಸಹ ಪ್ರಯತ್ನದಲ್ಲಿರುವುದು ನಿಜ. ಸಚಿವನಾದರೆ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬಹುದು ಎಂಬ ಒತ್ತಾಸೆ ನನ್ನದು. ಹೀಗಾಗಿ ಕೇಂದ್ರದ ನಾಯಕರಲ್ಲಿ ಮನವಿ ಮಾಡಿಕೊಂಡಿರುವೆ. ಉಳಿದದ್ದು ದೆಹಲಿ ನಾಯಕರ ಕೃಪೆ ಹಾಗೂ ದೈವೀಚ್ಛೆ ಎಂದು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ. 

click me!